ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯಾನಗಳಿಗೆ ಇನ್ನಷ್ಟು ಮೆರುಗು’

ಕೆಬಿಜೆಎನ್ಎಲ್ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ
Last Updated 29 ಜೂನ್ 2019, 19:45 IST
ಅಕ್ಷರ ಗಾತ್ರ

ಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ವ್ಯಾಪ್ತಿಯಲ್ಲಿ ವಿಜಯಪುರ, ಬಾಗಲಕೋಟೆ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಕೃಷ್ಣೆಯ ಅಚ್ಚುಕಟ್ಟು ಪ್ರದೇಶ ಹಾಗೂ ಕೃಷ್ಣೆಯ ತಟದ ಬಹುತೇಕ ಅರಣ್ಯ ಪ್ರದೇಶ ಬರುತ್ತದೆ.

ಸದ್ಯ ಮುಂಗಾರು ಮಳೆ ಆರಂಭಗೊಂಡಿದ್ದು, ಕೆಬಿಜೆಎನ್ಎಲ್ ವತಿಯಿಂದ ಅರಣ್ಯೀಕರಣಕ್ಕಾಗಿ ಕೈಗೊಳ್ಳುವ ಯೋಜನೆಗಳು, ಆಲಮಟ್ಟಿ ಉದ್ಯಾನಗಳ ಆಕರ್ಷಣೆ ಹೆಚ್ಚಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ಕೆಬಿಜೆಎನ್ಎಲ್ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ.ನಾಯಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

*ಆಲಮಟ್ಟಿ ನರ್ಸರಿಯಲ್ಲಿ ಈ ವರ್ಷ ಎಷ್ಟು ಸಸಿಗಳನ್ನು ಬೆಳೆಸಲಾಗಿದೆ?
ವಿವಿಧ ನರ್ಸರಿಗಳಲ್ಲಿ ಒಟ್ಟು 10,83,210 ಸಸಿಗಳನ್ನು ಬೆಳೆಸಲಾಗಿದೆ. ಅರಣ್ಯ, ಹಣ್ಣು, ಔಷಧ, ವಾಣಿಜ್ಯಿಕ ಉದ್ದೇಶ ಸೇರಿ ನಾನಾ ಸಸಿಗಳನ್ನು ಬೆಳೆಸಲಾಗಿದೆ. ಎಲ್ಲಾ ರೀತಿಯ ಸಸಿಗಳನ್ನು ಬೆಳೆಸಿದ ಕಾರಣ ರೈತರೇ ನೇರವಾಗಿ ಬಂದು ಸಸಿಗಳನ್ನು ಖರೀದಿಸುತ್ತಿದ್ದಾರೆ. ಇಲ್ಲಿನ ಸಸಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಬೆಲೆ ಕೇವಲ ಸಸಿಯೊಂದಕ್ಕೆ ₹3 ರಿಂದ ₹5 ನಿಗದಿಪಡಿಸಲಾಗಿದೆ. ರೋಗಾಣುರಹಿತ ಉತ್ಕೃಷ್ಟ ಗುಣಮಟ್ಟದ ಸಸಿಗಳನ್ನು ಬೆಳೆಸಲಾಗಿದೆ.

*ರೈತರಿಗೆ ಮಾರಾಟ ಮಾಡಿದ ಸಸಿಗಳು ಎಷ್ಟು?
ಪ್ರಸಕ್ತ ವರ್ಷ ಜೂನ್ 5 ರಿಂದ ಸಸಿಗಳ ಮಾರಾಟ ಆರಂಭಗೊಂಡಿದ್ದು, 20 ದಿನದಲ್ಲಿಯೇ 5,10,752 ಸಸಿಗಳು ಮಾರಾಟವಾಗಿವೆ. ಉಳಿದ ಸಸಿಗಳು ಶೀಘ್ರವೇ ಮಾರಾಟವಾಗಲಿವೆ.

*ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಎಷ್ಟು ಸಸಿಗಳನ್ನು ನೆಡುವ ಗುರಿ ಇಟ್ಟುಕೊಂಡಿದ್ದೀರಿ?
ಪ್ರಸಕ್ತ ವರ್ಷ ಅರಣ್ಯ ಇಲಾಖೆಯ ವತಿಯಿಂದ 20 ಸಾವಿರ ಸಸಿಗಳನ್ನು ನೆಟ್ಟು, ಸಂರಕ್ಷಿಸಿ, ಬೆಳೆಸುವ ಗುರಿ ಇಟ್ಟುಕೊಂಡಿದ್ದೇವೆ. ಅಲ್ಲದೇ ಆಲಮಟ್ಟಿ ಸುತ್ತಮುತ್ತ 120 ಎಕರೆ ಪ್ರದೇಶದ ನೆಡುತೋಪ ಇದ್ದು, ಅಲ್ಲಿಯೂ ಅರಣ್ಯ ನೆಡುತೋಪು ನಿರ್ಮಾಣ, ವೃಕ್ಷ ಅಭಿಯಾನ ಮುಂದುವರೆಸಲಾಗುವುದು.

*ಆಲಮಟ್ಟಿಯ ವಿವಿಧ ಉದ್ಯಾನಗಳಲ್ಲಿ ಪ್ರಸಕ್ತ ವರ್ಷ ಕೈಗೊಳ್ಳುವ ಯೋಜನೆಗಳು ಯಾವುವು?
ರಾಕ್ ಉದ್ಯಾನ, ಲವಕುಷ, ಕೃಷ್ಣಾ ಉದ್ಯಾನಗಳಲ್ಲಿ ನೂರಾರು ಜಾತಿಯ ಸಹಸ್ರಾರು ಗಿಡಗಳಿವೆ. ಅವುಗಳ ಮುಂದೆ ಸಸಿಗಳ ಹೆಸರಿನ ನಾಮಫಲಕ ಅಳವಡಿಸಲಾಗುವುದು. ರಾಕ್‌ ಉದ್ಯಾನದಲ್ಲಿ ಸಾಹಸ ಕ್ರೀಡೆಗಳಾದ ಜಿಪ್ ಲೈನ್, ಹಾಯ್ ರೋಪ್, ಲೋ ರೋಪ್, ಎನಿ ಟೆರೆನ್ ವಾಹನ ಸೇರಿ ಇತ್ಯಾದಿಗಳನ್ನು ಅಳವಡಿಸಲಾಗುವುದು. ಈಗಾಗಲೇ ಸಿಲ್ವರ್ ಲೇಕ್‌ನಲ್ಲಿ ಬೋಟಿಂಗ್ ಆರಂಭಿಸಲಾಗಿದೆ. ಹೊಸ ಅಪರೂಪದ ಸಸ್ಯ ಸಂಕುಲಗಳನ್ನು ಬೆಳೆಸಲಾಗುವುದು. ಬೊನ್ಸಾಯ್ ಸಸಿಗಳ ಉದ್ಯಾನ, ಟೋಪಿಏರಿ ಉದ್ಯಾನ ನಿರ್ಮಾಣ ಮಾಡಲಾಗುವುದು. ಸದ್ಯ ಉದ್ಯಾನಗಳಲ್ಲಿರುವ ವಿವಿಧ ನೂರಾರು ಮೂರ್ತಿಗಳಿಗೆ ₹15 ಲಕ್ಷ ವೆಚ್ಚದಲ್ಲಿ ಪೇಂಟಿಂಗ್ ಮಾಡಲಾಗಿದ್ದು, ಆಕರ್ಷಕಗೊಳಿಸಲಾಗಿದೆ.

*ನಿಡಗುಂದಿ ಉದ್ಯಾನದ ಬಗ್ಗೆ?
ನಿಡಗುಂದಿಯಲ್ಲಿ ನಿರ್ಮಿಸಲಾಗುತ್ತಿರುವ ಉದ್ಯಾನದಲ್ಲಿ ವಿದ್ಯುತ್ ತಂತಿಗಳು ಹೆಚ್ಚಿದ್ದು, ಅವುಗಳನ್ನು ತೆರವುಗೊಳಿಸಿದ ಬಳಿಕ ಕಾಮಗಾರಿ ಚುರುಕುಗೊಳ್ಳಲಿದೆ. ಸ್ವಲ್ಪ ಯೋಜನೆ ಬದಲಾಯಿಸಿದ್ದು ಅತ್ಯಾಧುನಿಕ, ಆಕರ್ಷಕ ಮಾದರಿಯ ಉದ್ಯಾನದ ಮಾದರಿ ಅಳವಡಿಸಲಾಗಿದೆ.

*ಉದ್ಯಾನ ಪ್ರವೇಶ ದರದಿಂದ ಸಂಗ್ರಹಿತ ಹಣ ಎಷ್ಟು?
2018-19 ನೇ ಸಾಲಿನಲ್ಲಿ ಕೃಷ್ಣಾ, ರಾಕ್, ಲವಕುಷ ಉದ್ಯಾನದ ಪ್ರವೇಶ ದರದಿಂದ ಒಟ್ಟಾರೇ ₹ 51,29,634 ಸಂಗ್ರಹಗೊಂಡಿದೆ. ಸಂಗೀತ ಕಾರಂಜಿಯ ಪ್ರವೇಶ ದರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಈ ವರ್ಷದ ಏಪ್ರಿಲ್ ಮತ್ತು ಮೇ ಎರಡೇ ತಿಂಗಳಲ್ಲಿ ₹ 7,00,590 ಸಂಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT