ರಫೇಲ್ ಯುದ್ಧ ವಿಮಾನ ಖರೀದಿ ತನಿಖೆಗೆ ಒತ್ತಾಯ

7
ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಪ್ರತಿಭಟನಾ ನಿರತರ ಆಕ್ರೋಶ

ರಫೇಲ್ ಯುದ್ಧ ವಿಮಾನ ಖರೀದಿ ತನಿಖೆಗೆ ಒತ್ತಾಯ

Published:
Updated:
Deccan Herald

ಶಿವಮೊಗ್ಗ: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಶೀಘ್ರವೇ ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಮಹಾವೀರ ವೃತ್ತದಲ್ಲಿ ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಕೇಂದ್ರದ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ವ್ಯವಹಾರ ನಡೆಸಿದೆ. ಈ ಬಗ್ಗೆ ತನಿಖೆಗೆ ಒಳಪಡಿಸಿ, ಎಲ್ಲಾ ತಪ್ಪಿತಸ್ಥರಿಗೂ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಹಿಂದೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರಫೇಲ್ ಯುದ್ಧವಿಮಾನಗಳನ್ನು ಫ್ರಾನ್ಸ್ ತಂತ್ರಜ್ಞಾನ ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಎಚ್.ಎ.ಎಲ್ ಸಹಭಾಗಿತ್ವದಲ್ಲಿ ತಯಾರಿಸುವ ಪ್ರಸ್ತಾಪವನ್ನಿಡಲಾಗಿತ್ತು. ಪ್ರತಿ ವಿಮಾನಕ್ಕೆ ಕೇವಲ ₹526 ಕೋಟಿ ವೆಚ್ಚವಾಗುತ್ತಿತ್ತು. ಅಲ್ಲದೆ, ₹66,300 ಕೋಟಿಗಳಲ್ಲಿ 126 ಯುದ್ಧವಿಮಾನಗಳು ತಯಾರಾಗುತ್ತಿದ್ದವು. ಸಾವಿರಾರು ಜನರಿಗೆ ಉದ್ಯೋಗ ಸಹ ದೊರಕುತ್ತಿತ್ತು ಎಂದು ತಿಳಿಸಿದರು.

ಆದರೆ, ಎನ್‌ಡಿಎ ಸರ್ಕಾರ ಈ ಯೋಜನೆಯನ್ನೇ ತಲೆಕೆಳಗಾಗಿಸಿದೆ. ಕೇವಲ 36 ಯುದ್ಧ ವಿಮಾನಗಳಿಗೆ ₹58,300 ಕೋಟಿ ನೀಡುವುದರ ಮೂಲಕ ಸಾವಿರಾರು ಕೋಟಿ ರೂಪಾಯಿ ಹಗರಣ ಮಾಡಿದೆ ಎಂದರು.

ಅಚ್ಚೇದಿನ್ ಬರುತ್ತದೆ ಎಂದು ಹೇಳುತ್ತಲೇ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ಜನರಿಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಬದಲಾಗಿ ಹಗರಣಗಳನ್ನು ಮಾಡಿಕೊಂಡು, ಉದ್ಯಮಿಗಳಿಗೆ, ಶ್ರೀಮಂತರಿಗೆ ಅನುಕೂಲ ಮಾಡಿಕೊಡುತ್ತಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಹಲವರು ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆಸಿದ್ದಾರೆ. ಶೀಘ್ರವೇ ಈ ಕುರಿತು ತನಿಖೆ ನಡೆಸಬೇಕು. ಭ್ರಷ್ಟಾಚಾರವೆಸಗಿದ ಎಲ್ಲರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಯುವ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸಿ.ಜಿ. ಮಧುಸೂದನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರಮುಖರಾದ ಕಾಶಿ ವಿಶ್ವನಾಥ್, ನಾಗರಾಜ್, ಕೆ. ಚೇತನ್, ಎಚ್‌.ಎಸ್‌.ಬಾಲಾಜಿ, ಮಹಮ್ಮದ್ ಆರೀಫ್ ವುಲ್ಲಾ, ಶರತ್, ವಿನಯ್, ಅಕ್ಬರ್, ಸುರೇಶ್, ಗಿರೀಶ್, ಚಂದು, ಮಹಮ್ಮದ್ ನಿಹಾಲ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !