‘ವಿಶ್ವದ ಬಲಾಢ್ಯ ರಾಷ್ಟ್ರಗಳಲ್ಲಿ ಭಾರತಕ್ಕೆ ಅಗ್ರಸ್ಥಾನ’: ಸಚಿವ ಎಂ.ಸಿ.ಮನಗೂಳಿ

7
ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ಗಳಿಸಿದ ಏಕೈಕ ದೇಶ ನಮ್ಮದು

‘ವಿಶ್ವದ ಬಲಾಢ್ಯ ರಾಷ್ಟ್ರಗಳಲ್ಲಿ ಭಾರತಕ್ಕೆ ಅಗ್ರಸ್ಥಾನ’: ಸಚಿವ ಎಂ.ಸಿ.ಮನಗೂಳಿ

Published:
Updated:
Deccan Herald

ವಿಜಯಪುರ: ‘ಪ್ರಪಂಚದ ಇತಿಹಾಸದಲ್ಲಿ ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ಗಳಿಸಿದ ಏಕೈಕ ದೇಶ ನಮ್ಮದು. ಸತ್ಯ, ಅಹಿಂಸೆ, ಶಾಂತಿಯನ್ನು ಎಲ್ಲೆಡೆ ಸಾರಿದ ಹೆಮ್ಮೆ ನಮ್ಮದಾಗಿದೆ. ಸರ್ವರ ಕಲ್ಯಾಣ ಬಯಸಿದವರು ನಾವು. ವಿಶ್ವದ ಅತ್ಯಂತ ಬಲಾಢ್ಯ ರಾಷ್ಟ್ರಗಳಲ್ಲಿ ಅಗ್ರಸ್ಥಾನದಲ್ಲಿ ನಾವಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಹೆಮ್ಮೆಯಿಂದ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ಹಿಂದೊಮ್ಮೆ ಗೋಧಿಗಾಗಿ ಅಮೆರಿಕವನ್ನು ಅವಲಂಬಿಸಿದ್ದೆವು. ಆದರೆ ಇದೀಗ ವಿಶ್ವಕ್ಕೆ ಹಾಲು, ಬೈಕ್, ವೈದ್ಯರು, ಎಂಜಿನಿಯರ್‌, ವಿಜ್ಞಾನಿಗಳನ್ನು ಕೊಡುಗೆಯಾಗಿ ನೀಡುವಲ್ಲಿ ನಾವೇ ಅಗ್ರಗಣ್ಯರಾಗಿದ್ದೇವೆ’ ಎಂದರು.

ಆಲ್ಬರ್ಟ್‌ ಐನ್‌ಸ್ಟಿನ್ ಹೇಳಿದಂತೆ ಎಣಿಸುವುದು ಹೇಗೆ ಎಂಬುದನ್ನು ವಿಶ್ವಕ್ಕೆ ಕಲಿಸಿಕೊಟ್ಟವರು ನಾವು. ಇಂದು ಐಟಿ–-ಬಿಟಿ, ಕೈಗಾರಿಕೆ, ವಾಣಿಜ್ಯ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ವಿಜ್ಞಾನ–-ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಪ್ರಬಲ ಶಕ್ತಿಯಾಗಿ ಬೆಳೆದಿದ್ದು, ಆರ್ಥಿಕ ಅಭಿವೃದ್ಧಿಯಲ್ಲಿಯೂ, ಇಷ್ಟರಲ್ಲಿಯೇ ಪಾಶ್ಚಿಮಾತ್ಯ ದೇಶಗಳನ್ನು ಹಿಂದೆ ಹಾಕಲಿದ್ದೇವೆ’ ಎಂದು ಹೇಳಿದರು.

ಜ್ಞಾನ–-ವಿಜ್ಞಾನ, ತಂತ್ರಜ್ಞಾನಗಳಿಂದ ಭವ್ಯ, ಬಲಾಢ್ಯ, ಸಮೃದ್ಧ ರಾಷ್ಟ್ರ ನಿರ್ಮಿಸಲು ಹಾಗೂ ಜಾತಿ ಇಲ್ಲದ, ಭೀತಿ ಇಲ್ಲದ ಸುಖ–ಶಾಂತಿಯ ನಾಡು ಕಟ್ಟಲು ಎಲ್ಲರೂ ಕಂಕಣಬದ್ಧರಾಗೋಣ ಎಂದು ಇದೇ ಸಂದರ್ಭ ನೆರೆದಿದ್ದ ಸಮೂಹಕ್ಕೆ ಕಿವಿಮಾತು ಹೇಳಿದರು.

ವಿವಿಧ ಕವಾಯತು ಪಡೆಗಳ ಆಕರ್ಷಕ ಪಥಸಂಚಲನ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.

ಬಹುಮಾನ ವಿತರಣೆ:
ಅತ್ಯುತ್ತಮ ಪಥಸಂಚಲನಕ್ಕಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಶಾಲಾ ಮಕ್ಕಳ ಪಥ ಸಂಚಲನದಲ್ಲಿ ಸೈನಿಕ ಶಾಲೆ, ಸಂಗನಬಸವ ಅಂತರರಾಷ್ಟ್ರೀಯ ಶಾಲೆ, ಅರಕೇರಿಯ ಕಸ್ತೂರಬಾ ಗಾಂಧಿ ವಸತಿ ಶಾಲೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಿಸ್ತಿಗಾಗಿ ಪ್ರೌಢಶಾಲೆ ವಿಭಾಗದಲ್ಲಿ ಇಕ್ರಾ ಉರ್ದು ಪ್ರೌಢಶಾಲೆ, ಎಸ್.ಎಸ್.ಎಚ್.ಎಸ್.ಬಿ. ಪ್ರೌಢಶಾಲೆ, ಬಂಜಾರಾ ಪ್ರೌಢಶಾಲೆ ಹಾಗೂ ಪ್ರಾಥಮಿಕ ವಿಭಾಗದಲ್ಲಿ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂಬರ್‌ 1, ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ 5, ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.20 ಇವರಿಗೆ ಪ್ರಶಸ್ತಿ ನೀಡಲಾಯಿತು.

ಸಮೂಹ ನೃತ್ಯದಲ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಬಿಡಿಇ, ಬಿಎಲ್‌ಡಿಇ ಪ್ರೌಢಶಾಲೆಗಳಿಗೆ ಹಾಗೂ ಸಾಮೂಹಿಕ ಕವಾಯತುನಲ್ಲಿ ಪಿಡಿಜೆ ಎ ಮತ್ತು ಬಿ ಪ್ರೌಢಶಾಲೆಗಳಿಗೆ ಪ್ರಶಸ್ತಿ ನೀಡಲಾಯಿತು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಶಾಸಕರಾದ ಎಂ.ಬಿ.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಮೇಯರ್‌ ಶ್ರೀದೇವಿ ಲೋಗಾಂವಿ, ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್‌ ನಿಕ್ಕಂ, ಜಿ.ಪಂ. ಸಿಇಓ ವಿಕಾಸ ಸುರಳಕರ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !