ಶುಕ್ರವಾರ, ಡಿಸೆಂಬರ್ 13, 2019
24 °C

ಶಿವಮೊಗ್ಗ: ಶಿವಪ್ಪ ನಾಯಕ ಅರಮನೆಯಲ್ಲಿ ಹೈದರಾಲಿ ಕಾಲದ ರಾಕೆಟ್‌ ವೀಕ್ಷಣೆಗೆ ಅವಕಾಶ

ಅರ್ಚನಾ ಎಂ. Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನಗರದ ಶಿವಪ್ಪ ನಾಯಕ ಅರಮನೆಯಲ್ಲಿ 18ನೇ ಶತಮಾನದ ಮೈಸೂರು ರಾಜ್ಯದ ಆಡಳಿತಗಾರ ಹೈದರಾಲಿ ಕಾಲದ ಕಬ್ಬಿಣದ ರಾಕೆಟ್‌ಗಳನ್ನು ಇಡಲಾಗಿದ್ದು, ಡಿಸೆಂಬರ್‌ನಿಂದ ಸಾರ್ವಜನಿಕರ ವೀಕ್ಷಣೆಗೆ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಅವಕಾಶ ಕಲ್ಪಿಸಲು ಸಿದ್ಧತೆ ಮಾಡಿಕೊಂಡಿದೆ.

ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಇತಿಹಾಸ ಮತ್ತು ವೈಭವ ಹೊಂದಿರುವ ಶಿವಪ್ಪ ನಾಯಕ ಅರಮನೆಗೆ ಪ್ರತಿನಿತ್ಯ ನೂರಾರು ಜನರು ಭೇಟಿ ನೀಡುತ್ತಾರೆ. ಆದರೆ, ಮಳೆ ನೀರಿನ ಸೋರಿಕೆ ಸಮಸ್ಯೆ ಕಾರಣ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಿರಲಿಲ್ಲ.

ಅಕ್ಟೋಬರ್‌ ತಿಂಗಳವರೆಗೂ ಸುರಿದ ಭಾರಿ ಮಳೆಯಿಂದಾಗಿ ಅರಮನೆಯ ಐದು ಕಡೆಯ ಚಾವಣಿಯಲ್ಲಿ ಸೋರಿಕೆ ಆಗುತ್ತಿದ್ದು, ಕಬ್ಬಿಣದ ರಾಕೆಟ್‌ಗಳನ್ನು ಇಟ್ಟಿರುವ ಕೋಣೆಯ ಚಾವಣಿಯಿಂದಲೂ ಸೋರಿಕೆಯಾಗುತ್ತಿದೆ. ಹಾಗಾಗಿ  ಅವುಗಳನ್ನು ಪಕ್ಕದ ಗ್ಯಾಲರಿಯಲ್ಲಿ ಜೋಡಿಸಲಾಗಿದೆ.

ಈ ಹಿಂದೆ ಯುದ್ಧದ ಸಂದರ್ಭಗಳಲ್ಲಿ ಕಬ್ಬಿಣದ ರಾಕೆಟ್‌ಗಳನ್ನು ಹೇಗೆ ಬಳಸಲಾಗುತ್ತಿತ್ತು ಎಂಬ ಬಗ್ಗೆ ಜನರಿಗೆ ತೋರಿಸಲು ಬಿದಿರಿನಿಂದ ಮಾಡಿದ ರಾಕೆಟ್ ಮಾದರಿಯನ್ನು ಪ್ರದರ್ಶಿಸುವ ಯೋಜನೆಯನ್ನು ಇಲಾಖೆ ಹೊಂದಿದೆ. ಇಲ್ಲಿ ಸುಮಾರು 150 ಕಬ್ಬಿಣದ ರಾಕೆಟ್‌ಗಳನ್ನು ಪ್ರದರ್ಶಿಸಲಾಗುತ್ತದೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ ಅರಮನೆ ನವೀಕರಣ:  ಮಳೆಗಾಲದಲ್ಲಿ ಅರಮನೆಯ ಪರಿಸ್ಥಿತಿ ಅತ್ಯಂತ ಶೋಚನೀಯ ಹಂತಕ್ಕೆ ತಲುಪುತ್ತದೆ. ಸೋರುವ ಸ್ಥಳಗಳನ್ನು ನೋಡಿದರೆ ಎಲ್ಲಿ ಚಾವಣಿ ಬೀಳುತ್ತದೆಯೋ ಎಂಬ ಆತಂಕ ಆಗ ಬರುವ ಪ್ರವಾಸಿಗರನ್ನು ಕಾಡುತ್ತದೆ. ಈ ಬಗ್ಗೆ ಜಾಗರೂಕತೆ ವಹಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪ್ರವಾಸಿಗರಿಗೆ ಎಚ್ಚರಿಕೆ ನೀಡುತ್ತಾರೆ.

ಈಗಾಗಲೇ ಅರಮನೆಯ ಮೂಲ ರಚನೆಗೆ ಹಾನಿಯಾಗದಂತೆ ಸ್ಮಾರ್ಟ್‌ಸಿಟಿ ಯೋಜನೆಯಡಿ
₹ 17 ಕೋಟಿ ವೆಚ್ಚದಲ್ಲಿ ನವೀಕರಿಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ. ಡಿಸೆಂಬರ್‌ನಲ್ಲಿ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆ ಇದೆ. ನವೀಕರಣ ಕಾರ್ಯವು ಅರಮನೆಗೆ ಹೊಸ ರೂಪ ನೀಡುತ್ತದೆ. ಸೋರಿಕೆ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಕೋಟೆಯಲ್ಲೇ ತಯಾರಾಗುತ್ತಿದ್ದ ರಾಕೆಟ್‌: ಹೊಸನಗರ ತಾಲ್ಲೂಕಿನ ನಗರ ಗ್ರಾಮದಲ್ಲಿ ವಿಭಿನ್ನ ಅಳತೆಯ 1800 ಕಬ್ಬಿಣದ ರಾಕೆಟ್‌ಗಳು 2018 ಜುಲೈನಲ್ಲಿ ದೊರೆತಿದ್ದವು. ಅವುಗಳನ್ನು ಶಿವಮೊಗ್ಗದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗೆ ನೀಡಿದ್ದರು. 

ಕೆಳದಿ ಅರಸರ ಕೊನೆಯ ರಾಜಧಾನಿ ಬಿದನೂರು. 1763ರಲ್ಲಿ ಈ ಕೋಟೆಗೆ ಮುತ್ತಿಗೆ ಹಾಕಿದ ಹೈದರಾಲಿ ಮೈಸೂರು ಸಂಸ್ಥಾನಕ್ಕೆ ಸೇರಿಸಿಕೊಂಡಿದ್ದ.  ಹೈದರಾಲಿ ನಂತರ ಈ ಕೋಟೆಯಲ್ಲಿ ಟಿಪ್ಪು ಟಂಕಸಾಲೆ ಮತ್ತು ಶಸ್ತ್ರಾಸ್ತ್ರ ಸಂಗ್ರಹಾಗಾರ ಸ್ಥಾಪಿಸಿದ್ದ. ಈ ಕೋಟೆಯಲ್ಲೇ ಕಬ್ಬಿಣದ ರಾಕೆಟ್‌ಗಳನ್ನೂ ತಯಾರಿಸಲಾಗುತ್ತಿತ್ತು.

ಹೈದರಾಲಿ ಕಾಲದ 150 ಕಬ್ಬಿಣದ ರಾಕೆಟ್‌ಗಳನ್ನು ಅರಮನೆಯಲ್ಲಿ ಡಿಸೆಂಬರ್‌ ತಿಂಗಳಿನಿಂದ ಸಾರ್ವಜನಿಕರ ವಿಕ್ಷಣೆಗಾಗಿ ಅವಕಾಶ ಮಾಡಲಾಗುವುದು ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ ಹೇಳಿದರು.

ಪ್ರತಿಕ್ರಿಯಿಸಿ (+)