ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಪುಸ್ತಕವೂ ಪುಸ್ತಕದ ಮುಖವೂ...

ಸ್ಲಗ್‌– ಸೋಷಿಯಲ್ ಮೀಡಿಯಾ
Last Updated 13 ಜೂನ್ 2018, 19:30 IST
ಅಕ್ಷರ ಗಾತ್ರ

ಕೆಲ ವರ್ಷಗಳ ಹಿಂದೆ ನಡೆದ ‘ಐಸ್‌ ಬಕೆಟ್ ಚಾಲೆಂಜ್’ ನೆನಪಿರಬೇಕಲ್ಲ... ಸಾಮಾಜಿಕ ಮಾಧ್ಯಮಗಳು ಅಷ್ಟಾಗಿ ಸಕ್ರಿಯವಾಗಿರದ ಕಾಲದಲ್ಲಿ ಸಾಮಾಜಿಕ ಕಳಕಳಿಗಾಗಿ ಹುಟ್ಟಿಕೊಂಡ ಈ ಚಾಲೆಂಜ್‌ ಅನ್ನು ಅಮೆರಿಕದ ಆಗಿನ ಅಧ್ಯಕ್ಷ ಬರಾಕ್ ಒಬಾಮ ಕೂಡಾ ಸ್ವೀಕರಿಸಿದ್ದರು. ಹೆಚ್ಚು ಕಮ್ಮಿ ಅದೇ ಮಾದರಿಯಲ್ಲಿ ಫೇಸ್‌ಬುಕ್‌ನಲ್ಲಿ ಈಚೆಗೆ ಆರಂಭವಾಗಿರುವ ಓದಿದ ಪುಸ್ತಕಗಳ ಮುಖಪುಟಗಳನ್ನು ಏಳು ದಿನಗಳ ಕಾಲ ಫೇಸ್‌ಬುಕ್‌ನಲ್ಲಿ ಹಾಕುವ ಸವಾಲು ಇದೀಗ ಟ್ರೆಂಡ್ ಸೃಷ್ಟಿಸಿದೆ.

ಸದಾ ಒಬ್ಬರನ್ನೊಬ್ಬರು ಹೀಗೆಳೆಯುವ, ವಿನಾಕಾರಣ ದೂಷಿಸುವ, ವೈಯಕ್ತಿಕ ಸಂಗತಿಗಳು ಇಲ್ಲವೇ ಫೋಟೊಗಳ ಅಪ್‌ಲೋಡ್ ಮೂಲಕ ಸದಾ ಸುದ್ದಿಯಲ್ಲಿರುವ ಫೇಸ್‌ಬುಕ್ ಕಳೆದೊಂದು ವಾರದಿಂದ ತುಸು ಭಿನ್ನವಾಗಿ ಕಾಣಿಸಿಕೊಳ್ಳುತ್ತಿದೆ. ತಾವು ಓದಿದ ಪುಸ್ತಕಗಳ ಮುಖಪುಟ ಹಾಕುವ ಕುರಿತು ಮೊದಲು ಯಾರು ಖೋ ಕೊಟ್ಟರು ಎನ್ನುವದನ್ನೇ ಮರೆಯುವಷ್ಟು ಈ ಸವಾಲು ಇದೀಗ ಜನಪ್ರಿಯವಾಗಿದೆ. ತಮ್ಮ ಸ್ನೇಹಿತರು ಇಲ್ಲವೇ ಆಪ್ತರಿಗೆ ತಾವು ಓದಿದ ಪುಸ್ತಕಗಳ ಮುಖಪುಟಗಳನ್ನು ಏಳು ದಿನಗಳ ಕಾಲ ಹಾಕುವ ಸವಾಲು ಒಡ್ಡುತ್ತಿರುವ ಪುಸ್ತಕಪ್ರಿಯರು ಫೇಸ್‌ಬುಕ್‌ ಚಹರೆಯನ್ನೇ ಬದಲಿಸಿಬಿಟ್ಟಿದ್ದಾರೆ.

ಪತ್ರಕರ್ತ ಜೋಗಿ ಹಾಕಿದ ಸವಾಲು ಸ್ವೀಕರಿಸಿದ ಅತ್ರಾಡಿ ಸುರೇಶ್ ಹೆಗ್ಡೆ ಅವರು ಕುವೆಂಪು ಅವರ ‘ವಿಚಾರಕ್ರಾಂತಿಗೆ ಆಹ್ವಾನ’ ಪುಸ್ತಕ ಮುಖಪುಟವನ್ನು ಹಾಕಿದ್ದರೆ, ಗುರುರಾಜ ಬಿ. ಕುಲಕರ್ಣಿ ಅವರು ‘ಆ್ಯಂಟನಿ ಚೆಕಾಫ್ ಅವರ ಕಥೆಗಳು’ ಪುಸ್ತಕದ ಮುಖಪುಟ ಹಾಕಿದ್ದಾರೆ. ‘ಶ್ರವಣಬೆಳಗೊಳ ಮತ್ತು ಚಾವುಂಡರಾಯನ ಆ ಮೂಲಕ ಬಾಹುಬಲಿಯ ಕಥೆ ತಿಳಿಯಬೇಕೆಂದರೆ ಈ ಕಾದಂಬರಿಯನ್ನು ತಪ್ಪದೇ ಓದಬೇಕು...’ ಎನ್ನುವ ಒಂದು ಸಾಲಿನ ಟಿಪ್ಪಣಿ ಸಹಿತ ‘ದಾನಚಿಂತಾಮಣಿ’ ಪುಸ್ತಕ ಮುಖಪುಟ ಹಾಕಿದ್ದಾರೆ ಪತ್ರಕರ್ತ ಎ.ಆರ್. ಮಣಿಕಾಂತ್.

ಕವಯತ್ರಿ ಹೇಮಲತಾ ಮೂರ್ತಿ ಅವರ ಸವಾಲಿಗೆ ರುಕ್ಮಿಣಿ ತಲ್ವಾಡ್ ದು. ಸರಸ್ವತಿಯ ಅವರ ‘ಬಚ್ಚೀಸು’, ನಳಿನಿ ಜಮೀಲಾ ಅವರ ‘ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ’ದ ಪುಸ್ತಕಗಳ ಸಂಕ್ಷಿಪ್ತ ಪರಿಚಯದೊಂದಿಗೆ ಓದುವ ಕುತೂಹಲ ಕೆರಳಿಸಿದ್ದಾರೆ. ಈ ಸವಾಲಿನ ಸರಣಿಯಲ್ಲಿ ಕೆಲವರು ಒಬ್ಬ ಲೇಖಕ ಬರೆದಿರುವ ಸರಣಿ ಕೃತಿಗಳ ಚಿತ್ರಗಳನ್ನು ಹಾಕಿದ್ದರೆ, ಇನ್ನು ಕೆಲವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಕೃತಿಗಳ ಚಿತ್ರಗಳ ಜತೆಗೆ ಭಿನ್ನ ಪ್ರಕಾರದ ಪುಸ್ತಕಗಳ ಚಿತ್ರಗಳನ್ನು ಹಾಕುತ್ತಿದ್ದಾರೆ.

ಕವಯತ್ರಿ ಅಕ್ಷತಾ ಹುಂಚದಕಟ್ಟೆ, ‘ಶ್ರೀಪಾದ ಭಟ್ ಮತ್ತು ನಿವೇದಿತಾ ಚಿನ್ನು ಒಡ್ಡಿದ ಸವಾಲಿಗೆ ಎರಡನೇ ದಿನಕ್ಕೆ ಆಯ್ಕೆಯಾಗಿ ಕುವೆಂಪು ಅವರ ‘ನೆನಪಿನ ದೋಣಿ...’ ಪುಸ್ತಕದ ಬಗ್ಗೆ ಬರೆಯುತ್ತಾ ‘ಈ ಪುಸ್ತಕದಲ್ಲಿ ಓದದೆ ಸ್ಕಿಪ್ ಮಾಡಿರೋ ಪುಟಗಳು ಜಾಸ್ತಿ ಇವೆ. ಆದರೆ ಓದಿರುವ ಅಷ್ಟೂ ಪುಟಗಳು ಒಳಗಿಳಿದು ಕಾಡುತ್ತಲೆ ಇರುತ್ತವೆ. ಪುಟ್ಟಪ್ಪನವರು ಕುವೆಂಪು ಆಗುವ ದಾರಿ ಬಲು ಕಠಿಣ, ಅಸಾಧ್ಯ, ಅಸಾಮಾನ್ಯ...’ ಎಂದು ಪ್ರಾಮಾಣಿಕವಾಗಿ ಹೇಳುತ್ತಲೇ ಗೆಳತಿ ರೇಖಾಂಬಾ ಪ್ರಭು ಅವರಿಗೆ ಖೋ ನೀಡಿದ್ದಾರೆ.

‘ಫೇಸ್‌ಬುಕ್‌ ನೋಡುವ ಬಗ್ಗೆ ಸದಾ ನಕಾರಾತ್ಮಕ ಧೋರಣೆಗಳನ್ನೇ ಕೇಳುತ್ತಿರುವ ಸಂದರ್ಭದಲ್ಲಿ ಈ ರೀತಿಯ ಪುಸ್ತಕಗಳ ಖೋ ಕೊಡುವ ಅಭಿಯಾನ ಒಂದು ರೀತಿಯಲ್ಲಿ ಟ್ರೆಂಡ್ ಸೃಷ್ಟಿಸಿದೆ. ಕನಿಷ್ಠ ಈ ನೆಪದಲ್ಲಾದರೂ ಕನ್ನಡ ಸಾಹಿತ್ಯದ ಉತ್ತಮ ಕೃತಿಗಳ ಪುಸ್ತಕಗಳ ಮೈದಡವಿದಂತಾಗುತ್ತಿದೆ. ಈ ರೀತಿ ಪುಸ್ತಕದ ಮುಖಪುಟ ಹಾಕಿದವರಲ್ಲಿ ಎಷ್ಟು ಮಂದಿ ಆ ಪುಸ್ತಕಗಳನ್ನು ಓದುತ್ತಿರುತ್ತಾರೋ ಇಲ್ಲವೋ ಗೊತ್ತಿಲ್ಲ. ಕೆಲವರಂತೂ ಓದಿರುತ್ತಾರೆ ಅನ್ನೋ ನಂಬಿಕೆ ಇದೆ. ಹಾಗಾಗಿ, ನಾನು ಓದಿದ ಪುಸ್ತಕಗಳ ಬಗ್ಗೆ ಸಣ್ಣ ಸಣ್ಣ ಟಿಪ್ಪಣಿ, ಪರಿಚಯವನ್ನು ಮಾಡಿಕೊಡುತ್ತಿರುವೆ. ನನ್ನ ಸ್ನೇಹಿತರೂ ತಾವು ಓದಿದ ಪುಸ್ತಕಗಳ ಕುರಿತು ಟಿಪ್ಪಣಿ ಬರೆದು ಫೇಸ್‌ಬುಕ್‌ನಲ್ಲಿ ಹಾಕುತ್ತಿದ್ದಾರೆ’ ಎನ್ನುತ್ತಾರೆ ಹಂಪಿ ವಿ.ವಿ.ಯ ಹಿರಿಯ ಶ್ರೇಣಿ ಸಂಶೋಧಕ ಡಾ.ಅರುಣಜೋಳದ ಕೂಡ್ಲಿಗಿ

ಅರುಣ ಅವರ ಮಾತಿಗೆ ಪುಷ್ಟಿ ಕೊಡುವಂತೆ ಸವಾಲು ಸ್ವೀಕರಿಸಿರುವ ಲೇಖಕ ಶ್ರೀಪಾದ ಭಟ್ ಅವರು ರಾಜ್‌ಮೋಹನ್ ಗಾಂಧಿ ಅವರ ‘ಅಂಡರ್‌ಸ್ಟ್ಯಾಂಡಿಂಗ್‌ ದ ಮುಸ್ಲಿಂ ಮೈಂಡ್’ ಕೃತಿಯ ಮುಖಪುಟದ ಜತೆಗೆ ಕೃತಿಯ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ. ಶ್ರೀಪಾದ ಭಟ್ ಅವರ ಪ್ರಕಾರ, ‘ಇಂಥ ಅರ್ಥಪೂರ್ಣ ಅಭಿಯಾನಗಳು ಆಗಾಗ್ಗೆ ನಡೆಯುತ್ತಿರಬೇಕು. ಇದು ಪುಸ್ತಕಪ್ರಿಯರನ್ನು ಓದಲು ಪ್ರೇರೇಪಿಸುತ್ತದಲ್ಲದೇ, ಎಷ್ಟೋ ಅಜ್ಞಾತ ಲೇಖಕರ ಪರಿಚಯವನ್ನೂ ಓದುಗರಿಗೆ ಮಾಡಿಸುತ್ತದೆ. ಫೇಸ್‌ಬುಕ್‌ನಲ್ಲಿ ಈ ಬಗ್ಗೆ ನೋಡಿದ ಅನೇಕರು ಇನ್‌ಬಾಕ್ಸ್‌ನಲ್ಲಿ ಅಪರೂಪದ ಪುಸ್ತಕಗಳು ಎಲ್ಲಿ ಸಿಗುತ್ತವೆ? ಲೇಖಕರ ನಂಬರ್ ಕೊಡಿ? ಎನ್ನುವ ಮಾಹಿತಿಗಳನ್ನೂ ಕೇಳುತ್ತಿದ್ದಾರೆ. ಕನಿಷ್ಠ ಈ ನೆಪದಲ್ಲಾದರೂ ನಾನು ಓದಿದ ಪುಸ್ತಕಗಳ ಸಾರವನ್ನು ಮೆಲುಕು ಹಾಕುತ್ತಿದ್ದೇನೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.

ಮಳೆಗಾಲದ ಆರಂಭದ ಈ ದಿನಗಳಲ್ಲಿ ಮಳೆಯ ಹನಿಯ ಸದ್ದಿನೊಂದಿಗೆ ಬಿಸಿ ಬಿಸಿ ಚಹಾ ಹೀರುತ್ತಾ ಇಷ್ಟದ ಪುಸ್ತಕಗಳನ್ನು ಓದಲು ಫೇಸ್‌ಬುಕ್‌ಗಿಂತ ಕಾರಣ ಬೇಕೇ ಎನ್ನುತ್ತಿದ್ದಾರೆ ಪುಸ್ತಕಪ್ರಿಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT