ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಂಗ, ಬಹಿರಂಗ ಶುದ್ಧಿ ಅಗತ್ಯ: ವಿಧುಶೇಖರ ಭಾರತೀ ಸ್ವಾಮೀಜಿ

ಬಿದನೂರು ನೀಲಕಂಠೇಶ್ವರ ದೇವರಿಗೆ ಕುಂಭಾಭಿಷೇಕ ಸಂಪನ್ನ
Last Updated 26 ಏಪ್ರಿಲ್ 2019, 14:16 IST
ಅಕ್ಷರ ಗಾತ್ರ

ಹೊಸನಗರ: ದೇವರು ನಿರ್ಗುಣ, ನಿರಾಕಾರ ಹಾಗೂ ಸರ್ವವ್ಯಾಪಿಯಾಗಿರುತ್ತಾನೆ. ಆದರೆ ಭಕ್ತರಿಗೆ, ಉಪಾಸಕರಿಗೆ ದೇವರನ್ನು ಗ್ರಹಿಸಲು ಅಸಾಧ್ಯ. ಆ ಕಾರಣದಿಂದಲೇ ದೇವಾಲಯ, ಪೂಜಾಮಂದಿರಗಳಲ್ಲಿ ಆಕಾರದ ಮೂಲಕ ನೆಲೆನಿಂತು ದೇವರು ಅನುಗ್ರಹಿಸುತ್ತಾನೆ. ಹೀಗಾಗಿ ದೇವಾಲಯಗಳಿಗೆ ತನ್ನದೇ ಮಹತ್ವವಿದೆ ಎಂದು ಶೃಂಗೇರಿ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಿದನೂರು ನಗರದಲ್ಲಿ ನೀಲಕಂಠೇಶ್ವರನ ನೂತನ ಶಿಲಾಮಯ ದೇಗುಲದಲ್ಲಿ ಶುಕ್ರವಾರ ಕುಂಭಾಭಿಷೇಕ ನೆರವೇರಿಸಿ ಅವರು ಮಾತನಾಡಿದರು.

ಪೂಜಾಮಂದಿರಗಳಲ್ಲಿ ಮಾತ್ರ ದೇವರಿದ್ದರೆ ಸಾಲದು. ನಮ್ಮ ಮನಸ್ಸಿನಲ್ಲೂ ದೇವರಿರಬೇಕು. ದೇವರು ನೆಲೆನಿಂತ ದೇವಸ್ಥಾನಗಳು ಪರಿಶುದ್ಧವಾಗಿರಬೇಕು ಮಾತ್ರವಲ್ಲ ಮನಸ್ಸು ಕೂಡ ಪರಿಶುದ್ಧವಾಗಿ ಇರಬೇಕು. ಬಾಹ್ಯ ಮತ್ತು ಅಂತರಂಗ ಶುದ್ಧಿ ಎರಡು ಅಗತ್ಯ. ಆಗ ಮಾತ್ರ ದೇವರು ದೇವಸ್ಥಾನ ಮತ್ತು ಮನಸ್ಸನ್ನು ತನ್ನ ಆವಾಸಸ್ಥಾನ ಮಾಡಿಕೊಳ್ಳುತ್ತಾನೆ. ನಾವು ಭಗವಂತನ ಆರಾಧನೆಯನ್ನು ಯಾರೊಬ್ಬರಿಗಾಗಿ ಮಾಡುವುದಲ್ಲ. ಆರಾಧನೆ ಮಾಡಿದರೆ ಲಾಭವೂ ನಮಗೆ, ಮಾಡದಿದ್ದರೆ ನಷ್ಟವೂ ನಮಗೆ. ಗುರುಗಳು ಬರುತ್ತಾರೆ ಎಂದಾಗ ಮಾತ್ರ ಶುದ್ಧವಾಗಿಡುವುದಲ್ಲ. ಸದಾಕಾಲ ಶುದ್ಧವಾಗಿರಬೇಕು ಎಂದರು.

ದೇವರು ಮತ್ತು ಪರವ್ಯಕ್ತಿಗಳಲ್ಲಿರುವ ಒಳ್ಳೆಯ ಗುಣಗಳನ್ನು ಅರಿತುಕೊಳ್ಳಬೇಕು. ಅದನ್ನು ಎಲ್ಲರಿಗೂ ಹೇಳಬೇಕು. ಆದರೆ ಕೆಟ್ಟಗುಣಗಳ ಕಡೆ ಗಮನ ನೀಡಬೇಕು. ಆದರೆ ಈಗಿನ ಸಮಾಜದಲ್ಲಿ ಒಳ್ಳೆಯ ಎಲ್ಲಾ ಕೆಲಸಗಳನ್ನು ಕೈಬಿಟ್ಟು. ಯಾವುದೋ ಒಂದು ಕೆಟ್ಟ ಕೆಲಸವನ್ನು ಹಿಡಿದು ನಿರಂತರವಾಗಿ ನಿಂದಿಸುವ ಕೆಲಸವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ಚಿಂತನೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದರು.

ಶೃಂಗೇರಿ ಪೀಠಕ್ಕೂ ಬಿದನೂರಿನ ನೀಲಕಂಠೇಶ್ವರ ದೇವಾಲಯಕ್ಕೂ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸೇತುವಾಗಿ ಕಾರ್ಯನಿರ್ವಹಿಸಿದ ವೇದಮೂರ್ತಿ ವಿನಾಯಕ ಉಡುಪರು ಕಾರ್ಯ ನಿರ್ವಹಿಸಿದ್ದಾರೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ಉತ್ಸವ ಕಾರ್ಯಕ್ರಮಕ್ಕೆ ಶ್ರಮದಾನದ ಮೂಲಕ ಸೇವೆ ಮಾಡಿದ ಮಧು ಕೆಸರೆಮನೆ, ಬಾಬು ಬಾಳೆಕೊಪ್ಪ, ಅಬ್ಬಾಸ್ ನೂಲಿಗ್ಗೇರಿ, ನಾಗರಾಜ ಭಂಡಾರಿ, ಕೃಷ್ಣದೇವಾಡಿಗ ಚೀಕಳಿ, ನಾಗರಾಜ ವಾಕೋಡು, ನಾಗರಾಜ ಭಟ್ ಕುಂದಗಲ್ ಸೇರಿ 150ಕ್ಕೂ ಹೆಚ್ಚು ಮಂದಿಯನ್ನು ಗೌರವಿಸಿದರು.

ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹಾರುದ್ರಯಾಗದ ಪೂರ್ಣಾಹುತಿ ನೆರವೇರಿತು. ಮಹಾರುದ್ರಯಾಗದ ಸೇವಾಕರ್ತ ರಂಗನಾಥ ಭಾಗವತರನ್ನು ಗೌರವಿಸಿ ಸನ್ಮಾನಿಸಿದರು.

ಸಭೆಯಲ್ಲಿ ವಸಂತ ಹೋಬಳಿದಾರ್ ಕುಟುಂಬ, ಗಿರಿಜಾ ಶಂಕರ್ ಚೆನ್ನೈ, ನೇರುಮಂಗಲ ವೆಂಕಟರಾಮನ್, ಶೃಂಗೇರಿ ಆಸ್ಥಾನ ವಿದ್ವಾನ್ ಶಂಕರ ಸ್ಥಪತಿ, ನೀಲಕಂಠೇಶ್ವರ ಜೀರ್ಣೋದ್ಧಾರ ಟ್ರಸ್ಟ್‌ನ ಹಾಜರಿದ್ದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ವಿ. ಕೃಷ್ಣಮೂರ್ತಿ, ವಸುಧಾ ಡಾ. ಚೈತನ್ಯ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಭಕ್ತರಿಗೆ ವಿಧುಶೇಖರ ಭಾರತಿ ಸ್ವಾಮೀಜಿ ಆಶೀರ್ವಾದ ಪೂರಕ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT