ಬೀದಿ ಬದಿಯ ವ್ಯಾಪಾರಿಗಳಿಗೆ ಗುರುತಿನ ಚೀಟಿ..!

7
1600 ಗುರುತಿನ ಚೀಟಿ ವಿತರಿಸಿರುವ ವಿಜಯಪುರ ಮಹಾನಗರ ಪಾಲಿಕೆ ಆಡಳಿತ

ಬೀದಿ ಬದಿಯ ವ್ಯಾಪಾರಿಗಳಿಗೆ ಗುರುತಿನ ಚೀಟಿ..!

Published:
Updated:
Deccan Herald

ವಿಜಯಪುರ: ನಗರದ ವಿವಿಧೆಡೆ ರಸ್ತೆ ಬದಿ, ಬೀದಿ ವ್ಯಾಪಾರ ನಡೆಸುವ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಆಡಳಿತ ಕಡ್ಡಾಯವಾಗಿ ಗುರುತಿನ ಚೀಟಿ ಪಡೆಯುವಂತೆ ಸೂಚಿಸಿದೆ. ನಿಗದಿತ ಗಡುವಿನೊಳಗೆ ಗುರುತಿನ ಚೀಟಿ ಪಡೆಯದಿದ್ದರೇ; ಅಂತಹ ವ್ಯಾಪಾರಿಗಳನ್ನು ಅನಧಿಕೃತ ವಹಿವಾಟುದಾರರು ಎಂದು ಘೋಷಿಸಿ, ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸಿದೆ.

ಮಹಾನಗರದ ವಿವಿಧೆಡೆ ದಿನದಿಂದ ದಿನಕ್ಕೆ ಬೀದಿ ಬದಿಯ ವ್ಯಾಪಾರಿಗಳ ಸಂಖ್ಯೆ ಹೆಚ್ಚುತ್ತಿದೆ. ಇವರ ಮಾಹಿತಿ ಎಲ್ಲಿಯೂ ದಾಖಲಾಗಿಲ್ಲ. ಇದರ ಜತೆಗೆ ಸಂಚಾರ ಕಿರಿಕಿರಿ, ಸ್ವಚ್ಛತೆ ಸಮಸ್ಯೆ ನಿವಾರಣೆಗಾಗಿ ಪಾಲಿಕೆ ಆಡಳಿತ ಮುಂದಾಗಿದ್ದು, ಇದರ ಅನುಷ್ಠಾನಕ್ಕಾಗಿ ಗುರುತಿನ ಚೀಟಿ ವಿತರಿಸಲು ಆರಂಭಿಸಿದೆ.

‘ಬೀದಿ ಬದಿಯ ವ್ಯಾಪಾರಿಗಳ ಕಾಯ್ದೆಯಡಿ, ಪ್ರತಿಯೊಬ್ಬ ಬೀದಿ ಬದಿಯ ವ್ಯಾಪಾರಿ ಕಡ್ಡಾಯವಾಗಿ ಇದೇ ೧೬ರೊಳಗಾಗಿ ₹ 500 ಶುಲ್ಕ ಪಾವತಿಸಿ ಪಾಲಿಕೆಯಿಂದ ಗುರುತಿನ ಚೀಟಿ ಪಡೆದುಕೊಳ್ಳಬೇಕು. ನಗರದ ವಿವಿಧೆಡೆ ವ್ಯಾಪಾರ ನಡೆಸುತ್ತಿರುವ 2000 ವ್ಯಾಪಾರಿಗಳು ಕಾರ್ಡ್‌ ಪಡೆದುಕೊಳ್ಳುವ ನಿರೀಕ್ಷೆಯಿದ್ದು, ಈಗಾಗಲೇ 1600 ವ್ಯಾಪಾರಿಗಳು ಕಾರ್ಡ್‌ ಪಡೆದುಕೊಂಡಿದ್ದಾರೆ.

ಗುರುತಿನ ಚೀಟಿ ಇಲ್ಲದ ವ್ಯಾಪಾರಿಗಳ ವಿರುದ್ಧ ಇದೇ 17 ರಿಂದ ಕಾನೂನು ಪ್ರಕಾರ ಕಾರ್ಯಾಚರಣೆಗೆ ಇಳಿಯಲಾಗುವುದು. ನೋಂದಣಿಯಾದ ಸಂಖ್ಯೆಗಿಂತ ಒಬ್ಬರೇ ಹೆಚ್ಚಿಗೆ ಇದ್ದರೂ; ಅಂಥವರ ವಿರುದ್ಧ ಕ್ರಮ ಕೈಕೊಳ್ಳಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುರುತಿನ ಚೀಟಿ ಪಡೆದ ಬೀದಿ ಬದಿಯ ವ್ಯಾಪಾರಿಗಳು ಇನ್ಮುಂದೆ ತಮಗೆ ತಿಳಿದ ಜಾಗದಲ್ಲಿ ವ್ಯಾಪಾರ ನಡೆಸುವಂತಿಲ್ಲ. ಪಾಲಿಕೆ ಗುರುತಿಸಿದ ನಿರ್ದಿಷ್ಟ ಪ್ರದೇಶದಲ್ಲಿ ವ್ಯವಹಾರ ನಡೆಸಬೇಕು. ಇದರಿಂದ ಸುಗಮ ಸಂಚಾರದ ಜತೆಗೆ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿರುವ ಅಂಗಡಿಕಾರರ ವ್ಯಾಪಾರಕ್ಕೆ ಆಗುತ್ತಿದ್ದ ತೊಂದರೆ ಕೂಡ ನಿವಾರಣೆ ಆಗಲಿದೆ’ ಎಂದು ಆಯುಕ್ತರು ಹೇಳಿದರು.

‘ಪ್ರತಿಯೊಬ್ಬ ಬೀದಿ ವ್ಯಾಪಾರಿಗೂ ಗುರುತಿನ ಚೀಟಿ ನೀಡುತ್ತಿರುವುದು ಒಳ್ಳೆಯ ನಿರ್ಧಾರ. ಅವರು ಹೇಳಿದಂತೆ ವಾರದ ಹಿಂದೆಯೇ ಹಣ ತುಂಬಿ ಪಾಲಿಕೆಯಿಂದ ಕಾರ್ಡ್ ಪಡೆದುಕೊಳ್ಳಲಾಗಿದೆ. ಇದರಿಂದ ನಮಗೂ ಕೂಡ ಪರವಾನಗಿ ಸಿಕ್ಕಿದಂತಾಗಿದೆ.

ಎಲ್ಲಾ ಅಂಗಡಿಗಳಿಗೆ ನಂಬರ್‌ ನೀಡಿದ್ದರಿಂದ, ನಮಗೆ ನಿರ್ದಿಷ್ಟ ಪಡಿಸಿದ ಜಾಗದಲ್ಲಿ ಯಾವುದೇ ತೊಂದರೆ ಇಲ್ಲದಂತೆ ವ್ಯವಹಾರ ನಡೆಸಲು ಅನುಕೂಲ ಆಗಲಿದೆ’ ಎನ್ನುತ್ತಾರೆ ಜೈನ್‌ ಮಂದಿರ ರಸ್ತೆಯ ಬಟ್ಟೆ ವ್ಯಾಪಾರಿ ಚಂದ್ರಕಾಂತ ಕರಣಿ, ಹಣ್ಣು ವ್ಯಾಪಾರಿ ಅಲ್ಲಾಬಕ್ಷ ಬಾಗವಾನ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !