ಪಕ್ಷಗಳ ಪೈಪೋಟಿ ನಡುವೆಯೂ ಪಕ್ಷೇತರರು ಕಣಕ್ಕೆ..!

7
ಮುದ್ದೇಬಿಹಾಳ ಪುರಸಭೆ ಚುನಾವಣೆ; ನಾಮಪತ್ರ ಸಲ್ಲಿಕೆಗೆ ಇಂದು ಕೊನೆ

ಪಕ್ಷಗಳ ಪೈಪೋಟಿ ನಡುವೆಯೂ ಪಕ್ಷೇತರರು ಕಣಕ್ಕೆ..!

Published:
Updated:
Deccan Herald

ಮುದ್ದೇಬಿಹಾಳ: ಇಲ್ಲಿನ ಪುರಸಭೆಯಲ್ಲಿ ಪಕ್ಷೇತರರ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ಪಕ್ಷಗಳು ನಡೆಸಿದ ಕಸರತ್ತು ಕೊನೆಗೂ ಯಶಸ್ವಿಯಾಗಿಲ್ಲ. ಪಕ್ಷೇತರರಾಗಿ ಗೆಲ್ಲುವ ವರ್ಚಸ್ಸುಳ್ಳ ಪ್ರಮುಖ ಅಭ್ಯರ್ಥಿಗಳನ್ನು ಪಕ್ಷದ ಚಿಹ್ನೆಯಡಿ ಸ್ಪರ್ಧಿಸುವಂತೆ ನಡೆಸಿದ ಎಲ್ಲಾ ಯತ್ನಗಳು ಬಹುತೇಕ ವಿಫಲಗೊಂಡಿವೆ.

ಕೆಲವರು ಮಾತ್ರ ನಾಯಕರ ಮನವೊಲಿಕೆಗೆ ಸಮ್ಮತಿ ನೀಡಿದ್ದು, ಪಕ್ಷದಿಂದ ಸ್ಪರ್ಧಿಸಲು ಸಮ್ಮತಿಸಿದ್ದರೆ; ಹಲವರು ಪಕ್ಷೇತರರಾಗಿಯೇ ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿರುವುದು ಮೂರು ಪಕ್ಷಗಳ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

ಕಾಂಗ್ರೆಸ್‌, ಜೆಡಿಎಸ್‌ ಆರಂಭದಲ್ಲಿ ದೋಸ್ತಿಯ ಒಲವು ವ್ಯಕ್ತಪಡಿಸಿದ್ದರೂ, ಅಂತಿಮವಾಗಿ ಸ್ವತಂತ್ರವಾಗಿ ಸ್ಪರ್ಧೆಗಿಳಿಯಲು ನಿರ್ಧರಿಸಿವೆ. ಮುದ್ದೇಬಿಹಾಳ ಪುರಸಭೆ ಆಡಳಿತದ ಚುಕ್ಕಾಣಿ ಹಿಡಿಯಲು ಪಕ್ಷೇತರರ ಪೈಪೋಟಿಯ ನಡುವೆಯೂ ತಂತ್ರಗಾರಿಕೆ ರೂಪಿಸಿವೆ.

ಜೆಡಿಎಸ್‌ನಿಂದ ಈಗಾಗಲೇ ಐವರು ಬಿ ಫಾರ್ಮ್‌ ಸಮೇತ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾದ ಶುಕ್ರವಾರ 15ಕ್ಕೂ ಹೆಚ್ಚು ಮಂದಿ ಕಣಕ್ಕಿಳಿಯಲಿದ್ದಾರೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಪೂರ್ವ ತಯಾರಿಯಲ್ಲಿ ಸ್ಥಳೀಯ ಮುಖಂಡರಾದ ಮಂಗಳಾದೇವಿ ಬಿರಾದಾರ ಹಲವು ಸುತ್ತಿನ ಸಭೆ ನಡೆಸಿದ್ದಾರೆ. ಚುನಾವಣೆಯ ಚುಕ್ಕಾಣಿ ಹಿಡಿದಿದ್ದಾರೆ ಎನ್ನಲಾಗಿದೆ.

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವನ್ನು ಶಾಸಕರಾಗಿ ಎ.ಎಸ್‌.ಪಾಟೀಲ ನಡಹಳ್ಳಿ ಬಿಜೆಪಿಯಿಂದ ಪ್ರತಿನಿಧಿಸಿದ್ದಾರೆ. ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿರುವ ಶಾಸಕರು, ಇದೀಗ ಪುರಸಭೆ ಆಡಳಿತದಲ್ಲೂ ಕಮಲ ಅರಳಿಸಲು ತಂತ್ರಗಾರಿಕೆ ನಡೆಸಿದ್ದಾರೆ.

ಬಿಜೆಪಿ ಜಿಲ್ಲಾ ಘಟಕದ ಮುಖಂಡರು ಸಂಪೂರ್ಣ ಜವಾಬ್ದಾರಿಯನ್ನು ನಡಹಳ್ಳಿ ಹೆಗಲಿಗೆ ನೀಡಿದ್ದು, ಶಾಸಕರು ಇದನ್ನು ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ಈಗಾಗಲೇ 23 ವಾರ್ಡ್‌ಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಜನೆ ರೂಪಿಸಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾದ ಶುಕ್ರವಾರ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ, ಶಕ್ತಿ ಪ್ರದರ್ಶನದಿಂದ ನಾಮಪತ್ರ ಸಲ್ಲಿಸಲು ಪೂರ್ವ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಪುರಸಭೆ ಚುನಾವಣೆಯಲ್ಲಿ ಪ್ರಮುಖರು, ಪಕ್ಷದ ಚಿಹ್ನೆಗಳಡಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ತಮ್ಮ ವ್ಯಾಪ್ತಿಯ ವಾರ್ಡ್‌ನಲ್ಲಿರುವ ಮುಸ್ಲಿಮರು, ತಮ್ಮ ಪ್ರಭಾವ, ಮನ್ನಣೆ, ಜಾತಿ, ನೆಂಟಸ್ತನ ಇನ್ನಿತ್ಯಾದಿ ಲೆಕ್ಕಾಚಾರ ಹಾಕಿ ಪಕ್ಷೇತರರಾಗಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.

ಬಿಜೆಪಿಯಲ್ಲೂ ಇದೇ ಪರಿಸ್ಥಿತಿಯಿದೆ. ಈ ಬಾರಿ ಪುರಸಭೆಯ 23 ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದೇವೆ. ಒಲವು ತೋರಿದವರಿಗೆ ಪಕ್ಷದ ಬಿ ಫಾರ್ಮ್‌, ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ಹೆಚ್ಚಿನ ಸಾಧ್ಯತೆ ಹೊಂದಿರುವವರನ್ನು ಬೆಂಬಲಿಸಿ, ಗೆಲುವಿಗೆ ಸಹಕರಿಸುತ್ತೇವೆ. ಫಲಿತಾಂಶ ಪ್ರಕಟಗೊಂಡ ಬಳಿಕ ಪಕ್ಷೇತರರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಹಿಂದಿನಂತೆಯೇ ಅಧಿಕಾರದ ಚುಕ್ಕಾಣಿ ಹಿಡಿದು ಆಳ್ವಿಕೆ ನಡೆಸಲಿದ್ದೇವೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !