ಮಂಗಳವಾರ, ಅಕ್ಟೋಬರ್ 22, 2019
21 °C
ಕ್ರೀಡಾಕೂಟ; ಡಿವೈಎಸ್‌ಪಿ ಪ್ರಭುಗೌಡ ಪಾಟೀಲ ಸಲಹೆ

ಏಕಾಗ್ರತೆ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ

Published:
Updated:
Prajavani

ವಿಜಯಪುರ: ‘ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದರಿಂದ ಒಬ್ಬ ವ್ಯಕ್ತಿ ತನ್ನ ಏಕಾಗ್ರತೆಯನ್ನು, ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬಹುದು’ ಎಂದು ಡಿವೈಎಸ್‌ಪಿ ಪ್ರಭುಗೌಡ ಪಾಟೀಲ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ನಗರ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 15ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂತರರಾಷ್ಟ್ರೀಯ ಕ್ರೀಡಾಪಟು ಜಿ.ಡಿ.ಗೌರಮ್ಮ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ಪುರುಷರಿಗೆ ಸರಿಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಅದರಲ್ಲಿಯೂ ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಭಾರತದ ಕ್ರೀಡಾ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಪಾರ’ ಎಂದು ತಿಳಿಸಿದರು.

ಕುಲಪತಿ ಪ್ರೊ.ಸಬಿಹಾ ಮಾತನಾಡಿ, ‘ಈ ವರ್ಷದ ಕ್ರೀಡಾಕೂಟದಲ್ಲಿ 48 ಕಾಲೇಜುಗಳ ಕ್ರೀಡಾ ತಂಡಗಳು ಮಾತ್ರ ಪಾಲ್ಗೊಂಡಿವೆ. ಮುಂದಿನ ಕ್ರೀಡಾಕೂಟದಲ್ಲಿ ಇನ್ನುಳಿದ 90 ತಂಡಗಳು ಸಹ ಭಾಗವಹಿಸಲಿವೆ’ ಎಂದರು.

ಐದು ಸಾವಿರ ಮೀಟರ್ ಓಟದಲ್ಲಿ ವಿಜೇತರಾದ ನಗರದ ಬಿಎಲ್‌ಡಿಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಮಹಿಳಾ ಕಾಲೇಜಿನ ಸುನಿತಾ ಚವ್ಹಾಣ (ಪ್ರಥಮ), ಮಹಿಳಾ ವಿಶ್ವವಿದ್ಯಾನಿಲಯದ ವಂದನಾ ಮಠ (ದ್ವಿತೀಯ), ಜಮಖಂಡಿಯ ಸರ್ಕಾರಿ ಕಾಲೇಜಿನ ಭುವನೇಶ್ವರಿ ಮೈಗೂರ (ತೃತೀಯ) ಮತ್ತು ಹುಬ್ಬಳ್ಳಿಯ ಎಸ್‌ಜೆಎಂವಿಎಸ್ ಕಾಲೇಜಿನ ಮಂಜುಳಾ ರೈನಲ್ (4ನೇ ಸ್ಥಾನ) ಕ್ರೀಡಾಪಟುಗಳಿಗೆ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ವಿತರಿಸಲಾಯಿತು.

ವಿದ್ಯಾ ವಿಧೇಯಕ ಪರಿಷತ್ ಸದಸ್ಯೆ ನಿರ್ಮಲಾ ಬೆಕ್ಕಣ್ಣವರ, ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಡಿ.ಎಂ.ಜ್ಯೋತಿ ಇದ್ದರು.

ದೈಹಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ.ಜ್ಯೋತಿ ಉಪಾಧ್ಯೆ ಸ್ವಾಗತಿಸಿದರು. ಧಾರವಾಡದ ನಿವೃತ್ತ ಪ್ರಾಧ್ಯಾಪಕ ಪ್ರೊ.ವಿ.ಎಚ್.ಕಲಡಗಿ ಮತ್ತು ಸಿಂದಗಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರವಿ ಗೋಲಾ ನಿರೂಪಿಸಿದರು. ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ರಾಜಕುಮಾರ ಮಾಲಿಪಾಟೀಲ ವಂದಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)