ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನತಾ ಕರ್ಫ್ಯೂ’; ವಿಜಯಪುರ ಜಿಲ್ಲೆ ಸಂಪೂರ್ಣ ಸ್ತಬ್ಧ

ರಸ್ತೆಗೆ ಇಳಿಯದ ಬಸ್, ಆಟೊ, ಟಂಟಂ; ರೈಲು ಸಂಚಾರ ಸ್ಥಗಿತ
Last Updated 22 ಮಾರ್ಚ್ 2020, 10:45 IST
ಅಕ್ಷರ ಗಾತ್ರ

ವಿಜಯಪುರ: ಮಾರಕ ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಬೆಂಬಲ ದೊರೆಯಿತು.

ನಗರ, ಗ್ರಾಮೀಣ ಸಾರಿಗೆ ಬಸ್ ಸೇವೆ, ರೈಲು ಸೇವೆ ಸಂಪೂರ್ಣ ಸ್ಥಗಿತಗೊಂಡಿತ್ತು. ಆಟೊ, ಟಂಟಂ, ಖಾಸಗಿ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಗಾಂಧಿ ಚೌಕ್, ಬಸವೇಶ್ವರ ವೃತ್ತ, ಶಿವಾಜಿ ವೃತ್ತ ಸೇರಿದಂತೆ ಎಲ್ಲಾ ವೃತ್ತ ಹಾಗೂ ಪ್ರಮುಖ ರಸ್ತೆಗಳು ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ, ನಗರದ ಹೃದಯ ಭಾಗವಾದ ಗಾಂಧಿ ಚೌಕ್‌ ಅಕ್ಷರಶಃ ಸ್ಥಬ್ಧವಾಗಿತ್ತು.

ರಸ್ತೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು, ಅಲ್ಲೊಂದು, ಇಲ್ಲೊಂದು ಬೈಕ್, ಕಾರ್ ಹೊರತು ಪಡಿಸಿದರೆ ರಸ್ತೆಗಳು ನಿರ್ಜನವಾಗಿದ್ದವು. ಬೆಳಿಗ್ಗೆ ಹಾಲಿನ ಅಂಗಡಿಗಳು ತೆರೆದಿದ್ದವು. ಔಷಧಿ ಅಂಗಡಿಗಳು ತೆರೆದವಾದರೂ ಜನರು ಇಲ್ಲದ ಕಾರಣ ಕೆಲವರು ಸ್ವಯಂ ಬಂದ್ ಮಾಡಿಕೊಂಡು ಮನೆಯತ್ತ ಹೆಜ್ಜೆ ಹಾಕಿದರು.

ಸೊಲ್ಲಾಪುರ ರಸ್ತೆ, ಬಾಗಲಕೋಟೆ, ಕಲಬುರ್ಗಿ, ಜಮಖಂಡಿ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ನಗರದಲ್ಲಿರುವ ಎಲ್ಲಾ ಅಂಗಡಿ–ಮುಂಗಟ್ಟುಗಳು, ರಸ್ತೆ ಬದಿಯ ತಳ್ಳುಗಾಡಿ, ಗೂಡಂಗಡಿಗಳು ಬಂದ್ ಆಗಿದ್ದವು. ಬಹುತೇಕ ಪೆಟ್ರೋಲ್ ಬಂಕ್‌ಗಳು ಕೂಡ ಬಂದ್ ಆಗಿದ್ದವು.

ಉದ್ಯಾನಗಳು ಭಣಭಣ: ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಗಗನ್ ಮಹಲ್, ನಗರದ ವಿವಿಧ ಬಡಾವಣೆಗಳಲ್ಲಿನ ಉದ್ಯಾನಗಳು ಭಣಭಣ ಎನ್ನುತ್ತಿದ್ದವು. ಬೆಳಗಿನ ಜಾವ 5 ಗಂಟೆ ಸುಮಾರಿಗೆ ವಾಯುವಿಹಾರಿಗಳು ಬಂದಿದ್ದು ಹೊರತುಪಡಿಸಿದರೆ, ಯಾರೂ ಮನೆಯಿಂದ ಆಚೆ ಬರಲಿಲ್ಲ. ಓಪನ್ ಜಿಮ್‌ಗಳು ಕೂಡ ಖಾಲಿಯಾಗಿದ್ದವು.

ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಅಘೋಷಿತ ಬಂದ್ ವಾತಾವರಣ ಕಂಡು ಬಂದಿತು. ಪಂಚಾಯಿತಿಯವರು ಶನಿವಾರ ಡಂಗುರ ಹೊಡೆಸಿ, ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮನೆಯಿಂದ ಹೊರಬರದಂತೆ ಮತ್ತು ಅಂಗಡಿ–ಮುಂಗಟ್ಟುಗಳನ್ನು ತೆರೆಯದಂತೆ ಸೂಚನೆ ನೀಡಿದ್ದರು. ಹೀಗಾಗಿ, ಹಳ್ಳಿಗಳು ಕೂಡ ಬಿಕೋ ಎನ್ನುತ್ತಿದ್ದವು.

ಕ್ರಿಕೆಟ್ ಖುಷಿ: ಬಿಸಿಲೇರುವ ಮುನ್ನ ಕೆಲ ಯುವಕರು, ಮಕ್ಕಳು ರಸ್ತೆಗಿಳಿದು ಕ್ರಿಕೆಟ್ ಆಡಿ ಸಂಭ್ರಮಿಸಿದರು. ಖಾಲಿ ಮೈದಾನಗಳಲ್ಲೂ ಯುವಕರು ಕ್ರಿಕೆಟ್ ಆಡುತ್ತಿರುವುದು ಕಂಡು ಬಂದಿತು.

ಪ್ರಯಾಣಿಕರ ಪರದಾಟ: ರೈಲು ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಇದನ್ನು ಅರಿಯದ ಕೆಲವರು ರೈಲು ನಿಲ್ದಾಣಕ್ಕೆ ಬಂದು, ವಾಪಸು ಮನೆಯತ್ತ ತೆರಳುತ್ತಿರುವುದು ಕಂಡು ಬಂದಿತು. ರೈಲ್ವೆ ಇಲಾಖೆ ಸಿಬ್ಬಂದಿ ಬಂದು–ಹೋಗುವ ಪ್ರಯಾಣಿಕರ ಹೆಸರುಗಳನ್ನು ನಮೂದು ಮಾಡಿಕೊಂಡರು. ಥರ್ಮಲ್ ಸ್ಕ್ಯಾನಿಂಗ್‌ ಮೂಲಕ ತಪಾಸಣೆ ಕೈಗೊಂಡು, ಸ್ಯಾನಿಟೈಸರ್‌ ನೀಡಿದರು.

ಕೇಂದ್ರ ಬಸ್ ನಿಲ್ದಾಣದಲ್ಲಿ ಕೂಡ ಬಿಕೋ ಎನ್ನುವ ವಾತಾವರಣವಿತ್ತು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ, ರಾತ್ರಿ ಬಸ್‌ಗಳಲ್ಲಿ ಹೊರಟು ಬೆಳಗಿನ ಜಾವ ಇಲ್ಲಿಗೆ ಬಂದ ಪ್ರಯಾಣಿಕರು ಪರದಾಡುವಂತಾಯಿತು. ರಾತ್ರಿ 9 ಗಂಟೆಯವರೆಗೆ ಬಸ್‌ ಸೇವೆ ಲಭ್ಯವಿಲ್ಲ ಎಂಬುದನ್ನು ಅರಿತು ಕೆಲವರು ಅಲ್ಲಿಯೇ ನಿದ್ರೆಗೆ ಜಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT