ಗುರುವಾರ , ಜನವರಿ 23, 2020
28 °C

ರೈತರ ಬಂಧನಕ್ಕೆ ರೈತ ಸಂಘ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಶಿವಮೊಗ್ಗ: ಪ್ರತಿಭಟನೆಗೆ ತೆರಳುತ್ತಿದ್ದ ರೈತರನ್ನು ರೈಲುನಿಲ್ದಾಣದಲ್ಲೇ ಬಂಧಿಸಿದ ಕ್ರಮಕ್ಕೆ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ತುಮಕೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ಪ್ರತಿಭಟನೆಗೆ ತೆರಳುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿದ್ದಾರೆ. ಇದು ಚಳವಳಿ ಹತ್ತಿಕ್ಕುವ ಕೇಂದ್ರ, ರಾಜ್ಯ ಸರ್ಕಾರಗಳ ಸರ್ವಾಧಿಕಾರಿ ಧೋರಣೆ ಎಂದು ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನಮ್ಮ ಹಕ್ಕು. ರೈತರು ಭಯೋತ್ಪಾದಕರಲ್ಲ. ಬೆಂಕಿ ಹಚ್ಚುತ್ತಿರಲಿಲ್ಲ, ಹಿಂಸೆ ರೈತ ಸಮುದಾಯದ ಉದ್ದೇಶವೂ ಅಲ್ಲ. ರೈತ ಸಂಘ ಗಾಂಧಿ ತತ್ವದ ಮೇಲೆ ರಚಿತವಾಗಿದೆ. ಇಂತಹ ಸಂಘದ ಸದಸ್ಯರನ್ನು ಮನೆ, ರೈಲುನಿಲ್ದಾಣ, ವಾಹನ ತಡೆದು ಬಂಧಿಸಿರುವುದು ಖಂಡನೀಯ ಎಂದರು.

8ಕ್ಕೆ ಗ್ರಾಮೀಣ ಕರ್ನಾಟಕ ಬಂದ್: ರೈತರ ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಿ ಜ.8ರಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಭಾರತ್ ಬಂದ್‌ಗೆ ಕರೆ ನೀಡಿದೆ. ಇದರ ಅಡಿಯಲ್ಲಿಯೇ ಗ್ರಾಮೀಣ ಕರ್ನಾಟಕ ಬಂದ್ನ ಡೆಯಲಿದೆ. ಅಂದು ಹಳ್ಳಿಗಳಲ್ಲಿ ರೈತರು ಸೇರಿ ರೈತವಿರೋಧಿ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸುವರು. ಹಳ್ಳಿಯಿಂದ ನಗರಕ್ಕೆ ತರಕಾರಿ, ಧಾನ್ಯ, ಹಾಲು ಉತ್ಪನ್ನಗಳ ಮಾರಾಟ ಮಾಡಲೂ ಹೋಗುವುದಿಲ್ಲ. ಇದು ಗ್ರಾಮೀಣ ರೈತರೇ ಮಾಡುವ ಬಂದ್ ಎಂದು ಮಾಹಿತಿ ನೀಡಿದರು.

ರಾಜ್ಯದ ರೈತ ಸಂಘಗಳೂ ಸೇರಿ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.
ಋಣಮುಕ್ತ ಕಾಯ್ದೆ, ಡಾ.ಸ್ವಾಮಿನಾಥ್ ವರದಿ ಜಾರಿ, ರಾಜ್ಯದ ಪ್ರವಾಹಪೀಡಿತರಿಗೆ ಸೂಕ್ತ ಪರಿಹಾರ, ಬಗರ್‌ಹುಕುಂ ಸಕ್ರಮ, ಭೂ ಸುಧಾರಣಾ ತಿದ್ದುಪಡಿ ಕೈಬಿಡಲು ಆಗ್ರಹಿಸಲಾಗುವುದು ಎಂದರು.

ಜ.4ರಂದು ಪೌರತ್ವ ಕಾಯ್ದೆ ಕುರಿತು ಬೆಂಗಳೂರಿನ ಸ್ಕೌಟ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಪರ ಮತ್ತು ವಿರೋಧವಾಗಿ ಮಾತನಾಡುವವರು ಸಭೆಯಲ್ಲಿ ಹಾಜರಿರುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಡಾ.ಚಿಕ್ಕಸ್ವಾಮಿ, ಹಿಟ್ಟೂರು ರಾಜು, ರಾಮಚಂದ್ರ, ಟಿ.ಎಂ.ಚಂದ್ರಪ್ಪ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು