ಸೋಮವಾರ, ಡಿಸೆಂಬರ್ 9, 2019
20 °C
55 ವಿದ್ಯಾರ್ಥಿನಿಯಲಗಳಿಗೆ ಸ್ವಂತ ಕಟ್ಟಡ; 8 ಕಾಮಗಾರಿಗಳು ಪ್ರಗತಿ

ವಿಜಯಪುರ | ಬಾಡಿಗೆ ಕಟ್ಟಡದಲ್ಲಿ 46 ಹಾಸ್ಟೆಲ್‌!

ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ವಿಜಯಪುರ: ಜಿಲ್ಲೆಯಲ್ಲಿ ಮೆಟ್ರಿಕ್ ಪೂರ್ವ ಬಾಲಕ ಹಾಗೂ ಬಾಲಕಿಯರಿಗೆ, ಮೆಟ್ರಿಕ್‌ ನಂತರದ ಬಾಲಕ ಹಾಗೂ ಬಾಲಕಿಯರಿಗೆ 101 ಹಾಸ್ಟೆಲ್‌ಗಳು ಮಂಜೂರಾಗಿದ್ದು, ಈ ಪೈಕಿ 46 ಹಾಸ್ಟೆಲ್‌ಗಳನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ.

55 ಹಾಸ್ಟೆಲ್‌ಗಳು ಸ್ವಂತ ಕಟ್ಟಡ ಹೊಂದಿವೆ. ಎಂಟು ಹಾಸ್ಟೆಲ್‌ಗಳ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿವೆ. 36 ಹಾಸ್ಟೆಲ್‌ಗಳಿಗೆ ನಿವೇಶನ ಲಭ್ಯವಿದ್ದು, ಇನ್ನಷ್ಟೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಬೇಕಾಗಿದೆ. ಎರಡು ಹಾಸ್ಟೆಲ್‌ಗಳಿಗೆ ನಿವೇಶನ ಪಡೆಯಬೇಕಾಗಿದೆ.

ವಿದ್ಯಾರ್ಥಿನಿಲಯ ಒಟ್ಟು ಸ್ವಂತ ಕಟ್ಟಡ ಬಾಡಿಗೆ ಕಟ್ಟಡ
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ 52 41 11
ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ 12 08 04
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ 13 03 10
ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ 24 03 21
ಒಟ್ಟು 101 55 46

ಕಾಮಗಾರಿ ಎಲ್ಲೆಲ್ಲಿ?: ಬಸವನಬಾಗೇವಾಡಿಯಲ್ಲಿ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯಕ್ಕೆ ₹ 3.35 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಏಜೆನ್ಸಿಗೆ ಪೂರ್ಣ ಹಣವನ್ನು ಬಿಡುಗಡೆ ಮಾಡಲಾಗಿದೆ. ವಿಜಯಪುರದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವೃತ್ತಿಪರ ವಸತಿ ನಿಲಯ ನಿರ್ಮಣಕ್ಕೆ ₹ 3.35 ಕೋಟಿ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದ್ದು, ಈ ಪೈಕಿ ₹ 1.60 ಕೋಟಿ ಬಿಡುಗಡೆಯಾಗಿದೆ. ವಿಜಯಪುರದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಸತಿ ನಿಲಯಕ್ಕೆ ₹ 3.35 ಕೋಟಿ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದ್ದು, ಈ ಪೈಕಿ ₹ 1.60 ಕೋಟಿ ಬಿಡುಗಡೆಯಾಗಿದೆ.

ವಿಜಯಪುರದ ಟಕ್ಕೆಯಲ್ಲಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ₹ 3.26 ಕೋಟಿ, ಮೆಟ್ರಿಕ್ ನಂತರದ ಬಾಲಕಿಯರ ಸ್ನಾತಕೋತ್ತರ ವಿದ್ಯಾರ್ಥಿ ನಿಲಯ ₹ 3.27 ಕೋಟಿ, ಸಿಂದಗಿಯಲ್ಲಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ₹ 3.25 ಕೋಟಿ, ಇಂಡಿ ತಾಲ್ಲೂಕು ಝಳಕಿಯಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ₹ 3.25 ಕೋಟಿ ಹಾಗೂ ಬಸವನಬಾಗೇವಾಡಿಯಲ್ಲಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ₹ 3.25 ಕೋಟಿ ಅಂದಾಜು ಮೊತ್ತದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ.

ಈ ಕಾಮಗಾರಿಗಳ ಪೈಕಿ ಕೆಲವು ಮುಕ್ತಾಯದ ಹಂತದಲ್ಲಿದ್ದರೆ, ಕೆಲವಡೆ ಪೇಂಟಿಂಗ್ ಕಮಗಾರಿ ಪ್ರಗತಿಯಲ್ಲಿದೆ. ಝಳಕಿಯಲ್ಲಿ ನಿರ್ಮಾಣವಾಗಿರುವ ವಿದ್ಯಾರ್ಥಿ ನಿಲಯದ ಕಾಮಗಾರಿ ಪೂರ್ಣಗೊಂಡಿದ್ದು, ಅದನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತನ್ನ ವಶಕ್ಕೆ ಪಡೆದಿದೆ.

‘ಬಾಡಿಗೆ ಕಟ್ಟಡದಲ್ಲಿ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ನೀರು, ಗಾಳಿ, ಬೆಳಕಿನ ಸಮಸ್ಯೆ ಇದೆ. ಜೊತೆಗೆ ಕೋಣೆಗಳು ಇಕ್ಕಟ್ಟಾಗಿವೆ. ಆದ್ದರಿಂದ, ಆದಷ್ಟು ಬೇಗ ಹೊಸ ಕಟ್ಟಡಗಳನ್ನು ನಿರ್ಮಿಸಿ, ಅಲ್ಲಿಗೆ ನಮ್ಮನ್ನು ಸ್ಥಳಾಂತರಿಸಬೇಕು’ ಎಂಬುದು ಬಾಡಿಗೆ ಕಟ್ಟಡಗಳಲ್ಲಿರುವ ವಿದ್ಯಾರ್ಥಿಗಳ ಒತ್ತಾಯವಾಗಿದೆ.

‘ನಿವೇಶನ ಲಭ್ಯವಾದ ತಕ್ಷಣ ಕೇಂದ್ರ ಕಚೇರಿಗೆ ಮಾಹಿತಿ ಕಳುಹಿಸಲಾಗುತ್ತದೆ. ಸರ್ಕಾರವು ಹಂತಹಂತವಾಗಿ ಅನುದಾನ ಬಿಡುಗಡೆ ಮಾಡುತ್ತದೆ. ಪ್ರಸಕ್ತ ವರ್ಷ ನಾಲ್ಕು ಹಾಸ್ಟೆಲ್‌ಗಳ ನಿರ್ಮಾಣಕ್ಕೆ ₹ 8 ಕೋಟಿ ಅನುದಾನ ಮಂಜೂರು ಮಾಡಿದ್ದು, ಈ ಪೈಕಿ ಮೊದಲ ಕಂತಿನಲ್ಲಿ ಶೇ 50ರಷ್ಟು ಹಣವನ್ನು ಬಿಡುಗಡೆ ಮಾಡುತ್ತದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗಂಗಾಧರ ದೊಡ್ಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು