ಭಾನುವಾರ, ಜನವರಿ 19, 2020
19 °C
ನಗರ ಹೊರವಲಯದ ಕೃಷಿ ಮಹಾವಿದ್ಯಾಲಯದಲ್ಲಿ ಆಯೋಜನೆ

ಜ.4ರಿಂದ 6ರ ವರೆಗೆ ಕೃಷಿ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ನಗರ ಹೊರವಲಯದ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಜ.4 ರಿಂದ 6ರ ವರೆಗೆ ಮೂರು ದಿನ ಕೃಷಿ ಮೇಳ ನಡೆಯಲಿದ್ದು, ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್.ಬಿ.ಕಲಘಟಗಿ, ‘ಇದೇ ಮೊದಲ ಬಾರಿಗೆ ಮೂರು ದಿನಗಳ ಮೇಳವನ್ನು ಆಯೋಜಿಸಲಾಗಿದೆ. ಜ. 4ರಂದು ಬೆಳಿಗ್ಗೆ 10 ಗಂಟೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಶಾಸಕ ದೇವಾನಂದ ಚವ್ಹಾಣ ಅಧ್ಯಕ್ಷತೆ ವಹಿಸುವರು’ ಎಂದರು.

‘ಅಂದು ಮಧ್ಯಾಹ್ನ 2 ಗಂಟೆಗೆ ‘ಮಣ್ಣಿನ ಆರೋಗ್ಯ, ಕೃಷಿಯ ಸೌಭಾಗ್ಯ’ ಕುರಿತು ಕೃಷಿಗೋಷ್ಠಿ ಜರುಗಲಿದೆ. ಜ.5ರಂದು ಬೆಳಿಗ್ಗೆ 11 ಗಂಟೆಗೆ ‘ಸಿರಿಧಾನ್ಯ ಬಳಸಿ, ಆರೋಗ್ಯ ವೃದ್ಧಿಸಿ’, ಮಧ್ಯಾಹ್ನ 2 ಗಂಟೆಗೆ ‘ದ್ರಾಕ್ಷಿ, ದಾಳಿಂಬೆ ಮತ್ತು ನಿಂಬೆ ಬೆಳೆಗಳ ಸಸ್ಯ ಸಂರಕ್ಷಣೆ ತಂತ್ರಜ್ಞಾನಗಳು’ ಹಾಗೂ ಜ.6ರಂದು ಬೆಳಿಗ್ಗೆ 11 ಗಂಟೆಗೆ ‘ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಮಹತ್ವ’ ಕುರಿತು ಗೋಷ್ಠಿಗಳು ಜರುಗಲಿವೆ’ ಎಂದು ಮಾಹಿತಿ ನೀಡಿದರು.

‘ಜ.4ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ‘ಆಕಳು ಮತ್ತು ಎಮ್ಮೆಗಳ ಪ್ರದರ್ಶನ’, ಜ.5ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ‘ಶ್ವಾನ ಪ್ರದರ್ಶನ’ ಮತ್ತು ಜ.6 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ‘ಕುರಿ ಮತ್ತು ಆಡುಗಳ ಪ್ರದರ್ಶನ’ ಜರುಗಲಿದೆ’ ಎಂದು ತಿಳಿಸಿದರು.

‘ಜ.6ರಂದು ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಕೊಲ್ಹಾಪುರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’ ಎಂದು ಹೇಳಿದರು.

‘ಕೃಷಿ ಹೊಂಡದಿಂದ ನೀರೆತ್ತಲು ರೈತರು ಭಾರವಾದ ಡೀಸೆಲ್, ಪೆಟ್ರೋಲ್ ಪಂಪ್‌ಸೆಟ್‌ಗಳನ್ನು ಬಳಸುತ್ತಿದ್ದಾರೆ. ಇದಕ್ಕಾಗಿ ನಮ್ಮಲ್ಲಿಯ ಸಂಶೋಧನಾ ಕೇಂದ್ರದ ವತಿಯಿಂದ ಕೇವಲ 17.5 ಕೆ.ಜಿ ತೂಕದ ಮತ್ತು ₹15 ಸಾವಿರದಲ್ಲಿ ದೊರೆಯುವ ಪಂಪ್‌ಸೆಟ್‌ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದು ರೈತರಿಗೆ ವರದಾನವಾಗಲಿದೆ’ ಎಂದು ಹೇಳಿದರು.

ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಚ್.ಬಿ.ಬಬಲಾದ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಶಿವಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು