ಪ್ರಯಾಣಿಕರಿಂದ ಅಧಿಕ ದರ ವಸೂಲಿ: ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ

7
ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ

ಪ್ರಯಾಣಿಕರಿಂದ ಅಧಿಕ ದರ ವಸೂಲಿ: ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ

Published:
Updated:

ಸಾಗರ: ಬೆಂಗಳೂರಿನಿಂದ ಸಾಗರ ಹಾಗೂ ಸಾಗರದಿಂದ ಬೆಂಗಳೂರಿಗೆ ಸಂಚರಿಸುವ ಖಾಸಗಿ ಬಸ್ ಗಳ ಮಾಲೀಕರು ಹಾಗೂ ಏಜೆಂಟರು ಪ್ರಯಾಣಿಕರಿಂದ ಹಬ್ಬದ ಸಂದರ್ಭದಲ್ಲಿ ಅಧಿಕ ದರ ವಸೂಲಿ ಮಾಡುತ್ತಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಗುರುವಾರ ಇಲ್ಲಿನ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

ಖಾಸಗಿ ಬಸ್ ಏಜೆಂಟರ ಸಂಘದ ಕೆ. ನಾಗರಾಜ್ ಎಂಬುವವರು ನೀಡಿರುವ ದೂರನ್ನು ಆಧರಿಸಿ ಎಂಟು ಖಾಸಗಿ ಬಸ್ ಮಾಲಿಕರಿಗೆ ಉಪವಿಭಾಗಾಧಿಕಾರಿಗಳು ಸೆ.6ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

ಖಾಸಗಿ ಬಸ್ ಮಾಲಿಕರು ತಮ್ಮ ವಕೀಲರೊಂದಿಗೆ ಗುರುವಾರ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಬಸ್ ಮಾಲಿಕರ ಪರವಾಗಿ ವಾದ ಮಂಡಿಸಿದ ವಕೀಲ ಎಂ.ಎಸ್. ಹರೀಶ್ ಕುಮಾರ್ ಭಾರತೀಯ ದಂಡಪ್ರಕ್ರಿಯೆ ಸಂಹಿತೆ ಕಲಂ 133 ರ ಮೇರೆಗೆ ಬಸ್ ಮಾಲಿಕರಿಗೆ ನೋಟಿಸ್ ನೀಡಿರುವ ಕ್ರಮವೇ ಸಿಂಧುವಲ್ಲ. ಈ ಕಲಂನಲ್ಲಿ ವಿವರಿಸಿರುವ ಯಾವುದೇ ರೀತಿಯ ಸಾರ್ವಜನಿಕ ಉಪದ್ರವ ಬಸ್ ಮಾಲೀಕರಿಂದ ಉಂಟಾಗಿಲ್ಲ ಎಂದು ಪ್ರತಿಪಾದಿಸಿದರು.

ಬಸ್ ಮಾಲಿಕರ ಮೇಲೆ ನೀಡಲಾಗಿರುವ ದೂರಿನ ಹಿಂದೆ ದುರುದ್ದೇಶವಿದೆ. ವೃತ್ತಿ ವೈಷಮ್ಯದಿಂದ ಈ ದೂರು ನೀಡಲಾಗಿದೆ. ಇಂತಹ ದೂರುಗಳನ್ನು ಪರಿಶೀಲಿಸಲು ಪ್ರತ್ಯೇಕ ಪ್ರಾಧಿಕಾರ ಇರುವುದರಿಂದ ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ವ್ಯಾಪ್ತಿಗೆ ಈ ವಿಷಯ ಬರುವುದಿಲ್ಲ ಎಂದು ವಾದಿಸಿದರು.

ಪ್ರಕರಣದ ದೂರುದಾರರಾದ ನಾಗರಾಜ್ ವಿಚಾರಣೆ ಸಂದರ್ಭದಲ್ಲಿ ಗೈರುಹಾಜರಾಗಿದ್ದರು. ಪ್ರಯಾಣಿಕರ ಪರವಾಗಿ ವಾದ ಮಂಡಿಸಿದ ಬಳಕೆದಾರ ವೇದಿಕೆಯ ಕೆ.ಎನ್. ವೆಂಕಟಗಿರಿ, ವರ್ಷದ 355 ದಿನಗಳಲ್ಲಿ ಸಾಗರದಿಂದ ಬೆಂಗಳೂರಿಗೆ ₹ 400 ರ ದರ ನಿಗದಿ ಮಾಡುವ ಬಸ್ ಮಾಲೀಕರು ಹಬ್ಬದ ಸಂದರ್ಭದಲ್ಲಿ ₹ 1,200 ದರ ನಿಗದಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಾಗರದಿಂದ ಬೆಂಗಳೂರಿಗೆ ಸಂಚರಿಸುವ ಗಜಾನನ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಈ ರೀತಿ ಹಬ್ಬದ ಸಂದರ್ಭದಲ್ಲಿ ದರ ಏರಿಸುವ ಪದ್ಧತಿ ಇಲ್ಲ. ಅವರಿಗೆ ನಿರ್ವಹಣೆ ಸಾಧ್ಯವಿರುವಾಗ ಉಳಿದ ಬಸ್ ಮಾಲೀಕರಿಗೆ ಸಾಧ್ಯವಿಲ್ಲ ಎನ್ನುವ ವಾದ ಸೂಕ್ತವಲ್ಲ. ಕಾಂಟ್ರಾಕ್ಟ್ ಕ್ಯಾರಿಯೇಜ್ ನಿಯಮಾವಳಿ ಉಲ್ಲಂಘಿಸಿ ಬಸ್ ಸಂಚಾರ ನಡೆಯುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಎದ್ದುಕಾಣುತ್ತಿದೆ. ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಮತ್ತು ಅನ್ಯಾಯವನ್ನು ಉಪವಿಭಾಗಾಧಿಕಾರಿಗಳು ತಮ್ಮ ಅಧಿಕಾರ ಬಳಸಿ ಸರಿಪಡಿಸಬೇಕು ಎಂದು ಅಹವಾಲು ಮಂಡಿಸಿದರು.

ಎರಡೂ ಕಡೆಯ ವಾದವನ್ನು ಆಲಿಸಿದ ಉಪವಿಭಾಗಾಧಿಕಾರಿ ನಾಗರಾಜ್ ಆರ್.ಸಿಂಗ್ರೇರ್ ಪ್ರಕರಣದ ಆದೇಶವನ್ನು ಕಾಯ್ದಿರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !