ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಪ್ರವಾಹ| ಪ್ರಾಣಿಗಳ ಕೂಗಿಗೆ ಮಿಡಿದ ಹೃದಯ

Last Updated 20 ಆಗಸ್ಟ್ 2019, 10:50 IST
ಅಕ್ಷರ ಗಾತ್ರ

ಅದು ಆಗಸ್ಟ್ 9ರ ಮಧ್ಯರಾತ್ರಿ. ಮೂರು ದಿನಗಳ ಮೊದಲೇ ಆರಂಭವಾಗಿದ್ದ ಜೋರು ಮಳೆಗೆ ತುಂಗಾ ನದಿ ನಿಧಾನವಾಗಿ ಶಿವಮೊಗ್ಗ ನಗರವನ್ನು ಆವರಿಸಿಕೊಳ್ಳುತ್ತಿತ್ತು. ತಗ್ಗು ಪ್ರದೇಶಗಳು, ರಸ್ತೆಗಳ ಮೇಲೆ ಒಂದಷ್ಟು ನೀರು ಕಾಣಿಸತೊಡಗಿತ್ತು. ಕೆಲವು ದಿನಗಳಿಂದ ಕಣ್ಮರೆಯೇ ಆಗಿದ್ದ ಸೂರ್ಯ ತುಸು ಇಣುಕಿ ನೋಡಿ, ಮರೆಯಾದ. ಕತ್ತಲಾಗುತ್ತಿದ್ದಂತೆ ನದಿಯ ನೀರು ಜನವಸತಿ ಪ್ರದೇಶಗಳತ್ತ ಹರಿಯಲಾರಂಭಿಸಿತು.

ಕುಂಬಾರ ಗುಂಡಿ, ಬಿ.ಬಿ.ರಸ್ತೆ, ವಂದನಾ ಟಾಕೀಸ್ ರಸ್ತೆ, ರಾಜೀವ್‌ ಗಾಂಧಿ ಬಡಾವಣೆ, ಶಾಂತಮ್ಮಲೇಔಟ್‌ಸೇರಿದಂತೆ ಹಲವು ಬಡಾವಣೆಗಳ ಮನೆಗಳಿಗೆ ನದಿ ನೀರು ನುಗ್ಗಿತ್ತು. ಕೆಲವು ಮನೆಗಳು ಪೂರಾ ಮುಳುಗಿದ್ದವು. ಅಪಾಯದ ಮುನ್ಸೂಚನೆ ಅರಿತ ಸ್ಥಳೀಯ ಸಾಹಸಿ ತಂಡಗಳು ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರುವ ಸಾಹಸ ಮಾಡುತ್ತಿದ್ದರು.

ಜನರ ಸಂಕಟದ ಧ್ವನಿ ಆಲಿಸಿ, ಅವರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುತ್ತಿದ್ದ ರಕ್ಷಣಾ ತಂಡಕ್ಕೆ, ದೂರದಲ್ಲೆಲ್ಲೋ ಜಾನುವಾರುಗಳ ಆರ್ತನಾದ ಕೇಳಿಸಿತು. ಆಗ ಮಧ್ಯರಾತ್ರಿ 12ಗಂಟೆ. ಆ ತಂಡದಲ್ಲಿದ್ದ ನಂದನ್, ಬಾಲು, ನವ್ಯಶ್ರೀ ನಾಗೇಶ್ ಸನ್ನದ್ಧರಾದರು. ಪ್ರಾಣಿ ಪ್ರೀತಿಯ ಈ ಗೆಳೆಯರಿಗೆ, ಅದು ರೋಟರಿ ಚಿತಾಗಾರದ ಬಳಿ ಇರುವ ಮಹಾವೀರ ಗೋಶಾಲೆ ಎಂದು ಅರಿಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ತಕ್ಷಣ ಅಲ್ಲಿಗೆ ಹೋಗಲು ಜೀಪ್ ಸಿದ್ಧಮಾಡಿಕೊಂಡರು. ಆದರೆ, ಸುತ್ತಲೂ ಐದಾರು ಅಡಿ ನೀರು. ಜೀಪ್‌ ಅರ್ಧ ದೂರದವರೆಗೂ ಹೋಗಲಿಲ್ಲ. ಆ ಸರಿಹೊತ್ತಿನಲ್ಲಿ ಯಾವುದಾದರೂ ಬೋಟ್ ಸಿಗಬಹುದೇ ಎಂದು ಚಿಂತಿಸಿದರು. ಅಷ್ಟು ಹೊತ್ತಿನಲ್ಲಿ ಬೋಟ್ ಸಿಗಲು ಹೇಗೆ ಸಾಧ್ಯ?

ಸರಿ, ಮರು ಯೋಚನೆ ಮಾಡಲಿಲ್ಲ. ಕುತ್ತಿಗೆವರೆಗಿದ್ದ ನೀರಿನಲ್ಲೇ ಹೆಜ್ಜೆ ಹಾಕುತ್ತಾ ಗೋಶಾಲೆ ಬಳಿ ಸಾಗಿದರು. ಆದರೆ, ಗೋಶಾಲೆಯ ದೊಡ್ಡ ಗೇಟ್‌ಗೆ ಬೀಗ ಹಾಕಿತ್ತು. ಅದನ್ನು ದಾಟಲು ಸಾಧ್ಯವಾಗಲಿಲ್ಲ. ಗೇಟ್ ಬಳಿ ನಿಂತವರಿಗೆ ನೂರಾರು ಜಾನುವಾರುಗಳ ಕೂಗು ಕೇಳಿಸುತ್ತಿತ್ತು. ನಿಂತಲ್ಲೇ ಚಡಪಡಿಸುತ್ತಿದ್ದ ಇವರದ್ದು ಏನೂ ಮಾಡಲಾಗದ ಅಸಹಾಯಕ ಸ್ಥಿತಿ.

ಇಷ್ಟೆಲ್ಲ ಪ್ರಯತ್ನಗಳು ನಡೆಯುವ ಹೊತ್ತಿಗೆ ಬೆಳೆಗಾಯಿತು. ರಕ್ಷಣಾ ತಂಡದ ಸದಸ್ಯರು ಬೋಟ್ ತಂದು, ಗೋಶಾಲೆಯ ಸಿಬ್ಬಂದಿ ಕರೆತಂದು ಗೋವುಗಳ ಸಂರಕ್ಷಣೆಗೆ ಮುಂದಾದರು. ಇನ್‌ಸ್ಪೆಕ್ಟರ್ ಗುರುರಾಜ್ ಕರ್ಕಿ ಮತ್ತವರ ತಂಡವೂ ಧಾವಿಸಿತು. ಅಷ್ಟರಲ್ಲಾಗಲೇ 10 ಹಸುಗಳು ಮೃತಪಟ್ಟಿದ್ದವು. ಉಳಿದ 150ಕ್ಕೂ ಹೆಚ್ಚು ಹಸುಗಳನ್ನು ರಕ್ಷಿಸಲಾಯಿತು.

ರಾತ್ರಿಯೇ ರಕ್ಷಣೆ ಸಾಧ್ಯವಾಗಿದ್ದರೆ ಆ 10 ಹಸುಗಳನ್ನೂ ಉಳಿಸಬಹುದಿತ್ತು. ಈ ಅಪಾಯದ ಮುನ್ಸೂಚನೆ ಇಲ್ಲದ ಕಾರಣ ಸಿಬ್ಬಂದಿಯೂ ಮುಂಜಾಗ್ರತೆ ವಹಿಸಿರಲಿಲ್ಲ. ಕೊನೆಗೂ ಉಳಿದ ಹಸುಗಳನ್ನು ರಕ್ಷಿಸಿದ ಸಮಾಧಾನ ಉಳಿಯಿತು ಎಂದು ಕಣ್ಣಾಲಿಗಳಲ್ಲಿ ನೀರು ತಂದುಕೊಂಡರು ಶಿವಮೊಗ್ಗ ನಂದನ್.

ಬ್ರಿಟಿಷ್‌ ಸೈನಿಕನ ಕುಟುಂಬದ ಪರದಾಟ

ಶಿವಮೊಗ್ಗದ ಕುಂಬಾರ ಗುಂಡಿಗೆ ತುಂಗೆಯ ನೀರು ನುಗ್ಗಿದಾಗ ಮಂಜುನಾಥ ಚಿತ್ರಮಂದಿರದ ಮಗ್ಗುಲಲ್ಲೇ ಇದ್ದ ಒಂದು ಕುಟುಂಬ ಅಲ್ಲಿಂದ ಹೊರಬರಲು ಸಾಧ್ಯವಾಗದೇ ಮುದುಡಿ ಹೋಗಿತ್ತು. ಕಾರಣ ಆ ಮನೆಯಲ್ಲಿದ್ದವರು 95ರ ಅಜ್ಜಿ ಹಾಗೂ ಪಾರ್ಶ್ವವಾಯು ಪೀಡಿತ ಮಗ !

ಇದು ಮ್ಯಾನ್ಮಾರ್‌ನಲ್ಲಿ ಬ್ರಿಟಿಷ್ ಸೈನಿಕರಾಗಿ ಕೆಲಸ ಮಾಡಿದ್ದ ಭಾರತದ ಎ.ಎಸ್.ನಾಯ್ಡು ಅವರ ಕುಟುಂಬ. ನಾಯ್ಡು ಅವರು ಆಂಧ್ರಪ್ರದೇಶದವರು. ಮ್ಯಾನ್ಮಾರ್‌ನಲ್ಲಿ ಕಾರ್ಯನಿರ್ವಹಿಸುವಾಗ ಅದೇ ದೇಶದಲ್ಲಿ ಹುಟ್ಟಿ ಬೆಳೆದ ಭಾರತ ಮೂಲದ ಗಂಗಮ್ಮ ಅವರನ್ನು ಮದುವೆಯಾಗಿದ್ದರು. ಗಂಗಮ್ಮ ಅವರ ಪೂರ್ವಜರು ಹಲವು ತಲೆಮಾರುಗಳಿಂದ ಆ ದೇಶದಲ್ಲೇ ನೆಲೆ ನಿಂತಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ನಾಯ್ಡು-ಗಂಗಮ್ಮ ದಂಪತಿ ‘ಭಾರತ ದರ್ಶನ’ಕ್ಕಾಗಿ ಶಿವಮೊಗ್ಗಕ್ಕೆ ಬಂದರು. ಆಗಿನಿಂದ ಈ ಕುಟುಂಬ ಇಲ್ಲೇ ನೆಲೆ ನಿಂತಿತು. ನಾಯ್ಡು ಈಗಿಲ್ಲ. ಗಂಗಮ್ಮಅವರ ಪುತ್ರ ಶ್ರೀನಿವಾಸ್‌ 17 ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತರಾದವರು ಇಂದಿಗೂ ಚೇತರಿಸಿಕೊಂಡಿಲ್ಲ.

ಅಂದು ನಿರಂತರವಾಗಿ ಸುರಿದ ಮಳೆ, ಉಕ್ಕಿ ಹರಿದ ತುಂಗೆಯ ಆರ್ಭಟಕ್ಕೆ ಈ ಕುಟುಂಬವಿದ್ದ ಮನೆಯೂ ಕೊಚ್ಚಿ ಹೋಯಿತು. ಸ್ವಯಂಸೇವಕರು ಇವರಿಬ್ಬರ ಜೀವ ಉಳಿಸಿದ್ದಾರೆ.

ನೆರವಾದವರ ನೆನೆಯುತ್ತಾ…

‘ನಾವು ಶಿವಮೊಗ್ಗದ ಶಾಂತಮ್ಮ ಲೇಔಟ್‌ನಲ್ಲಿದ್ದೇವೆ. ಆ.9 ರಂದು ನಮ್ಮ ಬಡಾವಣೆಗೆ ನೀರು ನುಗ್ಗಿತು. ಬೆಳಗಿನ ಜಾವ 2ಗಂಟೆ ಹೊತ್ತಿಗೆ ಮನೆಯ ತುಂಬಾ ನೀರು ಆವರಿಸಿಕೊಳ್ಳತೊಡಗಿತು. ತಕ್ಷಣ ನಾನು ಬಟ್ಟೆಗಳನ್ನು ಎತ್ತಿಕೊಂಡು ಹೆಂಡತಿ, ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹೊರ ಬಂದೆ. ಎಲ್ಲರೂ ಮಾರಿಯಮ್ಮ ದೇವಸ್ಥಾನದ ಬಳಿ ಕುಳಿತೆವು.ಚಳಿಗೆ ನಡುಗುತ್ತಿದ್ದ ನಮ್ಮನ್ನುಕಂಡ ಸಮೀಪದ ಮನೆಯಹಸೀನಾ, ಮನೆ ಒಳಗೆ ಕರೆದು ಬಿಸಿ ಚಹಾ ಮಾಡಿಕೊಟ್ಟರು. ಅವರ ಮನೆ ತುಸು ಎತ್ತರದಲ್ಲಿದ್ದ ಕಾರಣ ಸಮಸ್ಯೆಯಾಗಲಿಲ್ಲ. ಅಂದು ಅವರ ಮನೆಯಲ್ಲೇ ಉಳಿದುಕೊಂಡೆವು. ಸಂಕಷ್ಟದಲ್ಲಿ ಅವರು ತೋರಿದ ಪ್ರೀತಿಗೆ ಜಾತಿ, ಧರ್ಮ ಇದೆಯೇ?’

ಆ 24 ಗಂಟೆಗಳ ಸಂಕಷ್ಟದ ಸ್ಥಿತಿ ನೆನೆದು ಕಳವಳಗೊಳ್ಳುತ್ತಲೇ, ಸಂಕಷ್ಟದಲ್ಲಿ ನೆರವಾದವರನ್ನು ಸ್ಮರಿಸಿದರು ಶಿವಮೊಗ್ಗದ ಸ್ಥಳೀಯ ಪತ್ರಿಕಾ ಕಚೇರಿಯಲ್ಲಿ ಕೆಲಸ ಮಾಡುವ ಜೋಸೆಫ್‌ ಟೆಲ್ಲಿಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT