ಬಿಸಿಲು ಝಳ: ಕಿಡ್ನಿ ಕಾಳಜಿಯ ಎಚ್ಚರ

ಶನಿವಾರ, ಮಾರ್ಚ್ 23, 2019
34 °C
ವಿಶ್ವ ಕಿಡ್ನಿ ದಿನ: ದೇಹದಲ್ಲಿನ ನೀರಿನಾಂಶ ಕುಸಿತವು ದುಷ್ಪರಿಣಾಮ ಬೀರುವ ಅಪಾಯ

ಬಿಸಿಲು ಝಳ: ಕಿಡ್ನಿ ಕಾಳಜಿಯ ಎಚ್ಚರ

Published:
Updated:
Prajavani

ಹಾವೇರಿ: ಹೆಚ್ಚುತ್ತಿರುವ ಬಿಸಿಲಿನ ಝಳವು ಬಾಯಾರಿಕೆ–ಬಳಲಿಕೆ ಜೊತೆ ಆರೋಗ್ಯ ಮತ್ತು ಅಂಗಾಂಗಗಳ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ದೇಹದ ನೀರಿನ ವ್ಯತ್ಯಯ (ಆಹಾರ ಪದ್ಧತಿ, ಜೀವನ ಕ್ರಮ) ಸಮಸ್ಯೆ ಎದುರಿಸಬಲ್ಲ ಪ್ರಮುಖ ಅಂಗವೇ ‘ಮೂತ್ರಪಿಂಡ’ (ಕಿಡ್ನಿ). 

ಕಿಡ್ನಿಯ ಪ್ರಾಮುಖ್ಯತೆ ಹಾಗೂ ಬರಬಹುದಾದ ಕಾಯಿಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 2006ರಿಂದ ಮಾ.14 ಅನ್ನು ‘ವಿಶ್ವ ಕಿಡ್ನಿ ದಿನ’ವನ್ನು ಆಚರಿಸಲಾಗುತ್ತಿದೆ. ‘ಎಲ್ಲೆಡೆ ಎಲ್ಲರಿಗೂ ಕಿಡ್ನಿ ಆರೋಗ್ಯ’ವು ಈ ವರ್ಷದ ಧ್ಯೇಯವಾಗಿದೆ.

‘ದೇಹದಲ್ಲಿ ಶೇ 70ರಿಂದ 80ರಷ್ಟು ಅಂಶ ನೀರು ಇರುತ್ತದೆ. ಹೊರಗಿನ ತಾಪಮಾನಕ್ಕೆ ದೇಹವನ್ನು ಹೊಂದಾಣಿಕೆ ಮಾಡಲು ನೀರು ಅತ್ಯುಪಯುಕ್ತ. ಅಂಗಾಂಗಗಳು ಕೆಲಸ ಮಾಡಲೂ ನೀರು ಅಗತ್ಯವಾಗಿದೆ. ಆಹಾರದಲ್ಲಿನ ಪ್ರೋಟಿನ್ ಮತ್ತಿತರ ಅಂಶಗಳು ಕರಗಿ, ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತವೆ. ಆ ಬಳಿಕ ಉಳಿಯುವ ‘ವಿಸರ್ಜನೆಗೊಳ್ಳಬೇಕಾದ ಉತ್ಪನ್ನ’ಗಳನ್ನು ನೀರಿನ ಮೂಲಕ ಕಿಡ್ನಿಯು ಹೊರಹಾಕುತ್ತದೆ. ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ, ಈ ಅಂಶಗಳೇ ವಿಷಕಾರಿಯಾಗಿ ಕಿಡ್ನಿ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ನಾಗರಾಜ ನಾಯಕ.

‘ಅದಕ್ಕಾಗಿ, ನೇರ ಹಾಗೂ ಪ್ರಖರ ಬಿಸಿಲಿಗೆ ತೆರೆದುಕೊಳ್ಳಬೇಡಿ. ನೀರು ಹೆಚ್ಚು ಸೇವಿಸಿ. ನೀರಿನಾಂಶ ಇರುವ ಹಣ್ಣು, ತರಕಾರಿ ಮತ್ತಿತರ ಆಹಾರಕ್ಕೆ ಆದ್ಯತೆ ನೀಡಿ’ ಎನ್ನುತ್ತಾರೆ ಅವರು.

ಡಯಾಲಿಸಿಸ್:

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಿಂದ ಬಿಆರ್‌ಎಸ್ ಸಹಯೋಗದಲ್ಲಿ ಡಯಾಲಿಸಿಸ್ ಕೇಂದ್ರವು ಕಾರ್ಯ ನಿರ್ವಹಿಸುತ್ತಿದೆ.

ಇಲ್ಲಿ ಈ ಹಿಂದೆ 200ರಿಂದ 300 ಜನ ಡಯಾಲಿಸಿಸ್‌ಗಾಗಿ ಕಾಯುತ್ತಿದ್ದರು. ಹಲವರು ಹುಬ್ಬಳ್ಳಿ, ದಾವಣಗೆರೆ ಅಥವಾ ಬೆಂಗಳೂರಿಗೆ ಹೋಗುತ್ತಿದ್ದರು. ಆದರೆ, ವರ್ಷದ ಹಿಂದೆ ಅಂದಿನ ಆರೋಗ್ಯ ಸಚಿವ ರಮೇಶ್ ಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಕೇಂದ್ರಕ್ಕೆ ಚಾಲನೆ ನೀಡಿದ್ದರು. 

‘ಈಗ ಎರಡು ಶಿಫ್ಟ್‌ನಲ್ಲಿ ಡಯಾಲಿಸಿಸ್ ಮಾಡುತ್ತೇವೆ. ಒಟ್ಟು 7 ಹಾಸಿಗೆಗಳಿದ್ದು, ನಾಲ್ಕನ್ನು ಸಾಮಾನ್ಯ ರೋಗಿಗಳಿಗೆ ಹಾಗೂ ಮೂರನ್ನು ಇತರ ಕಾಯಿಲೆಯಿಂದ ಬಳಲುವವರ ಡಯಾಲಿಸಿಸ್‌ಗೆ ಬಳಸುತ್ತೇವೆ. ಇದರಿಂದ ಸರದಿ ಕಾಯುವ ಒತ್ತಡ ಕಡಿಮೆಯಾಗಿದೆ’ ಎಂದು ಡಾ.ನಾಗರಾಜ ನಾಯಕ ವಿವರಿಸಿದರು.

‘ಜಿಲ್ಲಾ ಆಸ್ಪತ್ರೆ ಎರಡು ಘಟಕಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಒಂದು ಡಯಾಲಿಸಿಸ್ ಘಟಕ ಸ್ಥಾಪಿಸುವ ಕುರಿತು ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದೆ’ ಎಂದು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ ತಿಳಿಸಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !