ಸೋಮವಾರ, ಜನವರಿ 20, 2020
17 °C

ಪೊಲೀಸರಿಗೂ ಆಸ್ತಿ ಘೋಷಣೆ ಕಡ್ಡಾಯಳ ಐಜಿಪಿ ಅಮೃತ್ ಪೌಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಯೂ ಪ್ರತಿ ವರ್ಷ ತಪ್ಪದೇ ಆಸ್ತಿ ಘೋಷಣೆ ಮಾಡಿಕೊಳ್ಳಬೇಕು. ತಪ್ಪು ಮಾಹಿತಿ ನೀಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪೂರ್ವ ವಲಯ ಐಜಿಪಿ ಅಮೃತ್ ಪೌಲ್ ಎಚ್ಚರಿಸಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಬುಧವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೂರ್ವವಲಯ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಸಬ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡುವ ಅಧಿಕಾರವಿದೆ. ಆದರೂ, ಕೌಟುಂಬಿಕ ಕಾರಣಗಳಿಗಾಗಿ ಅವರನ್ನು ಬಹು ವರ್ಷ ಒಂದೇ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ. ಆರೋಪಗಳು ಕೇಳಿಬಂದರೆ ವರ್ಗಾವಣೆ ಅನಿವಾರ್ಯ. ಒಳ್ಳೆಯ ಅಧಿಕಾರಿಗಳಿಗೆ ಸದಾ ಬೆಂಬಲ ನೀಡಲಾಗುವುದು ಎಂದರು.

ಶೇ 10ರಷ್ಟು ಸಿಬ್ಬಂದಿ ಕೊರತೆ ಇದೆ. ಪ್ರತಿ ವರ್ಷ ಸರ್ಕಾರ 5 ಸಾವಿರದಿಂದ 6 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತಿದೆ. ಇತರೆ ದೇಶಗಲ್ಲಿ 250 ಜನರಿಗೆ ಒಬ್ಬರು ಪೊಲೀಸ್ ಇದ್ದರೆ, ಭಾರತದಲ್ಲಿ 450 ಜನರಿಗೆ ಒಬ್ಬರು ಇದ್ದಾರೆ. ನಿವೃತ್ತಿ, ಹೊಸ ಠಾಣೆಗಳ ರಚನೆ, ಹೊಸ ಸ್ವರೂಪದ ಕೆಲಸಗಳ ಪರಿಣಾಮ ಸಿಬ್ಬಂದಿ ಕೊರತೆ ಎಂದಿಗೂ ಇರುತ್ತದೆ. ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ಪೊಲೀಸರು ಉತ್ತಮ ಕೆಲಸ ಮಾಡಬೇಕು. ಸಾರ್ವಜನಿಕರ ವಿಶ್ವಾಸಗಳಿಸಬೇಕು. ಅಪರಾಧ ಮಟ್ಟಹಾಕಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯ ಹಲವೆಡೆ ಈಚೆಗೆ ಐಜಿ ಕಚೇರಿ ತಂಡ ದಾಳಿ ನಡೆಸಿದ ಕುರಿತು ಸಮರ್ಥಿಸಿಕೊಂಡ ಅವರು, ಮಾಹಿತಿ ಆಧರಿಸಿ ದಾಳಿ ನಡೆಸಲಾಗುತ್ತದೆ. ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ. ದಾಳಿ ನಡೆಸಿದ ತಕ್ಷಣ ಆ ಜಿಲ್ಲೆಯ ಪೊಲೀಸರು ಅಸಮರ್ಥರು ಎಂದು ಭಾವಿಸುವ ಅಗತ್ಯವಿಲ್ಲ. ಇದು ಸಹಜ ಪ್ರಕ್ರಿಯೆ ಎಂದರು.

ಗಾಂಜಾ, ರೌಡಿಸಂ, ಜೂಜಾಟ ಮತ್ತಿತರ ಸಮಾಜ ಬಾಹಿರ ಕೃತ್ಯಗಳ ತಡೆಗೆ ಮೊದಲ ಆದ್ಯತೆ ನೀಡಲಾಗಿದೆ. ವಲಯ ವ್ಯಾಪ್ತಿಯಲ್ಲಿ ಶೇ 90ರಷ್ಟು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಮಲೆನಾಡಿನ ನಕ್ಸಲ್ ಚಟುವಟಿಕೆ ಸಂಪೂರ್ಣ ನಿಯಂತ್ರಣದಲ್ಲಿದೆ. ನಕ್ಸಲ್ ನಿಗ್ರಹ ದಳ ಕಣ್ಗಾವಲು ಇರಿಸಿವೆ. ಕೋಮು ಗಲಭೆಗಳಿಗೆ ಕಡಿವಾಣ ಹಾಕಲಾಗಿದೆ. ಶಾಂತಿ ಸುವ್ಯವಸ್ಥೆಗೆ ಒತ್ತು ನೀಡಲಾಗಿದೆ. ಸಂಚಾರ ನಿಯಮಗಳ ಪಾಲಿಸಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು