ಸ್ವಾತಂತ್ರ್ಯೋತ್ಸವದ ಸಡಗರ; ಮೋದಿ ಸ್ಟಿಕ್ಕರ್‌ಗೆ ಬೇಡಿಕೆ..!

7

ಸ್ವಾತಂತ್ರ್ಯೋತ್ಸವದ ಸಡಗರ; ಮೋದಿ ಸ್ಟಿಕ್ಕರ್‌ಗೆ ಬೇಡಿಕೆ..!

Published:
Updated:
Deccan Herald

ವಿಜಯಪುರ:  ಸ್ವಾತಂತ್ರ್ಯೋತ್ಸವದ ಸಡಗರ, ಸಂಭ್ರಮಕ್ಕೆ ಒಂದು ದಿನವಷ್ಟೇ ಬಾಕಿಯಿದೆ. ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ದೇಶ ಪ್ರೇಮ ಬಿಂಬಿಸುವ ಪರಿಕರಗಳ ಮಾರಾಟ ಬಿರುಸು ಪಡೆದಿದೆ.

ರಾಷ್ಟ್ರಧ್ವಜ, ಅಶೋಕ ಚಕ್ರ, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು, ತಿರಂಗದ ಜತೆಯಲ್ಲೇ ಈ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾವಚಿತ್ರ ಅಡಕಗೊಂಡ ರಾಷ್ಟ್ರಧ್ವಜಗಳ ಮಾರಾಟ ಮಾರುಕಟ್ಟೆಯಲ್ಲಿ ಹೆಚ್ಚಿದೆ.

‘ಮಕ್ಕಳು ಎಲ್ಲರಂತೆ ತಾವೂ ಕೂಡ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು, ಜೇಬಿಗೆ ಬಿಲ್ಲಾ, ಗಲ್ಲಕ್ಕೆ ಸ್ಟಿಕ್ಕರ್ ಹಚ್ಚಿಕೊಂಡು ಹೋಗಬೇಕು ಎನ್ನುವ ಆಸೆ ಹೊಂದಿರುತ್ತಾರೆ. ಪಾಲಕರಿಗೆ ಕಿರಿಕಿರಿ ಮಾಡಿಯಾದರೂ ಖರೀದಿಸುತ್ತಾರೆ. ಹೀಗಾಗಿ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹಬ್ಬಗಳು ಒಳ್ಳೆಯ ಆದಾಯ ತಂದು ಕೊಡುತ್ತಿದೆ’ ಎಂದು ವ್ಯಾಪಾರಿ ತುಕಾರಾಮ ಕಿಂಗಮೋರೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಧ್ವಜಗಳು ₹ 5ರಿಂದ ₹ 10, ಬಳೆಗಳು ₹ 20, ಹೇರ್‌ಬ್ಯಾಂಡ್‌ ₹ 10, ಹ್ಯಾಂಡ್‌ ಬ್ಯಾಂಡ್‌ ₹ 10, ರಿಬ್ಬನ್‌ ಮೀಟರ್ ₹ 10, ಬಿಲ್ಲಾ ₹ 5, ಕೊರಳ ಶಾಲ್‌ ₹ 20, 3ಡಿ ಧ್ವಜ ₹ 20, ರಾಷ್ಟ್ರ ನಾಯಕರ ಸ್ಟಿಕ್ಕರ್ ₹ 10, ಪೇಟಾ ₹ 250, ಹೆಡ್‌ಬ್ಯಾಂಡ್‌ ₹ 10ಕ್ಕೆ ಒಂದರಂತೆ ಮಾರಾಟವಾಗುತ್ತಿವೆ.

ಈ ಹಿಂದೆ ಮಹಾತ್ಮ ಗಾಂಧಿ, ಭಗತ್‌ ಸಿಂಗ್‌, ಸುಭಾಸಚಂದ್ರ ಬೋಸ್‌ರಂತಹ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಒಳಗೊಂಡ ಸ್ಟಿಕ್ಕರ್‌ಗೆ ಹೆಚ್ಚು ಬೇಡಿಕೆಯಿತ್ತು. ಈ ವರ್ಷ ಪ್ರಧಾನಿ ಮೋದಿ ಸ್ಟಿಕ್ಕರ್‌ಗಳನ್ನು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಕೇಳುತ್ತಿದ್ದಾರೆ’ ಎಂದು ತುಕಾರಾಮ ಹೇಳಿದರು.

‘ಮಕ್ಕಳು ಧ್ವಜ ಸೇರಿದಂತೆ ಇನ್ನಿತರ ರಾಷ್ಟ್ರಪ್ರೇಮ ಮೂಡಿಸುವ ವಸ್ತು ಧರಿಸಿಕೊಂಡು ಸ್ವಾತಂತ್ರ್ಯೋತ್ಸವ ದಿನಾಚರಣೆ, ಗಣರಾಜ್ಯೋತ್ಸವದಲ್ಲಿ ಖುಷಿಯಿಂದ ಪಾಲ್ಗೊಳ್ಳುವುದು ವಾಡಿಕೆ. ಹೀಗಾಗಿ 13ರ ಸಂಜೆಯಿಂದ 15ರ ಬೆಳಿಗ್ಗೆ 9ರವರೆಗೆ ಒಂದೆರಡು ದಿನವಷ್ಟೇ ವ್ಯಾಪಾರವಾದರೂ; ಕಡಿಮೆ ಖರ್ಚಿನ್ಯಾಗ ಚಲೋ ಲಾಭ ಗಳಿಸುತ್ತೇವೆ. ಹ್ಯಾಂಡ್‌ಬ್ಯಾಂಡ್‌ ಮತ್ತು ಜೇಬಿಗೆ ಹಾಕುವ ಬಿಲ್ಲಾಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೆಣ್ಣು ಮಕ್ಕಳು ಹೆಚ್ಚಾಗಿ ಬಳೆ ಮತ್ತು ಹೇರ್‌ಬ್ಯಾಂಡ್‌ ಖರೀಸುತ್ತಿದ್ದಾರೆ’ ಎಂದು ಹುಸೇನ ಪಟವೇಕರ ತಿಳಿಸಿದರು.

‘ಎಲ್ಲಾ ಮಕ್ಕಳು ಶಾಲೆಯಲ್ಲಿ ನಡೆಯುವ ಧ್ವಜಾರೋಹಣಕ್ಕೆ ಧ್ವಜ ಹಿಡಿದು ಹೋಗುತ್ತಾರೆ. ಅವರಂತೆ ನಮ್ಮ ಇಬ್ಬರೂ ಮಕ್ಕಳು ಸಹಿತ ತಗೊಂಡ ಹೋಗಿ ಖುಷಿ ಪಡ್ಲಿ ಅಂಥ ರಾಷ್ಟ್ರಧ್ವಜ, ಹ್ಯಾಂಡ್‌ಬ್ಯಾಂಡ್‌ ಮತ್ತು ಕಿಸೆಗೆ ಹಾಕಿಕೊಳ್ಳಲು ಬಿಲ್ಲಾ ಎರಡೆರಡು ತಗೊಂಡೀನಿ’ ಎಂದು ಗಣೇಶ ನಗರದ ನಿವಾಸಿ ಸುಭಾಸ ಹಂಚಲಿ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !