ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಿಷ್ಣುತೆಗೆ ಹೆಸರಾದ ನರೇಗಲ್‌ ದರ್ಗಾ

Last Updated 6 ಮೇ 2018, 10:47 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ ನರೇಗಲ್‌ನ ದರ್ಗಾ ಸೋದರತ್ವ, ಸಾಮರಸ್ಯ, ಸಹಿಷ್ಣುತೆಗೆ ಹೆಸರಾಗಿದೆ. ಇಲ್ಲಿ ಹಿಂದೂ, ಮುಸ್ಲಿಂ ಸಮುದಾಯದವರು ಒಂದಾಗಿ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದು ಸಾಮಾನ್ಯವಾಗಿದೆ.

ದರ್ಗಾದ ಉರುಸ್‌ ಎಲ್ಲ ಸಮುದಾಯದವರಲ್ಲಿ ಭಾವೈಕ್ಯದ ಸಂದೇಶವನ್ನು ಸಾರುತ್ತಾ ಬರುತ್ತಿದೆ. ಈ ನೆಲದಲ್ಲಿ ಸಂತರು, ಶರಣರು, ದಾಸರು ನೆಲೆಸಿದ್ದರು. ಅವರ ಸಾಲಿನಲ್ಲಿ ಬರುವ ಸಂತ ರೆಹಮಾನ್ ಶಾವಲಿ. ತಪಸ್ವಿಗಳಾದ ಅವರು ಸರ್ವರಿಗೂ ಒಳಿತನ್ನು ಬಯಸುವ ಮೂಲಕ ಸಮಾಜಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಅಲಿ ಆದಿಲ್‌ ಶಾಹಿ ಆಡಳಿತಾವಧಿಯಲ್ಲಿ ಹಿರಿಯ ಧಾರ್ಮಿಕ ಚಿಂತಕರಾಗಿ ಕಾರ್ಯನಿರ್ವಹಿಸಿರು. ರಕ್ಕಸತಂಗಡಿ ಯುದ್ಧದ ನಂತರ ದೇಶದ ವಿವಿಧೆಡೆ ಸಂಚರಿಸಿ, ನರೇಗಲ್‌ನಲ್ಲಿ ಬಂದು ನೆಲೆಸಿದರು.

ರೆಹಮಾನ್ ಶಾವಲಿ (ನರೇಗಲ್ ಅಜ್ಜ) ಅವರು ಬಡವ, ಶ್ರೀಮಂತ, ಮೇಲು, ಕೀಳು, ಹಿಂದೂ, ಮುಸ್ಲಿಂ ಎಂಬ ಭೇದ, ಭಾವವಿಲ್ಲದೆ, ಸಕಲರಲ್ಲಿ ಪರಮಾತ್ಮನನ್ನು ಕಂಡರು.

ಅಜ್ಜನ ಪವಾಡ: ರೆಹಮಾನ್ ಶಾವಲಿ ಅವರು ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಟಿ.ಸಿ. ಬಂದು ಅವರನ್ನು ಟಿಕೆಟ್ ಕೇಳಿದರು. ಟಿಕೆಟ್ ಇಲ್ಲದ ಕಾರಣ ಅಜ್ಜನವರನ್ನು ನಿಲ್ದಾಣಯೊಂದರಲ್ಲಿ ಕೆಳಗೆ ಇಳಿಸಿದರು. ಕೆಲವು ನಿಮಿಷಗಳ ನಂತರ ರೈಲು ಇದ್ದಕ್ಕಿದಂತೆ ಬಂದ್‌ ಆಯಿತು. ಸರ್ವ ಪ್ರಯತ್ನ ಮಾಡಿದರೂ ರೈಲು ಆರಂಭವಾಗಲಿಲ್ಲ. ಪ್ರಯಾಣಿಕರ ನೆರವಿನಿಂದ ರೈಲ್ವೆ ಅಧಿಕಾರಿಗಳು, ದರ್ಗಾದ ಅಜ್ಜನವರನ್ನು ಹುಡಿಕೊಂಡು ಬಂದು ತಪ್ಪಾಪಿತು ಎಂದು ಬೇಡಿಕೊಂಡರು.

ಅಧಿಕಾರಿಗಳು ಅಜ್ಜನ ಆಶೀರ್ವಾದ ಪಡೆದುಕೊಂಡು ಹೋದ ನಂತರ ಬಂದ್‌ ಆಗಿದ್ದ ರೈಲು ಮತ್ತೆ ಆರಂಭವಾಯಿತು. ಬೇಸಿಗೆ ಸಮಯದಲ್ಲಿ ಅಜ್ಜನವರು ಕಾಡಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ, ಜತೆಗಿದ್ದವರು ಬಾಯಾರಿಕೆಯಾಗಿದೆ ಎಂದರು.

ಅಜ್ಜನವರು, ಸಮೀಪದಲ್ಲೇ ಬಿದ್ದಿದ್ದ ಕಲ್ಲನ್ನು ತಗೆದುಹಾಕಿ ನೀರು ಹರಿಸಿದರು. ಹೀಗೆ ನರೇಗಲ್‌ ಅಜ್ಜನವರಿಂದ ಹಲವು ಪವಾಡಗಳು ನಡೆದಿವೆ’ ಎಂದು ದರ್ಗಾದ ಭಕ್ತರಾದ ಬೀಬಿಜಾನ್ ಸ್ಮರಿಸಿದರು.

‘ನರೇಗಲ್‌ನಿಂದ ಬೇರೆ ಊರು ಗಳಿಗೆ ಸಂಚರಿಸುತ್ತಿದ್ದ ರೆಹಮಾನ್ ಶಾವಲಿ ಅವರು, ಭಕ್ತರ ಮನೆಯಲ್ಲಿ ಉಳಿದುಕೊಳ್ಳುತ್ತಿರಲಿಲ್ಲ. ಆಯಾ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ತಂಗುತ್ತಿದ್ದರು. ದೇವಸ್ಥಾನದಲ್ಲೇ ಪೂಜೆ, ಪುನಸ್ಕಾರ ನೆರವೇರಿಸುತ್ತಿದ್ದರು. ಅವರ ಆಚರಣೆಗಳು ಏಕತೆಯ ಸಂದೇಶ ಸಾರುತ್ತಿದ್ದವು’ ಎಂದು ಅವರು ಹೇಳಿದರು.ಇಲ್ಲಿಗೆ ಬರುವ ಭಕ್ತರು ದರ್ಗಾದ ಆವರಣದಲ್ಲಿರುವ ಲಕ್ಷ್ಮಿದೇವಿಗೆ ಕರ್ಪೂರ ಬೆಳಗಿ, ಕರಿಗಡಬು ನೈವೇದ್ಯ ಅರ್ಪಿಸುತ್ತಾರೆ.

ದರ್ಗಾದ ಉರುಸ್‌ನ ಮೇ 8ರಿಂದ

ನರೇಗಲ್‌ ದರ್ಗಾದ ಉರುಸ್‌ ಅಂಗವಾಗಿ ಮೇ 8 ರಂದು ಕೋಚಲಾಪೂರ ಗ್ರಾಮದಿಂದ ಲಕ್ಷ್ಮಿದೇವಿಯ ಪಲ್ಲಕ್ಕಿ ಹಾಗೂ ಪಟ್ಟಣದ ತೆಗ್ಗಿನಕೇರಿ ಓಣಿಯ ಮುಜಾವರ ಅವರ ಮನೆಯಿಂದ ಗಂಧದ ಮೆರವಣಿಗೆ ನಡೆಯಲಿದೆ. ಮೇ 9ರಂದು ಬೆಳಿಗ್ಗೆ 6ರಿಂದ 10ರವರೆಗೆ ಉರುಸ್‌, ಅನ್ನಸಂತರ್ಪಣೆ, ದೀಪೋತ್ಸವ ಹಾಗೂ ಮದ್ದು ಹಾರಿಸುವ ಕಾರ್ಯಕ್ರಮ, ಮೇ 10ರಂದು ಮರಿ ಉರುಸ್‌ ನಡೆಯಲಿದೆ.

–ಹುಚ್ಚೇಶ್ವರ ಅಣ್ಣಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT