ಶನಿವಾರ, ಮೇ 15, 2021
29 °C
ರಾಜ್ಯಮಟ್ಟದ ಹ್ಯಾಂಡ್‌ಬಾಲ್‌ ಟೂರ್ನಿಗೆ ಶಾಸಕ ಓಲೇಕಾರ ಚಾಲನೆ

ಯುವಶಕ್ತಿಯೇ ದೇಶದ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಯುವಶಕ್ತಿ ಗಟ್ಟಿಮುಟ್ಟಾದಷ್ಟೂ ದೇಶ ಸದೃಢವಾಗಿರುತ್ತದೆ. ಯುವಜನರೇ ಮುಂದಿನ ದಿನಗಳಲ್ಲಿ ರಾಷ್ಟ್ರದ ಭವಿಷ್ಯ ಬರೆಯುತ್ತಾರೆ’ ಎಂದು ಶಾಸಕ ನೆಹರು ಓಲೇಕಾರ ಅಭಿಪ್ರಾಯಪಟ್ಟರು. 

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಹ್ಯಾಂಡ್‌ಬಾಲ್‌ ಅಸೋಸಿಯೇಷನ್‌ ಹಾಗೂ ಹಾವೇರಿ ಜಿಲ್ಲಾ ಹ್ಯಾಂಡ್‌ಬಾಲ್‌ ಅಸೋಸಿಯೇಷನ್‌ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ‘ರಾಜ್ಯಮಟ್ಟದ ಆಹ್ವಾನಿತ ಪುರುಷರ ಹ್ಯಾಂಡ್‌ಬಾಲ್‌‌ ಟೂರ್ನಿ’ ಉದ್ಘಾಟಿಸಿ ಅವರು ಮಾತನಾಡಿದರು. 

ದೇಶದ ಪ್ರಗತಿಯಲ್ಲಿ ಕ್ರೀಡಾ ಪ್ರತಿಭೆಗಳ ಕೊಡುಗೆ ಅಪಾರವಾಗಿದೆ. ಯುವಶಕ್ತಿಯನ್ನು ಪ್ರೋತ್ಸಾಹಿಸಿ, ಬೆಳೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕ್ರೀಡಾಪಟುಗಳು ಆರೋಗ್ಯ ಭಾಗ್ಯ ಪಡೆಯುತ್ತಾರೆ. ಕ್ರೀಡಾ ಚಟುವಟಿಕೆಗಳಿಂದ ದೂರು ಇರುವ ಜನರು ರೋಗ ರುಜಿನಗಳಿಗೆ ತುತ್ತಾಗುತ್ತಾರೆ. ಹಾಗಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯ ನೀಡುವ ಕ್ರೀಡೆಗಳು ಪ್ರತಿಯೊಬ್ಬರಿಗೂ ಅವಶ್ಯ ಎಂದರು. 

ಕ್ರೀಡೆಗಳಲ್ಲಿ ಸೋಲು–ಗೆಲುವು ಸಾಮಾನ್ಯ. ಪ್ರತಿಯೊಬ್ಬ ಆಟಗಾರರೂ ಪ್ರಾಮಾಣಿಕತೆಯಿಂದ ಮತ್ತು ಕ್ರೀಡಾ ಸ್ಫೂರ್ತಿಯಿಂದ ಆಡವಾಡಿ. ತಮ್ಮ ಚತುರತೆ, ಪ್ರತಿಭೆಯನ್ನು ಸಾಬೀತುಪಡಿಸಿ ಗೆಲುವು ಸಾಧಿಸಿ. ಜತೆಗೆ ಸಾರ್ವಜನಿಕರಿಗೂ ಮನರಂಜನೆ ನೀಡಿ. ಇದೇ ಮೈದಾನದಲ್ಲಿ ರಾಜ್ಯಮಟ್ಟದ ಕಬಡ್ಡಿ, ಕೊಕ್ಕೊ, ಸೈಕ್ಲಿಂಗ್‌ ಸ್ಪರ್ಧೆಗಳು ನಡೆದಿವೆ. ಕ್ರೀಡಾ ಚಟುವಟಿಕೆಗಳಲ್ಲಿ ಹಾವೇರಿ ಸದಾ ಮುಂದಿದೆ ಎಂದರು. 

ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಮಾತನಾಡಿ, ‘ಹಾವೇರಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಹ್ಯಾಂಡ್‌ಬಾಲ್‌ ಟೂರ್ನಿ ಆಯೋಜಿಸಿದ್ದು ಸ್ವಾಗತಾರ್ಹ. ಆಟಗಾರರ ದೈಹಿಕ ಸಾಮರ್ಥ್ಯವನ್ನು ಸಾಬೀತುಪಡಿಸುವ ಕ್ರೀಡೆ ಇದಾಗಿದೆ. ಉತ್ತರ ಕರ್ನಾಟಕದಲ್ಲಿ ಮತ್ತಷ್ಟು ಈ ಕ್ರೀಡೆ ಬೆಳೆಯಲಿ. ಮುಂದಿನ ವರ್ಷ ರಾಷ್ಟ್ರಮಟ್ಟದ ಟೂರ್ನಿ ಆಯೋಜಿಸಿ. ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡುತ್ತೇವೆ’ ಎಂದು ಹೇಳಿದರು. 

ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್‌ ಅಸೋಸಿಯೇಷನ್‌ ಅಧ್ಯಕ್ಷ ಮನೋಜ ಸಾವಕಾರ ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ಡಿವೈಎಸ್ಪಿ ಶಂಕರ ಮಾರಿಹಾಳ ಮಾತನಾಡಿದರು. ಕಾರ್ಯದರ್ಶಿ ಲೋಕೇಶ ಬಿ.ಎಲ್‌., ಖಜಾಂಚಿ ಪ್ರಕಾಶ ನರಗಟ್ಟಿ ಹಾಗೂ ನಗರಸಭೆ ಸದಸ್ಯರು ಇದ್ದರು. 

ಟೂರ್ನಿಯಲ್ಲಿ ಬೆಂಗಳೂರು, ಬೆಳಗಾವಿ, ಉಜಿರೆ, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ, ಮೈಸೂರು, ದಾವಣಗೆರೆ, ಮಂಗಳೂರು ಹಾಗೂ ಕರ್ನಾಟಕ ಪೊಲೀಸ್‌ ತಂಡಗಳು ಪಾಲ್ಗೊಂಡಿದ್ದವು. ಏಪ್ರಿಲ್‌ 11ರಂದು ಟೂರ್ನಿಯ ಸಮಾರೋಪ ಸಮಾರಂಭ ನಡೆಯಲಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.