ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಮಾಧ್ಯಮದ ಕಹಳೆ

ಸಂವಾದ ಕಾರ್ಯಕ್ರಮದಲ್ಲಿ ಕವಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ಮಾಹಿತಿ
Last Updated 25 ಜನವರಿ 2020, 12:01 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಮಾಡಲು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಧ್ವನಿ ಎತ್ತಲಾಗುವುದು ಎಂದು ಕವಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಸರ್ಕಾರಗಳು ಇಚ್ಚಾಶಕ್ತಿ ಪ್ರದರ್ಶಿಸಬೇಕು.ಇಷ್ಟು ವರ್ಷಗಳು ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಯಾವ ಸರ್ಕಾರಗಳೂ ಜಾರಿಗೊಳಿಸಿಲ್ಲ.ಸರ್ಕಾರಕ್ಕೂಸಾಹಿತ್ಯದ ಹಂಗು ಬೇಕಾಗಿಲ್ಲ. ಎಷ್ಟೋ ಸಾಹಿತ್ಯ ಸಮ್ಮೇಳನಗಳಲ್ಲಿ ನಿರ್ಣಯಗಳನ್ನು ಜಾರಿಗೊಳಿಸಬೇಕು ಎಂಬ ಒಂದೇ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಬಾರಿಯ ನಿರ್ಣಯಗಳ ಜಾರಿಗೆ ಒಕ್ಕೊರಲಿನಿಂದ ಒತ್ತಾಯಿಸಲಾಗುವುದು ಎಂದರು.

ನಾಡು-ನುಡಿ-ಸಾಹಿತ್ಯ ಈ ಮೂರು ವಿಷಯಗಳಿಗೂ ಇರುವ ವರ್ತಮಾನದ ತಲ್ಲಣ, ಸಮಸ್ಯೆ ಮತ್ತು ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಮ್ಮೇಳನದಲ್ಲಿ ಪ್ರಯತ್ನಿಸಲಾಗುವುದು. ಕನ್ನಡ ಮಾಧ್ಯಮಇಲ್ಲದೇಹೋದರೆ ಮಕ್ಕಳು ಕೈತಪ್ಪಿ ಹೋಗುತ್ತಾರೆ.ಕನ್ನಡದ ಅಸ್ಮಿತೆಯೇ ಕಳೆದುಹೋಗುತ್ತಿದೆ. ನಮ್ಮ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದ್ದಾರೆ ಎಂದು ಬೇಸರ ತೋಡಿಕೊಂಡರು.

ಪೂರ್ವದಿಂದ ಪಶ್ಚಿಮಕ್ಕೆ ವಾಲುತ್ತಿರುವಸಂದಿಗ್ಧದಲ್ಲಿಭಾಷೆ ಹಲವು ಬಿಕ್ಕಟ್ಟುಎದುರಿಸುತ್ತಿದೆ.ಕನ್ನಡ ಅನ್ನ ಕೊಡದ ಭಾಷೆ ಎಂಬಆಪಾದನೆ ಎದುರಿಸುತ್ತಿದೆ. ಮಕ್ಕಳು ಕನ್ನಡವನ್ನು ಮರೆತೇ ಹೋಗಿದ್ದಾರೆ. ಒಂದು ಸರಳ ಪದ ಬರೆಯಲು ಬಾರದ ಪದವೀಧರರುಹೇರಳವಾಗಿ ಸಿಗುತ್ತಾರೆ. ಕನ್ನಡಿಗರು ಸಾಹಿತ್ಯ, ಇತಿಹಾಸ, ನಮ್ಮ ಸಂಸ್ಕೃತಿಯಿಂದಲೂ ದೂರ ಸರಿಯುತ್ತಿದ್ದಾರೆ.ಕನ್ನಡ ಭಾಷೆ ಕ್ಷೀಣಿಸುತ್ತಾ ಸಾಗಿದೆ. ಕನ್ನಡದ ಬೀಜಾಕ್ಷರವೇ ಕಳೆದುಹೋಗಿದೆ. ಅಸ್ತಿತ್ವವೇ ನಾಶವಾಗುವ ಹಂತಕ್ಕೆ ತಲುಪಿದೆ.ಕೇವಲ ಭಾಷೆ ಮಾತ್ರವಲ್ಲ. ಸಂಗೀತ, ಸಾಹಿತ್ಯ, ಕಲೆಗಳಲ್ಲೂ ಪಾಶ್ಚಿಮಾತ್ಯದ ಕಡೆ ಒಲವು ತೋರುತ್ತಿದ್ದಾರೆ. ಭಾವಗೀತೆಗಳು, ಹಳೆಯ ಚಲನಚಿತ್ರಗೀತೆಗಳು, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಬಯಲಾಟ, ಹಬ್ಬ ಹುಣ್ಣಿಮೆ, ಜಾತ್ರೆ, ಉಡುಪು, ಊಟ ಎಲ್ಲವೂ ಬದಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

‘ಶಿವಮೊಗ್ಗ ಜಿಲ್ಲೆ ನನಗೆ ಆಪ್ತ ಊರು. ಹುಟ್ಟಿದ್ದು ಹೊದಿಗೆರೆ, ಓದಿದ್ದು ಭದ್ರಾವತಿ. ವೃತ್ತಿ ಚಿತ್ರದುರ್ಗ. ಉನ್ನತ ಶಿಕ್ಷಣ ಬೆಂಗಳೂರು. ಶಿವಮೊಗ್ಗದಿಂದ ಪಯಣ ಆರಂಭವಾಗಿ ರಾಜಧಾನಿ ತಲುಪಿತು. ವಿಶೇಷವಾಗಿ ಯೌವನದ ಆಕರ್ಷಣೆಯ ಕೇಂದ್ರ ಬಿಂದು ಶಿವಮೊಗ್ಗ’ ಎಂದು ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಬಿ.ಶಿವಕುಮಾರ್,ರಾಜ್ಯಸಮಿತಿ ನಿರ್ದೇಶಕ ಎನ್‌.ರವಿಕುಮಾರ್, ಅಮೃತ ವಾಹಿನಿ ಚಿತ್ರದ ನಿರ್ಮಾಪಕ ಸಂಪತ್ ಕುಮಾರ್, ಸಂಗೀತ ನಿರ್ದೇಶಕ ಉಪಾಸನ ಮೋಹನ್, ಬೆಳ್ಳಿಮಂಡಲ ಸಂಚಾಲಕ ವೈದ್ಯ, ವಿ.ಟಿ.ಅರುಣ್, ದೀಪಕ್ ಸಾಗರ್ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT