ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌ | ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಜೇಷ್ಣವಿ

ಅತ್ಯುತ್ತಮ ಸಾಧನೆ, ಢವಳಗಿಗೆ ಹೆಮ್ಮೆ
Last Updated 28 ನವೆಂಬರ್ 2019, 6:49 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಅವಳ ಹೆಸರು ಜೇಷ್ಣವಿ. ವಯಸ್ಸು 17. ಈಗಲೇ ಅವಳು ಬ್ಯಾಸ್ಕೆಟ್‌ಬಾಲ್‌ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿಭೆ ತೋರಿಸುತ್ತಿದ್ದಾಳೆ.

ಜನಿಸಿದ್ದು ಮುದ್ದೇಬಿಹಾಳ ತಾಲ್ಲೂಕಿನ ಢವಳಗಿಯ ಪುಟ್ಟ ಮನೆಯಲ್ಲಿ. ಅಪ್ಪ ಮಡಿವಾಳಪ್ಪ ಗುಡಿಮನಿ ಗ್ರಾಮ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕ. ಇವರು ರಾಜ್ಯಮಟ್ಟದ ಉದ್ದ ಜಿಗಿತ ಹಾಗೂ ಕಬಡ್ಡಿ ಆಟಗಾರ. ಢವಳಗಿಯ ಮನೆ ತುಂಬ ಜೇಷ್ಣವಿ ಪಡೆದ ಪ್ರಶಸ್ತಿ ಪತ್ರ, ಫಲಕಗಳು, ಟ್ರೋಫಿಗಳು ತುಂಬಿವೆ. ಅಪ್ಪನ ನಿರಂತರ ಪ್ರೋತ್ಸಾಹ, ಬೆಂಬಲದ ಫಲವಾಗಿ ಜೇಷ್ಣವಿ ಈಗ ಮೈಸೂರಿನಲ್ಲಿ ಕ್ರೀಡೆಗೆ ರಾಷ್ಟ್ರಮಟ್ಟದಲ್ಲಿ ಹೆಚ್ಚು ಕ್ರೀಡಾಪಟುಗಳನ್ನು ನೀಡಿರುವ ಟೆರೇಷಿಯನ್‌ ಮಹಿಳಾ ಕಾಲೇಜಿನಲ್ಲಿ ಪ್ರಥಮ ಪಿಯು (ಕಲಾ ವಿಭಾಗ) ಓದುತ್ತಿದ್ದಾಳೆ. ಜೇಷ್ಣವಿಗೆ ಬಾಲ್ಯದಲ್ಲಿಯೇ ಕ್ರೀಡೆಗಳಲ್ಲಿ ಇದ್ದ ಆಸಕ್ತಿ ಕಂಡು ಅವಳನ್ನು ವಿಜಯಪುರದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿಸಲಾಯಿತು.

ಬ್ಯಾಸ್ಕೆಟ್‌ಬಾಲ್‌ ಬಗ್ಗೆ ಅವಳಲ್ಲಿನ ವಿಶೇಷ ಆಸಕ್ತಿಯನ್ನು ಕಂಡು, ಇದೇ ಆಟಕ್ಕೆ ಹೆಚ್ಚು ಪ್ರೋತ್ಸಾಹ ನೀಡುವ ಮೈಸೂರಿಗೆ ತೆರಳಿದ್ದಾಳೆ. ಈಗಾಗಲೇ ಅವಳು ಸಬ್ ಜೂನಿಯರ್ ವಿಭಾಗದಲ್ಲಿ 11 ಬಾರಿ ರಾಜ್ಯವನ್ನು ಪ್ರತಿನಿಧಿಸಿ, ರಾಷ್ಟ್ರಮಟ್ಟದಲ್ಲಿ ಆಟವಾಡಿದ್ದಾಳೆ. ಕಳೆದ ವರ್ಷವೇ ಅವಳು ಇದ್ದ ತಂಡ ರಾಜಸ್ಥಾನದ ಉದಯಪುರದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಜತ ಪದಕ ಮುಡಿಗೇರಿಸಿಕೊಂಡಿದೆ.

ಬ್ಯಾಸ್ಕೆಟ್‌ಬಾಲ್‌ನಲ್ಲಿ ಜೇಷ್ಣವಿ ನವದೆಹಲಿ, ಹೈದರಾಬಾದ್‌, ಪಾಟ್ನಾ, ಪುಣೆ, ಚತ್ತೀಸಗಢ, ಉದಯಪುರ ಸುತ್ತಿದ್ದಾಳೆ. ಪುಣೆಯಲ್ಲಿ ನಡೆದ ‘ಖೇಲೋ ಇಂಡಿಯಾ’ದಲ್ಲೂ ಪಾಲ್ಗೊಂಡಿದ್ದಾಳೆ.

ಆರು ವರ್ಷ ಜೇಷ್ಣವಿಗೆ ವಿಜಯಪುರದಲ್ಲಿ ತರಬೇತಿ ನೀಡಿರುವ ಬ್ಯಾಸ್ಕೆಟ್‌ಬಾಲ್‌ ತರಬೇತುದಾರ ಮಲ್ಲನಗೌಡ ಬಿ.ಪಾಟೀಲ ಹೇಳುವಂತೆ, ‘ಜೇಷ್ಣವಿ ತಂಡದ ಮೊದಲ (ಪ್ರಮುಖ) ಐದು ಆಟಗಾರರಲ್ಲಿ ಒಬ್ಬಳಾಗಿ ಆಡುತ್ತಿದ್ದಾಳೆ. ಅಂಡರ್ 16 ವಿಭಾಗದಲ್ಲಿ ಉದಯಪುರದಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ನಮ್ಮ ತಂಡಕ್ಕೆ ಸ್ವಲ್ಪದರಲ್ಲಿಯೇ ಬಂಗಾರದ ಪದಕ ತಪ್ಪಿತು. ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಅವಳು ಮಹಿಳಾ ವಿಭಾಗದಲ್ಲಿ ಆಡುವಷ್ಟು ಸಾಮರ್ಥ್ಯ ಹೊಂದಿದ್ದಾಳೆ’ ಎಂದು ಪ್ರಶಂಸಿಸಿದರು.

‘ನನ್ನದೇನಿಲ್ಲ, ನೀನು ಆಡು, ಚೆನ್ನಾಗಿ ಆಡುತ್ತಿ ಎಂದು ನಿರಂತರ ಬೆನ್ನು ತಟ್ಟಿದ ಅಪ್ಪ ಹಾಗೂ ಅಮ್ಮನ ಪ್ರೋತ್ಸಾಹವೇ ನನ್ನ ಸಾಧನೆಗೆ ಕಾರಣ’ ಎಂದು ಜೇಷ್ಣವಿ ಹೇಳುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT