ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನಕ್ಕೆ ರಾಜ್ಯಕಲೆಯ ಮಾನ್ಯತೆ ಸಿಗಲಿ

ಜಾನಪದ ವಿವಿ ಘಟಿಕೋತ್ಸವ ಭಾಷಣದಲ್ಲಿ ಡಾ.ಮೋಹನ್‌ ಆಳ್ವ ಆಶಯ
Last Updated 1 ಡಿಸೆಂಬರ್ 2022, 15:57 IST
ಅಕ್ಷರ ಗಾತ್ರ

ಗೊಟಗೋಡಿ (ಹಾವೇರಿ): ‘ಗಂಡು ಕಲೆ ಎಂದು ಖ್ಯಾತಿಗೊಂಡ ‘ಸಮಗ್ರ ಯಕ್ಷಗಾನ’ ರಾಜ್ಯದ 22 ಜಿಲ್ಲೆಗಳಲ್ಲಿ ಪಸರಿಸಿದೆ. ತೆಂಕು–ಬಡಗುತಿಟ್ಟು ಯಕ್ಷಗಾನವಂತೂ ಜಗತ್ತನ್ನೇ ಸುತ್ತಿ ಬಂದಿದೆ. ಹೀಗಾಗಿ ಯಕ್ಷಗಾನಕ್ಕೆ ರಾಜ್ಯಕಲೆಯ ಮಾನ್ಯತೆ ದೊರೆಯಬೇಕು’ ಎಂದು ಮೂಡುಬಿದರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್‌ ಆಳ್ವ ಒತ್ತಾಯಿಸಿದರು.

ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯ ಹಿರೇತಿಟ್ಟು ಬಯಲು ರಂಗಮಂದಿರದಲ್ಲಿ ಗುರುವಾರ ನಡೆದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 6 ಮತ್ತು 7ನೇ ವಾರ್ಷಿಕ ಘಟಿಕೋತ್ಸವದಲ್ಲಿ ‘ಘಟಿಕೋತ್ಸವ ಭಾಷಣ’ ಮಾಡಿದರು.

‘ಜಾಗತೀಕರಣದ ಪ್ರಭಾವದಿಂದ ನಮ್ಮ ಶಾಸ್ತ್ರೀಯ ಸಂಗೀತ–ನೃತ್ಯಾದಿಗಳು ಈವೆಂಟ್‌ ಮ್ಯಾನೇಜರುಗಳ ಕೈಯಲ್ಲಿ ಕಾರ್ಪೊರೇಟ್‌ ಶೈಲಿಯಲ್ಲಿ ವೈಭವಯುತವಾಗಿ ಮೆರೆಯುತ್ತಿವೆ. ಸಹಜ ಸೌಂದರ್ಯವನ್ನು ಮರೆ ಮಾಡುವ ಬದಲಾವಣೆ ಬೇಕೇ? ಈ ರೀತಿಯ ಅಬ್ಬರದಿಂದ, ವೈಭವೀಕರಣದಿಂದ ಪಾರಾಗಿ ಸಹಜ ಸೌಂದರ್ಯದಿಂದಲೇ ಮೈದೋರುವಂತೆ ಮಾಡುವುದು ಹೇಗೆ? ಎನ್ನುವ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ’ ಎಂದರು.

ಸೊರಗಿದ ಜಾನಪದ:ಶಾಸ್ತ್ರೀಯ ಕಲೆ–ಕಲಾವಿದರು ಏಕಕಾಲದಲ್ಲಿ ಮುಂಬಡ್ತಿ ಪಡೆದು ಕಲೆ ಶ್ರೀಮಂತವೂ, ಕಲಾವಿದರು ಶ್ರೀಮಂತರೂ ಆಗಿದ್ದಾರೆ. ಆದರೆ, ಜಾನಪದ ಕಲೆ–ಕಲಾವಿದರು ದಿನದಿಂದ ದಿನಕ್ಕೆ ಸೊರಗುತ್ತಿದ್ದಾರೆ. ಮೆರವಣಿಗೆ ಮತ್ತು ಉದ್ಘಾಟನೆ ಸಂದರ್ಭದಲ್ಲಿ ಕಾಟಾಚಾರಕ್ಕಾಗಿ ಕಲೆಯನ್ನು ಬಳಕೆ ಮಾಡಲಾಗುತ್ತಿದೆ. ಸಹಜ ಗೌರವ, ಶ್ರೀಮಂತಿಕೆ ದೊರೆಯುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕಿದೆ ಎಂದು ಆಶಿಸಿದರು.

ಅನ್ನದ ದಾರಿ ತೋರಲಿ:ಜಾನಪದ ಕಲಿಕೆ ಅನ್ನದ ದಾರಿ ತೋರಿಸುವಂತಿರಬೇಕು. ಇಂದು ಸುಧಾರಿತ ವಿಜ್ಞಾನ–ವಾಣಿಜ್ಯ ಕೇಂದ್ರಿತ ವಿಷಯಗಳಿಗೆ ವಿದ್ಯಾರ್ಥಿಗಳು ‘ದೀಪಕ್ಕೆ ಬೀಳುವ ಹುಳು’ಗಳಂತೆ ಹಾತೊರೆಯಲು ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯತೆಯೇ ಕಾರಣ. ಈ ನಿಟ್ಟಿನಲ್ಲಿ ಜಾನಪದ ಅಧ್ಯಯನವೂ ಯೋಚಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಜಾನಪದದಲ್ಲಿ ಸೌಂದರ್ಯ ಮತ್ತು ಜ್ಞಾನ ಎರಡೂ ಇವೆ. ಅದನ್ನು ತಂತ್ರಜ್ಞಾನದೊಂದಿಗೆ ಹೇಗೆ ಬೆಸೆಯುವುದು ಎಂಬ ಬಗ್ಗೆ ಯೋಚಿಸಬೇಕಿದೆ ಎಂದರು.

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ವರ್ಚುವಲ್‌ವೇದಿಕೆ ಮೂಲಕ ಪಾಲ್ಗೊಂಡರು. ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್‌, ಕುಲಸಚಿವರಾದ ಗುರುಪ್ರಸಾದ್‌, ಎನ್‌.ಎಂ.ಸಾಲಿ ಹಾಗೂ ಆರು ಗೌರವ ಡಾಕ್ಟರೇಟ್‌ ಪುರಸ್ಕೃತರು ವೇದಿಕೆಯಲ್ಲಿದ್ದರು.

***

ತತ್ವಜ್ಞಾನವನ್ನು ತಂತ್ರಜ್ಞಾನದೊಂದಿಗೆ ಬೆಸೆಯುವುದೇ ಜಾನಪದ ವಿಶ್ವವಿದ್ಯಾಲಯದ ಮುಂದಿರುವ ದೊಡ್ಡ ಸವಾಲು
–ಡಾ.ಎಂ.ಮೋಹನ್‌ ಆಳ್ವ,ಅಧ್ಯಕ್ಷ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ, ಮೂಡುಬಿದರೆ

***

ಪ್ರಧಾನಿಯವರು ಶಿಕ್ಷಣ, ಕೌಶಲ ಮತ್ತು ನೈತಿಕ ಮೌಲ್ಯಗಳನ್ನು ಜೋಡಿಸಿ ನವ ಭಾರತ ಮಾಡಲು ಬದ್ಧರಾಗಿದ್ದಾರೆ. ಪ್ರತಿಯೊಬ್ಬರು ಕೈಜೋಡಿಸಬೇಕು.
– ಥಾವರ್‌ ಚಂದ್ ಗೆಹ್ಲೋಟ್‌, ರಾಜ್ಯಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT