ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣರ ಬುದ್ಧಿ ಕಸಿದುಕೊಳ್ಳಲು ಸಾಧ್ಯವೇ?

ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸುಬ್ರಾಯ ಎಂ ಹೆಗಡೆ ಪ್ರಶ್ನೆ
Last Updated 8 ಫೆಬ್ರುವರಿ 2023, 14:18 IST
ಅಕ್ಷರ ಗಾತ್ರ

ಮಂಡ್ಯ: ‘ಬ್ರಾಹ್ಮಣರು ಬುದ್ಧಿವಂತರಾಗಿದ್ದು ನಮ್ಮನ್ನು ಎಲ್ಲಾ ಕ್ಷೇತ್ರಗಳಲ್ಲೂ ತುಳಿಯುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಆದರೆ, ಬ್ರಾಹ್ಮಣರ ಬುದ್ಧಿವಂತಿಕೆಯನ್ನು ಕಸಿದುಕೊಳ್ಳಲು ಸಾಧ್ಯವೇ’ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಸುಬ್ರಾಯ ಎಂ ಹೆಗಡೆ ಪ್ರಶ್ನಿಸಿದರು.

ನಗರದ ಬಂದೀಗೌಡ ಬಡಾವಣೆಯ ಗಾಯತ್ರಿ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಬುಧವಾರ ನಡೆದ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಹಾಗೂ ವಿಪ್ರ ಸಾಧಕರ ಸನ್ಮಾನ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಬ್ರಾಹ್ಮಣರನ್ನು ಕುರಿತು ಅವಹೇಳನಾಕಾರಿಯಾಗಿ ಮಾತನಾಡಿರುವುದು ಖಂಡನೀಯ. ಬ್ರಾಹ್ಮಣರು ಸಮಾಜಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಈ ಸಮಾಜದ ಸದಸ್ಯರು ರಾಜ್ಯದ ಮುಖ್ಯಮಂತ್ರಿ ಆಗುವುದು ತಪ್ಪೇ? ರಾಜಕೀಯ ಲಾಭಕ್ಕಾಗಿ ಸಮಾಜದ ವಿರುದ್ಧ ಹೇಳಿಕೆ ನೀಡಿದ್ದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಮಂಡಳಿಯ ಮತ್ತೊಬ್ಬ ನಿರ್ದೇಶಕಿ ಲೀಲಾವತಿ ಮಾತನಾಡಿ ‘ಸಮಾಜಕ್ಕೆ ಬ್ರಾಹ್ಮಣರು ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಆರೋಗ್ಯವಂತ ಸಮಾಜದ ಶಸ್ತ್ರಚಿಕಿತ್ಸಕರಾಗಿ ಕೆಲಸ ಮಾಡುತ್ತಿದ್ದಾರೆ. ಬ್ರಾಹ್ಮಣರು ಹಲವು ಸಂಗ್ರಾಮಗಳಲ್ಲೂ ಮುಂಚೂಣಿ ನಾಯಕತ್ವ ವಹಿಸಿದ್ದರು. ಸಮಾಜದಲ್ಲಿ ಸಾಧನೆ ಮಾಡಿರುವ ಬ್ರಾಹ್ಮಣರು ತಮ್ಮನ್ನು ಸಮಾಜದ ಅಭಿವೃದ್ಧಿಗಾಗಿ ಗುರುತಿಸಿಕೊಂಡು ಸಹಕಾರ ನೀಡಿದ್ದಾರೆ’ ಎಂದರು.

‘ಪ್ರಸ್ತುತ ಕೆಲವರು ವಿವೇಕ, ವಿವೇಚನೆ ಇಲ್ಲದೇ ಮಾತನಾಡುತ್ತಿದ್ದಾರೆ, ಇಂಥವರ ಬಗ್ಗೆ ಸಮಾಜದ ಸದಸ್ಯರು ಎಚ್ಚರಿಕೆಯಿಂದ ಇರಬೇಕು. ಮೀಸಲಾತಿ, ಜಾತಿ ಜಾತಿಗಳನ್ನು ಎತ್ತಿ ಕಟ್ಟುವ ವ್ಯವಸ್ಥೆಯ ನಡುವೆ ಬ್ರಾಹ್ಮಣ ಸಮಾಜ ಆತ್ಮವಿಮರ್ಶೆ ಮಾಡಿಕೊಂಡು ಮುನ್ನಡೆಯಬೇಕು. ಸಮಾಜದಲ್ಲಿ ಸಕಲ ಸೌಲಭ್ಯಗಳನ್ನು ಪಡೆದು ಬ್ರಾಹ್ಮಣರ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ನಮ್ಮ ಸಮಾಜದ ಸದಸ್ಯರು ಈ ಬಗ್ಗೆ ಅರಿತು ಮುನ್ನಡೆಯಬೇಕು’ ಎಂದರು.

ಇದೇ ಸಂದರ್ಭದಲ್ಲಿ ಬ್ರಾಹ್ಮಣ ಮಂಡಳಿಯ ವಿವಿಧ ಯೋಜನೆಗಳಾದ ಸಾಂದೀಪಿನಿ ಶಿಷ್ಯ ವೇತನ, ಚಾಣಕ್ಯ ಐಎಎಸ್ ಆಡಳಿತ ತರಬೇತಿ, ಸ್ವಯಂ ಉದ್ಯೋಗ ಧನ ಸಹಾಯಗಳ ಬಗ್ಗೆ ಮಾಹಿತಿ ನೀಡಲಾಯಿತು.

ವಿಪ್ರ ಸಾಧಕರಾದ ಬೆಳ್ಳೂರು ಎಸ್ ಶಿವರಾಂ, ಎಸ್.ಎನ್.ಸತ್ಯಮೂರ್ತಿ, ಶೈಲಜಾ ಚಂದ್ರಶೇಖರ್, ಕಾವೇರಮ್ಮ , ನಾರಾಯಣ ಶಾಸ್ತ್ರಿ, ಬಿ.ಆರ್.ನಾರಾಯಣ್, ಮೈಸೂರಿನ ಎನ್.ವಿ.ಕೃಷ್ಣಮೂರ್ತಿ, ಚಾಮರಾಜನಗರದ ಸುರೇಶ್.ಎನ್ ಋಗ್ವೇದಿ ಅವರನ್ನು ಅಭಿನಂದಿಸಲಾಯಿತು.

ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಎಸ್.ಶಂಕರನಾರಾಯಣ ಶಾಸ್ತ್ರಿ, ಬ್ರಾಹ್ಮಣ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ, ಜ್ಯೋತಿಷಿ ವಿ.ಭಾನುಪ್ರಕಾಶ್ ಶರ್ಮಾ, ‌‌ಕೆ.ಎನ್.ಛಾಯಾಪತಿ, ವತ್ಸಲ ನಾಗೇಶ್, ಎಂ.ಆರ್.ಬಾಲಕೃಷ್ಣ, ಬಿ.ಜಿ.ಉಮಾ ದೊರೆಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT