ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ನಾಡಿನತ್ತ ಕಾಡುಪ್ರಾಣಿಗಳ ಲಗ್ಗೆ!

6 ವರ್ಷಗಳಲ್ಲಿ 53 ಸಾಕುಪ್ರಾಣಿ ಹತ್ಯೆ: ಅರಣ್ಯ ಇಲಾಖೆಯಿಂದ ₹1.21 ಕೋಟಿ ಪರಿಹಾರ ಪಾವತಿ
Last Updated 7 ಫೆಬ್ರುವರಿ 2022, 5:35 IST
ಅಕ್ಷರ ಗಾತ್ರ

ಹಾವೇರಿ: ಕಾಡುಪ್ರಾಣಿಗಳು ಬೇಸಿಗೆಯಲ್ಲಿ ಆಹಾರ ಅರಸಿಕೊಂಡು ನಾಡಿನತ್ತ ಲಗ್ಗೆ ಇಡುವುದು ಸಾಮಾನ್ಯವಾಗಿದೆ. ಹೀಗೆ ದಾಳಿ ಇಡುವ ಮೂಲಕ ಬೆಳೆ ನಾಶ, ಸಾಕು ಪ್ರಾಣಿಗಳ ಹತ್ಯೆ, ಜೀವಹಾನಿಗೂ ಕಾರಣವಾಗುತ್ತಿವೆ.

ಅರಣ್ಯ ನಾಶ, ಅರಣ್ಯ ಪ್ರದೇಶ ಒತ್ತುವರಿ, ಕಾಡುಗಳಲ್ಲಿ ಮಾನವನ ಹಸ್ತಕ್ಷೇಪ, ಅಕ್ರಮ ಗಣಿಗಾರಿಕೆ, ನಿಸರ್ಗದಲ್ಲಿ ಅಭಿವೃದ್ಧಿ ಕಾಮಗಾರಿಗಳ ಗದ್ದಲ, ಕಾಡುಗಳಲ್ಲಿ ನೀರು ಮತ್ತು ಆಹಾರದ ಕೊರತೆ ಮುಂತಾದ ಕಾರಣಗಳಿಂದ ವನ್ಯಜೀವಿಗಳು ತಮ್ಮ ನೆಲೆಗಳನ್ನು ಕಳೆದುಕೊಂಡು ನಾಡಿನತ್ತ ನುಗ್ಗುತ್ತಿವೆ.

ಮಾನವ–ವನ್ಯಜೀವಿ ಸಂಘರ್ಷಕ್ಕೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಆರು ವರ್ಷಗಳಲ್ಲಿ 53 ಸಾಕುಪ್ರಾಣಿಗಳು ಹತ್ಯೆಯಾಗಿದ್ದು,ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಬರೋಬ್ಬರಿ 3895 ಬೆಳೆ ಹಾನಿ ಪ್ರಕರಣಗಳು ದಾಖಲಾಗಿದ್ದು, ಅರಣ್ಯ ಇಲಾಖೆಯಿಂದ ₹1.21 ಕೋಟಿ ಪರಿಹಾರ ನೀಡಲಾಗಿದೆ.

ಕರ್ನಾಟಕ ಅರಣ್ಯ ಇಲಾಖೆಯ ಹಾವೇರಿ ವಿಭಾಗದಲ್ಲಿ ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಹಿರೇಕೆರೂರು, ಹಾನಗಲ್‌, ದುಂಡಶಿ ಹಾಗೂ ವನ್ಯಜೀವಿ ರಾಣೆಬೆನ್ನೂರು ಸೇರಿ ಒಟ್ಟು ಏಳು ವಲಯಗಳಿವೆ. ಮಾನವ–ವನ್ಯಜೀವಿ ಸಂಘರ್ಷವನ್ನು ತಪ್ಪಿಸಲು ಅರಣ್ಯ ಇಲಾಖೆ ವಿವಿಧ ಕ್ರಮಗಳನ್ನು ಕೈಗೊಂಡರೂ, ಪ್ರತಿ ವರ್ಷ ದಾಖಲಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ.

ಆತ್ಮರಕ್ಷಣೆಗಾಗಿ ಚಿರತೆ ಹತ್ಯೆ
ರಟ್ಟೀಹಳ್ಳಿ:
ತಾಲ್ಲೂಕಿನ ಕಡೂರ, ಬುಳ್ಳಾಪುರ, ಕಣವಿಶಿದ್ದೇಗೇರಿ, ನಾಗವಂದ, ಜೋಕನಾಳ, ಪರ್ವತಶಿದ್ಗೇರಿ ಗ್ರಾಮಗಳಿಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶಗಳಲ್ಲಿ ಕರಡಿ, ಚಿರತೆ, ಕೃಷ್ಣಮೃಗ, ಕಾಡುಹಂದಿ, ಮುಳ್ಳುಹಂದಿಗಳು ಕಂಡು ಬರುತ್ತವೆ.ತಾಲ್ಲೂಕಿನ ಬುಳ್ಳಾಪುರ ಗ್ರಾಮದಲ್ಲಿ ರೈತರಿಬ್ಬರು ರಾತ್ರಿ ವೇಳೆ ಹೊಲದಲ್ಲಿ ನೀರು ಹಾಯಿಸುವ ಸಂದರ್ಭ ದಾಳಿ ಮಾಡಿದ ಚಿರತೆಯನ್ನು ಆತ್ಮರಕ್ಷಣೆಗಾಗಿ ಹತ್ಯೆ ಮಾಡಿದ್ದ ಘಟನೆಯನ್ನು ನೆನಪಿಸಿಕೊಳ್ಳಬಹುದು.

ಆಹಾರ–ನೀರು ಒದಗಿಸಿ
ಸವಣೂರ:
ಮಳೆಗಾಲ ಪ್ರಾರಂಭವಾಗಿ ರೈತರ ಜಮೀನುಗಳಲ್ಲಿ ಬೆಳೆ ಮೊಳಕೆಯೊಡೆದು ಭೂಮಿಯಿಂದ ಮೆಲೆ ಬರುತ್ತಿದ್ದಂತೆ ಕೃಷ್ಣಮೃಗ, ಜಿಂಕೆಗಳು ಜಮೀನುಗಳಿಗೆ ನುಗ್ಗಿ ಬೆಳೆಯ ಚಿಗುರನ್ನು ತಿನ್ನುತ್ತಿವೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಗ್ರಾಮಗಳತ್ತ ನೀರಿಗಾಗಿ ಜಿಂಕೆಗಳು ಆಗಮಿಸುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಕಾಡು ಪ್ರಾಣಿಗಳಿಗೆ ಅರಣ್ಯದಲ್ಲಿ ಆಹಾರ ಮತ್ತು ನೀರು ಯಥೇಚ್ಚವಾಗಿ ಸಿಗುವಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿ ಎಂಬುದು ರೈತರ ಒತ್ತಾಯವಾಗಿದೆ.

ಕೂಲಿ ಕಾರ್ಮಿಕರಿಗೆ ಚಿರತೆ ಭಯ
ಬ್ಯಾಡಗಿ:
ಚಿರತೆಯೊಂದು ಈ ಹಿಂದೆ ಚಿನ್ನಿಕಟ್ಟಿ, ಮತ್ತೂರು ಭಾಗದಲ್ಲಿ ಕಾಣಿಸಿಕೊಂಡಿದ್ದು ರೈತರಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು.ಕೃಷಿ ಕೆಲಸಗಳಿಗೆ ತೆರಳಿದ ರೈತ ಕಾರ್ಮಿಕರು ಭಯದಲ್ಲಿಯೇ ಕೆಲಸ ಮಾಡಬೇಕಾಗಿದೆ. ಹೀಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ರೈತ ಮುಖಂಡ ಕಿರಣಕುಮಾರ ಗಡಿಗೋಳ ಹೇಳಿದರು.

‘ತಾಲ್ಲೂಕಿನ ಛತ್ರ ಹಾಗೂ ಚಿನ್ನಿಕಟ್ಟಿ ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಚಿರತೆಯನ್ನು ಸೆರೆ ಹಿಡಿದು ದಾಂಡೇಲಿ ಅಭಯಾರಣ್ಯಕ್ಕೆ ಬಿಡಲಾಗಿದೆ.ಯಾವ ವನ್ಯ ಪ್ರಾಣಿಯೂ ಜನರ ತಂಟೆಗೆ ಹೋಗುವುದಿಲ್ಲ. ಅವು ಆಹಾರಕ್ಕಾಗಿ ಅಲ್ಲಲ್ಲಿ ಅಲೆಯವುದು ಸಹಜ’ ಎಂದು ವಲಯ ಅರಣ್ಯಾಧಿಕಾರಿ ಮಹೇಶ ಮರೆಣ್ಣನವರ ಹೇಳಿದರು.

ಕೃಷ್ಣಮೃಗಗಳ ಹಾವಳಿಗೆ ಬೆಳೆ ಹಾಳು
ರಾಣೆಬೆನ್ನೂರು:
ತಾಲ್ಲೂಕಿನಲ್ಲಿ ಕೃಷ್ಣಮೃಗಗಳು ಹಾಗೂ ಕಾಡು ಹಂದಿಗಳು ಮುಂಗಾರು ಹಂಗಾಮಿನಲ್ಲಿ ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ.ಈರುಳ್ಳಿ, ಶೇಂಗಾ, ಹೆಸರು ಬಿತ್ತನೆ ಸಂದರ್ಭದಲ್ಲಿ ಕೃಷ್ಣಮೃಗಗಳು ದಾಳಿ ಮಾಡುತ್ತವೆ. ಕಾಡು ಹಂದಿಗಳು ಮೆಕ್ಕೆಜೋಳ, ಸೂರ್ಯಕಾಂತಿ ಸೇರಿದಂತೆ ಯಾವುದೇ ಬೀಜ ಬಿತ್ತನೆ ಮಾಡಿದ ಒಂದೇ ದಿನಕ್ಕೆ ಎಲ್ಲಾ ಬೀಜಗಳನ್ನು ಗೂರುತ್ತವೆ ಎನ್ನುತ್ತಾರೆ ರೈತ ಮುಖಂಡ ಹನುಮಂತಪ್ಪ ಕಬ್ಬಾರ ಹಾಗೂ ಶ್ರೀನಿವಾಸ ಪುರದ ರಮೇಶ ನಾಯಕ.

ಬಿತ್ತನೆ ಮಾಡಿದ ಕೆಲ ದಿನ ರೈತರು ಕಾಡು ಪ್ರಾಣಿ ಹಾವಳಿ ತಪ್ಪಿಸಲು ಹಗಲು ರಾತ್ರಿ ಕಾಯುತ್ತಾರೆ. ಕೆಲವು ಸಿಡಿಮದ್ದುಗಳನ್ನು ಸಿಡಿಸುತ್ತಾರೆ. ಪ್ಲಾಸ್ಟಿಕ್‌ ಚೀಲ ಕಟ್ಟುತ್ತಾರೆ. ಬೆದರು ಗೊಂಬೆಗಳನ್ನು ನಿಲ್ಲಿಸುತ್ತಾರೆ. ಹೊಲದ ಸುತ್ತಲೂ ಹಳೆಯ ಸೀರೆಗಳನ್ನು ಕಟ್ಟಿ ಬೇಲಿ ಮಾಡಿಕೊಳ್ಳುತ್ತಾರೆ.

ಕಂದಕ ನಿರ್ಮಾಣದಿಂದ ಆನೆ ನಿಯಂತ್ರಣ
ಹಾನಗಲ್:
ಮುಂಡಗೋಡ ಅರಣ್ಯ ಭಾಗದಿಂದ ಲಗ್ಗೆಯಿಡುವ ಆನೆಗಳ ದಾಳಿಗೆ ಹಾನಗಲ್ ತಾಲ್ಲೂಕಿನ ಕಬ್ಬು, ಭತ್ತದ ಗದ್ದೆ ಮತ್ತು ಬಾಳೆ ತೋಟಗಳು ನಾಶವಾಗುತ್ತಿವೆ.ಆನೆ ಹಿಮ್ಮೆಟ್ಟಿಸಲು ತಾತ್ಕಾಲಿಕ ವ್ಯವಸ್ಥೆಗೆ ಸೀಮಿತವಾಗಿರುವ ಅರಣ್ಯ ಇಲಾಖೆ ‘ಆನೆ ಕಾರಿಡಾರ್‌’ ಗುರುತಿಸಿ ಕಂದಕಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂಬುದು ಇಲ್ಲಿನ ರೈತರ ಬಹುದಿನದ ಒತ್ತಾಯವಾಗಿದೆ.

‘ಗುಡಗುಡಿ, ದಶರಥಕೊಪ್ಪ ಮತ್ತು ಈ ಭಾಗದ ಗ್ರಾಮಗಳ ಜನರು ಕರಡಿ ದಾಳಿಗೆ ಘಾಸಿಗೊಂಡ ಘಟನೆಗಳು ನಡೆಯುತ್ತಿರುತ್ತವೆ. ಇದೇ ರೀತಿ ಆಕಸ್ಮಿಕವಾಗಿ ಗ್ರಾಮಕ್ಕೆ ಬರುವ ಜಿಂಕೆ, ಸಾರಂಗಗಳು ಬೀದಿ ನಾಯಿ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಳುತ್ತಿವೆ. ಈ ಬಗ್ಗೆಯೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ವನ್ಯಜೀವಿ ಪ್ರೇಮಿ ಮಧುಮತಿ ಪೂಜಾರ ಆಗ್ರಹಿಸುತ್ತಾರೆ.

ಆನೆ ಹೆಜ್ಜೆಗೆ ಬೆಳೆ ನಜ್ಜುಗುಜ್ಜು
ಶಿಗ್ಗಾವಿ:
ತಾಲ್ಲೂಕಿನ ಜೊಂಡಲಗಟ್ಟಿ, ಅರಟಾಳ, ದುಂಡಸಿಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಿಂದ ಆನೆಗಳು ತಮ್ಮ ಮರಿಗಳೊಂದಿಗೆ ನೀರು, ಆಹಾರಕ್ಕಾಗಿ ನಾಡಿನತ್ತ ವಲಸೆ ಬರುತ್ತಿವೆ. ಕೋಣನಕೇರಿ, ಚಂದಾಪುರ ಸುತ್ತಲು ಕಬ್ಬಿನ ಬೆಳೆ ನಾಶಪಡಿಸಿವೆ. ನಷ್ಟದಿಂದ ರೈತ ಸಮೂಹ ತತ್ತರಿಸಿ ಹೋಗಿದೆ. ಅಲ್ಲದೆ ಸಾರ್ವಜನಿಕರು ಪ್ರಾಣ ಭಯದಿಂದ ಓಡಾಡಲು ಹಿಂಜರಿಯುತ್ತಿದ್ದಾರೆ.

‘ಅರಣ್ಯ ಇಲಾಖೆ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಸರತಿಯಂತೆ ಕೆಲಸ ಮಾಡುತ್ತಿದ್ದಾರೆ. ಆಧುನಿಕ ಆಯುಧಗಳ ಕೊರತೆ, ಆನೆ ಪಳಗಿಸುವ ಪರಿಣತರ ಕೊರತೆ ಕಾಡುತ್ತಿದೆ. ಆದರೂ ಸಹ ಲಭ್ಯವಿರುವ ಸಿಬ್ಬಂದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ದುಂಢಸಿ ಅರಣ್ಯ ವಲಯ ಅಧಿಕಾರಿ ರಮೇಶ ಶೇತಸನದಿ ಹೇಳಿದರು.

ಗುಡ್ಡ ಕರಗಿಸಿ ಸಾಗುವಳಿ!
ಹಿರೇಕೆರೂರು:
ತಾಲ್ಲೂಕಿನಲ್ಲಿ ಗುಡ್ಡಗಳ ಕಾಡು ಕಡಿದು ಸಾಗುವಳಿ ಮಾಡುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಪರಿಣಾಮ ಕಾಡು ಪ್ರಾಣಿಗಳು ಸುರಕ್ಷಿತ ನೆಲೆ ಸಿಗದೇ ನಾಡಿನತ್ತ ಬರುತ್ತಿವೆ. ಹೀಗೆ ಬರುವ ವನ್ಯಮೃಗಗಳ ಪೈಕಿ ಚಿರತೆಗಳ ಸಂಖ್ಯೆ ಹೆಚ್ಚಿದೆ.

ವರಹ, ನಿಡನೇಗಿಲು ಗ್ರಾಮಗಳ ಗುಡ್ಡಗಳಲ್ಲಿ ವಾಸವಿರುವ ಚಿರತೆಗಳು ಆಗಾಗ ಗ್ರಾಮಗಳಿಗೆ ಬರುತ್ತಿವೆ. ಸಾಕು ನಾಯಿಗಳು, ಕುರಿ-ಮೇಕೆಗಳ ಮೇಲೆ ದಾಳಿ ಮಾಡಿ ಅವುಗಳನ್ನು ಹೊತ್ತೊಯ್ಯುವ ಪ್ರಕರಣ ಆಗಾಗ ನಡೆಯುತ್ತಿವೆ. ಎರಡು ವರ್ಷಗಳ ಹಿಂದೆ ಕುರಿ ಮಂದೆಗೆ ನುಗ್ಗಿದ್ದ ಚಿರತೆ ಹತ್ತಾರು ಕುರಿಗಳನ್ನು ಕೊಂದು ಹಾಕಿತ್ತು ಎಂದು ವರಹ ಗ್ರಾಮದ ಶಿವಪ್ಪ ಗಡಿಯಣ್ಣನವರ ನೆನಪಿಸಿದರು.

**

ಹಾನಗಲ್‌ ತಾಲ್ಲೂಕಿನಲ್ಲಿ ಆನೆ ನಿರೋಧಕ ಕಂದಕಗಳ ನಿಮಾರ್ಣಕ್ಕೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. 30 ಕಿ.ಮೀ ಕಂದಕ ರಚಿಸಬೇಕಾಗಿದೆ
– ಶಿವರಾಜ ಮಠದ, ವಲಯ ಅರಣ್ಯಾಧಿಕಾರಿ, ಹಾನಗಲ್‌

**
ಪ್ರತಿ ವರ್ಷ 250ಕ್ಕೂ ಹೆಚ್ಚು ಬೆಳೆಹಾನಿ ಅರ್ಜಿಗಳು ಬರುತ್ತವೆ. ಇಲಾಖೆಯಿಂದ ಸರ್ವೆ ಮಾಡಿಸಿ, ರೈತರಿಗೆ ವರ್ಷಕ್ಕೆ ₹8 ಲಕ್ಷ ಪರಿಹಾರ ನೀಡಲಾಗುತ್ತಿದೆ
– ಬಾಲಕೃಷ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾವೇರಿ ವಿಭಾಗ

**
ಅರಣ್ಯದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸುವ ಮೂಲಕ ವನ್ಯಜೀವಿಗಳು ನಾಡಿನತ್ತ ಬರುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ
– ಅಬ್ದುಲ್ ಖಾದರ್‌ ಜಿಲಾನಿ ನದಾಫ್, ಉಪ ವಲಯ ಅರಣ್ಯಾಧಿಕಾರಿ, ರಟ್ಟೀಹಳ್ಳಿ ತಾಲ್ಲೂಕು

*****

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಮುಕ್ತೇಶ್ವರ ಕೂರಗುಂದಮಠ, ಎಂ.ವಿ.ಗಾಡದ, ಕೆ.ಎಚ್‌.ನಾಯಕ, ಮಾರುತಿ ಪೇಟಕರ, ಪ್ರಮೀಳಾ ಹುನಗುಂದ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT