ಭಾರಿ ಮಳೆ: ಜಲಾಶಯಗಳಲ್ಲಿ ಏರಿದ ನೀರಿನ ಪ್ರಮಾಣ

7
ಮತ್ತೆ ಮುಂದುವರಿದ ಮಳೆ ಘಾಟ್ ರಸ್ತೆಯಲ್ಲಿ ಮಂಜು ಮುಸುಕಿದ ವಾತವರಣ

ಭಾರಿ ಮಳೆ: ಜಲಾಶಯಗಳಲ್ಲಿ ಏರಿದ ನೀರಿನ ಪ್ರಮಾಣ

Published:
Updated:
Deccan Herald

ಹೊಸನಗರ: ತಾಲ್ಲೂಕಿನಲ್ಲಿ ಒಂದು ವಾರ ಬಿಡುವು ನೀಡಿದ್ದ ಮಳೆ ಶನಿವಾರ ಮತ್ತು ಭಾನುವಾರ ಮತ್ತೆ ಭಾರಿ ಪ್ರಮಾಣದಲ್ಲಿ ಸುರಿಯುತ್ತಿದೆ. ನಗರ ಹೋಬಳಿಯಲ್ಲಿ ಎಡಬಿಡದೆ ಮಳೆ ಹೊಯ್ಯುತ್ತಿದೆ.

ತಾಲ್ಲೂಕಿನ ಮಾಸ್ತಿಕಟ್ಟೆ, ಯಡೂರು, ಹುಲಿಕಲ್, ನಗರ ನಿಟ್ಟೂರು, ಸಂಪೇಕಟ್ಟೆ ಭಾಗಗಳಲ್ಲಿ ದಿನವಿಡೀ ಮಳೆ ಸುರಿಯುತ್ತಿದೆ.

ಜಲಾನಯನ ಮತ್ತು ಘಟ್ಟ ಪ್ರದೇಶಗಳಲ್ಲಿ ಮಳೆಯ ಜತೆಯಲ್ಲಿ ಶೀತಗಾಳಿಯೂ ಬೀಸುತ್ತಿದೆ. ಹುಲಿಕಲ್ ಮತ್ತು ಕೊಲ್ಲೂರು ಘಾಟ್ ರಸ್ತೆ ಮಾರ್ಗದಲ್ಲಿ ಮಂಜು ಮುಸುಕಿದ ವಾತವರಣವಿದ್ದು ವಾಹನ ಸಂಚಾರ ಕಷ್ಟಸಾಧ್ಯವಾಗಿದೆ.

ಅಲ್ಲದೇ ಭಾನುವಾರದಲ್ಲಿ ರಜೆ ದಿನವಾದ ಕಾರಣ ಪ್ರಯಾಣಿಕರ ವಾಹನ ಸಂಚಾರ ದಟ್ಟಣೆ ಇದ್ದು ಬೆಳಿಗ್ಗೆ ಮತ್ತು ಸಂಜೆ ಘಾಟ್ ಪ್ರದೇಶದಲ್ಲಿ ವಾಹನ ಓಡಿಸುವುದು ಒಂದು ಸವಾಲು ಆಗಿದೆ.
ಹುಲಿಕಲ್ ಘಾಟ್‌ನಲ್ಲಿ ಬೃಹತ್ ಗಾತ್ರದ ವಾಹನಗಳು ಓಡಾಡುತ್ತಿದ್ದು ರಸ್ತೆ ಅಂಚಿನಲ್ಲಿ ಕುಸಿತಕ್ಕೊಳಗಾಗಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ತಾಲೂಕಿನಲ್ಲಿ ಮಳೆ ಹೆಚ್ಚಾದ ಪರಿಣಾಮ ಇಲ್ಲಿನ ಶರಾವತಿ ಹಾಗೂ ಅದರ ಉಪನದಿಗಳು ಸೇರಿದಂತೆ ಎಲ್ಲಾ ನದಿಗಳು, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.

ನಿಟ್ಟೂರು ಸಮೀಪದ ಬೇಳೂರು - ಮಡವಿ ಸಂಪರ್ಕ ರಸ್ತೆಯ ಮೇಲೆ ಪಕ್ಕದ ಹಳ್ಳದ ಪ್ರವಾಹ ಉಕ್ಕಿ ಹರಿಯುತ್ತಿರುವುದರಿಂದ ಶನಿವಾರ ಸಂಜೆ ಕೆಲ ಗಂಟೆಗಳ ಕಾಲ ರಸ್ತೆ ಸಂಪರ್ಕ ಬಂದ್ ಆಗಿತ್ತು.

ಯಡೂರು, ಸುಳುಗೋಡು ಗ್ರಾ.ಪಂ ವ್ಯಾಪ್ತಿಯಲ್ಲಿನ ಕೆಲ ಹಳ್ಳಗಳೂ ಉಕ್ಕಿ ಹರಿದು ಪಕ್ಕದ ಜಮೀನು, ರಸ್ತೆಮೇಲೆ ಹರಿದಿದೆ.

ಮಳೆ ಪ್ರಮಾಣ: ಇಂದಿನ ವರದಿಯಂತೆ ಮಾಣಿಯಲ್ಲಿ 130ಮೀ.ಮೀ, ಯಡೂರು 172ಮೀ.ಮೀ, ಹುಲಿಕಲ್ 123 ಮೀ.ಮೀ, ಮಾಸ್ತಿಕಟ್ಟೆ 110 ಮೀ.ಮೀ, ಚಕ್ರಾ 52ಮೀ.ಮೀ, ಸಾವೇಹಕ್ಕಲು 108 ಮೀ.ಮೀ ಮಳೆಯಾಗಿದೆ.

ಜಲಾಶಯಗಳ ನೀರಿನ ಮಟ್ಟ: ತಾಲೂಕಿನ ಪ್ರಮುಖ ಜಲಾಶಯಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮಾಣಿ, ಸಾವೇಹಕ್ಕಲು, ಚಕ್ರಾ ಜಲಾಶಯಗಳು ಭರ್ತಿಯತ್ತ ಸಾಗಿವೆ. ಮಾಣಿ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ 590.80 ಮೀ. ತಲುಪಿದ್ದು 5,871ಕ್ಯೂಸೆಕ್ ಒಳಹರಿವು ಇದೆ. ಮಾಣಿ ಜಲಾಶಯದ ಪಕ್ಕದ ಮಾಣಿ ಪಿಕ್ಅಪ್ ಡ್ಯಾಂನಲ್ಲಿ ನೀರಿನ ಸಂಗ್ರಹ ಮಟ್ಟ 562.30 ಮೀಟರ್ ತಲುಪಿದೆ. 1,797 ಕ್ಯೂಸೆಕ್ ಒಳಹರಿವು ಇದೆ.

ಸಾವೇಹಕ್ಕಲು ಜಲಾಶಯದಲ್ಲಿ 579 ಮೀ. ನೀರು ಸಂಗ್ರಹವಾಗಿದೆ. 1,977 ಕ್ಯೂಸೆಕ್ ಒಳ ಹರಿವು ಇದೆ. 1,785 ಕ್ಯುಸೆಕ್ ಹೂರ ಹರಿವು ಇದೆ. ಚಕ್ರಾ ಜಲಾಶಯದಲ್ಲಿ 570.24 ಮೀ. ನೀರು ಸಂಗ್ರಹ ಮಟ್ಟ ತಲುಪಿದೆ. 884 ಕ್ಯುಸೆಕ್ ಒಳಹರಿವು ಇದೆ.1,521 ಕ್ಯೂಸೆಕ್ ಹೊರ ಹರಿವು ಇದೆ ಎಂದು ಕೆಪಿಸಿ ಮೂಲಗಳು ತಿಳಿಸಿವೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !