ಶನಿವಾರ, ಸೆಪ್ಟೆಂಬರ್ 18, 2021
27 °C
ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿಸಿಕೊಳ್ಳುವವರ ಪೈಕಿ ಮಹಿಳೆಯರೇ ಹೆಚ್ಚು

ಈ ಬಾರಿ 2 ಪುರಷರಿಗೆ ‘ಸಂತಾನ ಶಕ್ತಿ ಹರಣ’ ಚಿಕಿತ್ಸೆ

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

ವಿಶ್ವ ಜನಸಂಖ್ಯಾ ದಿನಾಚರಣೆಯ ಲೋಗೊ

ಹಾವೇರಿ:  ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕೆ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಪೈಕಿ ಸಂತಾನಶಕ್ತಿ ಹರಣ ಚಿಕಿತ್ಸೆಯೂ ಮುಖ್ಯವಾಗಿದ್ದು, ಜಿಲ್ಲೆಯಲ್ಲಿ ಈ ಚಿಕಿತ್ಸೆಗೆ 2017–18ನೇ ಸಾಲಿನಲ್ಲಿ ಒಳಗಾದ ಪುರುಷರು ಮಾತ್ರ ಕೇವಲ ಇಬ್ಬರು. 2016–17ರಲ್ಲೂ ಇಬ್ಬರೇ ಚಿಕಿತ್ಸೆಗೆ ಒಳಗಾಗಿದ್ದರು.

2011 ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 15.97 ಲಕ್ಷ ಜನಸಂಖ್ಯೆಯಿದ್ದು, ಬೆಳವಣಿಗೆ ಪ್ರಮಾಣವು ಶೇ 11.02 ರಷ್ಟಿದೆ. ದಶಕದ ಹಿಂದೆ (2001) 14.39 ಲಕ್ಷ ಜನಸಂಖ್ಯೆಯಿದ್ದು, ಬೆಳವಣಿಗೆ ಪ್ರಮಾಣವು ಶೇ 13. 39 ಇತ್ತು. ಬೆಳವಣಿಗೆ ಪ್ರಮಾಣ ಕುಂಠಿತಗೊಂಡಿರುವುದು ನೆಮ್ಮದಿಯ ಸಂಕೇತವಾಗಿದೆ. ಆದರೆ, ಒಟ್ಟು ಜನಸಂಖ್ಯೆಯಲ್ಲಿ (2011ರ ಜನಗಣತಿ) 8.19 ಲಕ್ಷ ಪುರುಷರು ಹಾಗೂ 7.78 ಲಕ್ಷ ಮಹಿಳೆಯರು ಇದ್ದಾರೆ. ಪುರುಷ –ಮಹಿಳಾ ಅನುಪಾತವು ಸಾವಿರಕ್ಕೆ 950 ಇದೆ. ಅಚ್ಚರಿ ಎಂದರೆ, ಒಟ್ಟು 11, 886 ಮಹಿಳೆಯರು ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಒಳಗಾದರೆ, ಪುರುಷರ ಸಂಖ್ಯೆ ಮಾತ್ರ 2.

ಆರೋಗ್ಯ ಇಲಾಖೆಯು ಸಂತಾನ ಶಕ್ತಿ ಹರಣ ಚಿಕಿತ್ಸೆ ಕುರಿತು ಸತತವಾಗಿ ಜಾಗೃತಿ ನಡೆಸುತ್ತಿದೆ. ವಿವಿಧ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಚಿಕಿತ್ಸೆಗೆ ಪುರುಷರು ಮುಂದಾಗುತ್ತಿಲ್ಲ. ಇದಕ್ಕೆ ಪುರುಷ ಪ್ರಧಾನ ಮೌಢ್ಯವೂ ಕಾರಣ ಇರಬಹುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ನಾಗರಾಜ ನಾಯಕ ತಿಳಿಸಿದರು.

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪುರುಷ ಮತ್ತು ಮಹಿಳೆಯರ ಸಂತಾನ ಶಕ್ತಿ ಹರಣ ಚಿಕಿತ್ಸೆಯ ಎರಡು ಪ್ರತ್ಯೇಕ ಘಟಕಗಳಿವೆ. ಪ್ರತಿನಿತ್ಯ ಸುಮಾರು 25ರಿಂದ 35 ಮಹಿಳೆಯರಿಗೆ ಚಿಕಿತ್ಸೆ ಮಾಡಲಾಗುತ್ತಿದೆ. ಆದರೆ, ಪುರುಷರ ವಾರ್ಡ್ ಮಾತ್ರ ಖಾಲಿ ಖಾಲಿ ಎಂದು ವಿವರಿಸಿದರು.

ಚಿಕಿತ್ಸೆಗೆ ಒಳಗಾದ ಎಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬದ ಮಹಿಳೆಗೆ ₹250, ಬಿಪಿಎಲ್ ಕುಟುಂಬದ ಮಹಿಳೆಗೆ ₹600 ಹಾಗೂ ಪುರುಷರಿಗೆ ₹1,100 ಪ್ರೋತ್ಸಾಹ ಧನವನ್ನು ಸರ್ಕಾರ ನೀಡುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು ₹5ರಿಂದ 10 ಸಾವಿರ ಚಿಕಿತ್ಸಾ ವೆಚ್ಚವಿದೆ. ಇದನ್ನೇ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಆದರೂ, ಪುರುಷರ ಸಂಖ್ಯೆ ಮಾತ್ರ ವಿರಳಾತಿವಿರಳ.

ಏನಿದು ದಿನ:  ಜನಸಂಖ್ಯೆ ಹೆಚ್ಚಳದಿಂದ ಆಗುತ್ತಿರುವ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲ, ಜಾಗೃತಿ ಮೂಡಿಸುವ ಸಲುವಾಗಿ 1989ರಲ್ಲಿ ವಿಶ್ವಸಂಸ್ಥೆಯು ‘ವಿಶ್ವ ಜನಸಂಖ್ಯಾ ದಿನ’ವನ್ನು ಘೋಷಿಸಿದೆ.  ಈ ಬಾರಿಯ ವಿಶ್ವ ಜನಸಂಖ್ಯಾ ದಿನ ಘೋಷಣೆಯು ‘ಕುಟುಂಬ ಯೋಜನೆಯು ಮಾನವನ ಹಕ್ಕು’ ಎಂಬುದಾಗಿದೆ. ಪದೇ ಪದೇ ಗರ್ಭಿಣಿಯಾಗುವುದನ್ನು ಮಹಿಳೆ ನಿರಾಕರಿಸಬಹುದು. ಆ ಮೂಲಕ ಜನಸಂಖ್ಯೆ ನಿಯಂತ್ರಣ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಬಹುದು ಎಂಬುದೇ ಈ ಧ್ಯೇಯದ ಉದ್ದೇಶ ಎಂದು ನಿವೃತ್ತ ಅಧಿಕಾರಿ ಆರ್. ಜಿ.ಗೊಲ್ಲರ್ ವಿವರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು