ಏರಿದ ಝಳ, ಕುಸಿದ ಅಂತರ್ಜಲ

ಬುಧವಾರ, ಏಪ್ರಿಲ್ 24, 2019
22 °C
ವಿಶ್ವ ಹವಾಮಾನ ದಿನ ಇಂದು: ಹಸಿರಿನ ಕೊರತೆಯಿಂದ ಕಾಡುತ್ತಿರುವ ತಾಪಮಾನ

ಏರಿದ ಝಳ, ಕುಸಿದ ಅಂತರ್ಜಲ

Published:
Updated:
Prajavani

ಹಾವೇರಿ: ಬಿಸಿಲು ಏರಿಕೆ, ಅಂತರ್ಜಲ ಕುಸಿತ, ವಾಯು ಮಾಲಿನ್ಯ ಹೆಚ್ಚಳ ಮತ್ತಿತರ ಸಮಸ್ಯೆಗಳಿಂದ ಜನ ಪರಿತಪಿಸುತ್ತಿದ್ದರೆ, ಇತ್ತ  ಮತ್ತೊಮ್ಮೆ ವಿಶ್ವ ಹವಾಮಾನ ದಿನ (ಮಾ.23) ಬಂದಿದೆ. ಹವಾಮಾನ ವೈಪರೀತ್ಯದಿಂದ ಭೂಮಿಯನ್ನು ರಕ್ಷಿಸುವ ನಿಟ್ಟಿನಲ್ಲಿ, ‘ಸೂರ್ಯ, ಭೂಮಿ ಮತ್ತು ಹವಾಮಾನ’ ಎಂಬುದು ಈ ಬಾರಿಯ ಧ್ಯೇಯವಾಗಿದೆ.

ಹವಾಮಾನ ದಿನ:
ವಿಶ್ವ ಹವಾಮಾನ ವಿಜ್ಞಾನ ಸಂಸ್ಥೆ 1950ರ ಮಾರ್ಚ್ 23ರಂದು ಸ್ಥಾಪನೆಯಾಗಿದ್ದು, ನೆನಪಿಗಾಗಿ ಆ ದಿನವನ್ನು ವಿಶ್ವ ಹವಾಮಾನ ದಿನವಾಗಿ ಆಚರಿಸಲಾಗುತ್ತಿದೆ. ಹವಾಮಾನ ಹಾಗೂ ನೀರಿನ ಕುರಿತು ಸಂಸ್ಥೆ ಹೆಚ್ಚಿನ ಅಸ್ಥೆ ವಹಿಸಿದೆ. ಸುರಕ್ಷತೆ ಮತ್ತು ಕ್ಷೇಮವು ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ.

ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮತ್ತಿತರ ಸಂಸ್ಥೆಗಳು ದೇಶದ ಹವಾಮಾನ, ಮಳೆ, ಗಾಳಿ, ತೇವಾಂಶ ಮತ್ತಿತರ ವಿಚಾರಗಳ ಮೇಲೆ ನಿಗಾ ವಹಿಸುತ್ತವೆ.

ಅಂತರ್ಜಲ:
ಜಾಗತಿಕ ಹವಾಮಾನದ ದುಷ್ಪರಿಣಾಮವು, ಜಿಲ್ಲೆಯ ಹಳ್ಳಿಗಳನ್ನೂ ಬಿಟ್ಟಿಲ್ಲ. ಜಿಲ್ಲೆ ಸತತ ಬರವನ್ನು ಎದುರಿಸುತ್ತಿದ್ದು, ಅಂತರ್ಜಲ ಮಟ್ಟವು ಈ ವರ್ಷ ಫೆಬ್ರುವರಿಯಲ್ಲೇ 21.74 ಮೀಟರ್ಸ್ ಕುಸಿದಿದೆ. ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ, 2017ರ ನೀರಿನ ಮಟ್ಟವು 24.44 ಮೀಟರ್ಸ್‌ಗೆ ಕುಸಿದಿತ್ತು. ಆ ಬಳಿಕ ಇಷ್ಟೊಂದು ಕುಸಿದಿರುವುದು ಇದೇ ಮೊದಲು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇನ್ನೂ ಕುಸಿತ ಹೆಚ್ಚಬಹುದು ಎಂದು ಭೂ ವಿಜ್ಞಾನಿಗಳು ವಿಶ್ಲೇಷಿಸುತ್ತಾರೆ.

‘ಜಿಲ್ಲೆಯಲ್ಲಿ ಆಯ್ದ 38 ಕೊಳವೆಬಾವಿಗಳನ್ನು ಆಧರಿಸಿ ಅಂತರ್ಜಲ ಮಟ್ಟವನ್ನು ನಿರ್ಧರಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿತ ಕಾಣಬಹುದು’ ಎಂದು ಅಂತರ್ಜಲ ಇಲಾಖೆಯ ಹಿರಿಯ ಭೂ ವಿಜ್ಞಾನಿ ಎಂ.ಬಿ. ಬಳಿಗಾರ ಅಭಿಪ್ರಾಯ ಪಡುತ್ತಾರೆ.

ಬಿಸಿಲ ಝಳ:
ಜಿಲ್ಲೆಯ ಗರಿಷ್ಠ ತಾಪಮಾನವು ಈಗಾಗಲೇ 38 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಈ ವರ್ಷ ವಾಡಿಕೆಗಿಂತ ತಾಪಮಾನವು 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ. ತೇವಾಂಶದ ಕೊರತೆಯೂ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್ಎನ್‌ಡಿಎಂಸಿ) ಮೂಲಗಳು ತಿಳಿಸಿವೆ.

ವಾಡಿಕೆಯಂತೆ ಏಪ್ರಿಲ್ –ಮೇಯಲ್ಲಿ ತಾಪಮಾನ ಏರಿಕೆ ಆಗಬಹುದು. ಮಾರ್ಚ್ ಅಂತ್ಯದಲ್ಲಿ ಅಲ್ಲಲ್ಲಿ ತುಂತುರು ಮಳೆಯೂ ಬೀಳಬಹುದು ಎಂದು ತಿಳಿಸಿವೆ. 

‘ಜಿಲ್ಲೆಯಲ್ಲಿ ಒಟ್ಟು 208 ಟೆಲಿಮೆಟ್ರಿಕ್ ಹವಾಮಾನ ಕೇಂದ್ರಗಳಿವೆ. 18 ಟೆಲಿಮೆಟ್ರಿಕ್ ಗಾಳಿ ಮಾಪನ ಕೇಂದ್ರಗಳಿವೆ. ಈ ಮೂಲಕ ಹವಾಮಾನದ ಮೇಲೆ ನಿಗಾ ಇಡುತ್ತೇವೆ’ ಎನ್ನುತ್ತಾರೆ ಕೆಎಸ್ಎನ್‌ಡಿಎಂಸಿಯ ಆಸೀಫ್ ಬಶೀರ್ ಅಣ್ಣಿಗೇರಿ.

ಜಿಲ್ಲೆಯ ವಾಡಿಕೆ ಮಳೆಯು 792.3 ಮಿ.ಮೀ. ಇದ್ದು, ಸತತ ಮಳೆ ಕೊರತೆ ಪರಿಣಾಮ ಬರ ಕಾಡುತ್ತಿದೆ.  ಜಿಲ್ಲೆಯಲ್ಲಿ ಅರಣ್ಯ ಪ್ರದೇಶವು ಕೇವಲ ಶೇ 9.78 ರಷ್ಟಿದೆ. ನಾಲ್ಕು ನದಿಗಳು, 1,416 (1,153 –ಜಿಲ್ಲಾ ಪಂಚಾಯ್ತಿ, 263 –ಸಣ್ಣ ನೀರಾವರಿ) ಕೆರೆಗಳು, 50 ಬಾಂದಾರುಗಳಿದ್ದರೂ, ಮಾರ್ಚ್ ತಿಂಗಳಲ್ಲೇ ನೀರಿನ ಬವಣೆ ಹೆಚ್ಚಿದೆ.

‘ಝಳ ಹೆಚ್ಚಳದ ಪರಿಣಾಮ ತರಕಾರಿ, ಹಣ್ಣು ಹಂಪಲು ಮತ್ತಿತರ ಆಹಾರ ಪದಾರ್ಥಗಳು ಸೊರಗುತ್ತಿವೆ. ಹಾಲು ಇತ್ಯಾದಿಗಳು ಕೆಡುತ್ತಿವೆ. ಹೊರಗೆ ಹೋದರೆ, ತಲೆ, ಮೈಕೈ ನೋವು ಮಾತ್ರವಲ್ಲ ದೇಹವೇ ಸುಕ್ಕುಗಟ್ಟಿದಂತೆ ಆಗುತ್ತಿದೆ. ನೀರಡಿಕೆ, ಸುಸ್ತು, ತಲೆ ಸುತ್ತು ಹೆಚ್ಚುತ್ತಿದೆ’ ಎನ್ನುತ್ತಾರೆ ನಗರದ ಪಾರವ್ವ ಕುಮ್ಮಣ್ಣನವರ ಹಾಗೂ ಸೋಫಿಯಾ ಮಂಟೂರ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !