ಹಾವೇರಿ: ನಗರಕ್ಕೆ ಕುಡಿಯುವ ನೀರು ಒದಗಿಸುವ ಹೆಗ್ಗೇರಿ ಕೆರೆಗೆ ಜಲಕಳೆ ಬಂದಿದೆ. ಅಪ್ಪರ್ ತುಂಗಾ ಮೇಲ್ದಂಡೆ (ಯುಟಿಪಿ) ಹಾಗೂ ಚೌಡದಾನಪುರ ಏತ ನೀರಾವರಿ ಯೋಜನೆಗಳ ಕಾಲುವೆ ಮೂಲಕ ಕೆರೆಗೆ ನೀರು ಹರಿಸಲಾಗುತ್ತಿದ್ದು, ಈಗಾಗಲೇ ಶೇ 65ರಷ್ಟು ಕೆರೆ ಭರ್ತಿಯಾಗಿದೆ.
ಸುಮಾರು 682 ಎಕರೆ ಪ್ರದೇಶದಲ್ಲಿರುವ ಕೆರೆಯಲ್ಲಿ ನೀರಿನ ಪ್ರಮಾಣ ಕ್ರಮೇಣ ಹೆಚ್ಚಳವಾಗುತ್ತಿದೆ. 2019ರಲ್ಲಿ ಕೋಡಿ ಬಿದ್ದಿದ್ದ ಕೆರೆ, ನಂತರದ ವರ್ಷಗಳಲ್ಲಿ ಸೋರಗಿತ್ತು. ಈ ಬಾರಿ ಕೆರೆ, ತಿಂಗಳೊಳಗೆ ಕೋಡಿ ಬೀಳುವ ಮುನ್ಸೂಚನೆ ನೀಡುತ್ತಿದೆ.
ಕೆರೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದರೆ 12 ಅಡಿಯಷ್ಟು ನೀರು ನಿಲ್ಲುತ್ತದೆ. 0.2 ಟಿ.ಎಂ.ಸಿ ಸಾಮರ್ಥ್ಯದ ಕೆರೆಯಲ್ಲಿ ಸದ್ಯ ಉತ್ತಮ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಯುಟಿಪಿ ಕಾಲುವೆ ನೀರು ಸಹ ನಿರಂತರವಾಗಿ ಹರಿಯುತ್ತಿದ್ದು, ಇದರ ಜೊತೆಯಲ್ಲಿ ಚೌಡದಾನಪುರ ಏತ ನೀರಾವರಿ ಯೋಜನೆಯ ನೀರು ಸಹ ಕೆರೆ ಸೇರುತ್ತಿದೆ. ಇದರಿಂದಾಗಿ ಕೆರೆ, ದಿನ ಕಳೆದಂತೆ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ.
ನಗರದ ಐತಿಹಾಸಿಕ ಕೆರೆಗಳಲ್ಲಿ ಒಂದಾದ ಹೆಗ್ಗೇರಿ ಕೆರೆಗೆ ಯುಟಿಪಿ ಕಾಲುವೆ ಮೂಲಕ ಜುಲೈ 17ರಿಂದ ನಿರಂತರವಾಗಿ ನೀರು ಹರಿಸಲಾಗುತ್ತಿತ್ತು. ಆದರೆ, ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇದನ್ನು ಗಮನಿಸಿದ್ದ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು, ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ನೀರು ಸಮಪ್ರಮಾಣದಲ್ಲಿ ಹರಿದುಬರಲು ವ್ಯವಸ್ಥೆ ಮಾಡಿದ್ದಾರೆ. ಈಗ, ನಿಗದಿತ ಪ್ರಮಾಣದಲ್ಲಿ ಯುಟಿಪಿ ನೀರು ಕೆರೆಗೆ ಸೇರುತ್ತಿದೆ.
ಕಳೆದ ವರ್ಷ ಮಳೆ ಅಭಾವದಿಂದಾಗಿ ಹೆಗ್ಗೇರಿ ಕೆರೆಯಲ್ಲಿ ಸ್ವಲ್ಪ ನೀರಿತ್ತು. ಅದೇ ನೀರನ್ನು ಶುದ್ಧೀಕರಣ ಮಾಡಿ, ಹಾವೇರಿ ನಗರಕ್ಕೆ ವಿತರಿಸಲಾಗುತ್ತಿತ್ತು. ಈ ಬಾರಿ ಮಳೆ ಪ್ರಮಾಣ ಕಡಿಮೆಯಾದರೆ, ಪೂರ್ತಿ ನೀರು ಖಾಲಿಯಾಗಬಹುದೆಂಬ ಚಿಂತೆ ಕಾಡುತ್ತಿತ್ತು. ಆದರೆ, ಮಳೆ ಪ್ರಮಾಣ ಉತ್ತಮವಾಗಿದೆ. ಯುಟಿಪಿ ಕಾಲುವೆಯಿಂದಲೂ ನೀರು ಹರಿಸಲಾಗುತ್ತಿದೆ. ಕೆರೆಯಲ್ಲಿ ನೀರಿನ ಸಂಗ್ರಹ ಕ್ರಮೇಣ ಹೆಚ್ಚಳವಾಗುತ್ತಿದ್ದು, ಕುಡಿಯುವ ನೀರಿಗೆ ಕೆರೆಯನ್ನೇ ನಂಬಿರುವ ಜನರು ನಿಟ್ಟುಸಿರು ಬಿಡುವಂತಾಗಿದೆ.
‘ಹೆಗ್ಗೇರಿ ಕೆರೆ ನೀರಿಲ್ಲದೇ ಬಹುತೇಕ ಒಣಗುವ ಹಂತಕ್ಕೆ ಬಂದಿತ್ತು. ಇದೀಗ, ಯುಟಿಪಿ ಕಾಲುವೆ ಹಾಗೂ ಚೌಡದಾನಪುರ ಏತ ನೀರಾವರಿ ಯೋಜನೆ ಮೂಲಕ ಕೆರೆಗೆ ನೀರು ಹರಿಸಲಾಗುತ್ತಿದೆ. ಈಗಾಗಲೇ ಶೇ 65ರಷ್ಟು ನೀರು ಭರ್ತಿ ಆಗಿದೆ. ಯುಟಿಪಿಯಿಂದ ನವೆಂಬರ್ ಅಂತ್ಯದವರೆಗೂ ನೀರು ಪಡೆಯಲು ಅವಕಾಶವಿದ್ದು, ಕೆರೆ ಕೋಡಿ ಬೀಳುವ ಸಾಧ್ಯತೆಯೂ ಇದೆ’ ಎಂದು ನಗರಸಭೆ ಮಾಜಿ ಅಧ್ಯಕ್ಷರೂ ಆಗಿರುವ ಹಾಲಿ ಸದಸ್ಯ ಗಣೇಶ ಬಿಷ್ಟಣ್ಣನವರ ‘ಪ್ರಜಾವಾಣಿ’ಗೆ ತಿಳಿಸಿದರು.
‘ತಾಂತ್ರಿಕ ಸಮಸ್ಯೆಯಿಂದ ಭೂ ಕೊಡಿಹಳ್ಳಿಯ ಬಳಿ ಕೆರೆಯ ಕೊಡಿ ಹತ್ತಿರ ಯುಟಿಪಿ ನೀರಿನ ಹರಿವು ಇಳಿಕೆಯಾಗಿತ್ತು. ಎಂಜಿನಿಯರ್ ಜೊತೆ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆ ಬಗೆಹರಿಸಿದ ನಂತರ ನೀರು ಸರಾಗವಾಗಿ ಬರುತ್ತಿದೆ. ಕೆರೆಯ ತಗ್ಗಿನ ಪ್ರದೇಶದಲ್ಲಿ ನೀರು ಸಂಗ್ರಹವಾಗುತ್ತಿದ್ದು, ಅಕ್ಕ–ಪಕ್ಕದಲ್ಲಿ ವ್ಯಾಪಿಸುತ್ತಿದೆ. ಇದೇ ಸ್ಥಿತಿ ಮುಂದುವರಿದರೆ, ತಿಂಗಳ ಒಳಗಾಗಿ ಕೆರೆ ಕೋಡಿ ಬೀಳಬಹುದು. ಕೆರೆ ಪೂರ್ಣ ಭರ್ತಿಯಾದರೆ, ಹಾವೇರಿಗೆ ಎರಡು ವರ್ಷ ಕುಡಿಯುವ ನೀರು ಪೂರೈಸಬಹುದು’ ಎಂದರು.
ಹೆಗ್ಗೇರಿ ಕೆರೆ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಿದೆ. ಕಡಿಮೆ ವೇಗದ ಬೋಟ್‌ಗಳನ್ನು ಬಿಟ್ಟು ಪ್ರವಾಸಿ ತಾಣ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆಗಣೇಶ ಬಿಷ್ಟಣ್ಣನವರ ನಗರ ಸಭೆ ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.