ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಪ್ರವಾಸಿಗರ ಭೇಟಿ ಇಳಿಮುಖ: ಮುಚ್ಚಿದ ಪ್ರವೇಶ ದ್ವಾರ

ಜೋಗ ಜಲಪಾತದಲ್ಲಿ ಕೆಎಫ್‌ಡಿ, ಕೋವಿಡ್‌–19 ಭೀತಿ
Last Updated 16 ಮಾರ್ಚ್ 2020, 20:31 IST
ಅಕ್ಷರ ಗಾತ್ರ

ಕಾರ್ಗಲ್‌ (ಶಿವಮೊಗ್ಗ ಜಿಲ್ಲೆ): ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರದೇಶದಲ್ಲಿ ಸ್ಥಳೀಯವಾಗಿ ಕಾಡುತ್ತಿರುವ ಕೆಎಫ್‌ಡಿ ವೈರಸ್ ಜೊತೆಗೆ ಕೊರೊನಾ ಸೋಂಕಿನ ಭೀತಿ ಜೊತೆಗೂಡಿರುವುದರಿಂದ ಸೋಮವಾರ ಪ್ರಧಾನ ಪ್ರವೇಶ ದ್ವಾರವನ್ನು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಆದೇಶದ ಮೇರೆಗೆ ಮುಚ್ಚಲಾಗಿದೆ.

ಸ್ಥಳೀಯರಿಗೆ ಮತ್ತು ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖಾಧಿಕಾರಿಗಳು ತಿಳಿಸಿದರು.

ಜೋಗ ಜಲಪಾತದಲ್ಲಿ ಮಳೆಗಾಲದಲ್ಲಿ ಬರುವ ಪ್ರವಾಸಿಗರ ಸಂಖ್ಯೆಗೆ ಹೋಲಿಸಿದರೆ ಬೇಸಿಗೆಯಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಸಹಜವಾಗಿ ಕ್ಷೀಣವಾಗಿರುತ್ತದೆ. ಆದರೆ ಬೇಸಿಗೆಯಲ್ಲಿ ವಿದೇಶಿ ಪ್ರವಾಸಿಗರು ಜೋಗಕ್ಕೆ ಲಗ್ಗೆ ಇಟ್ಟು, ಜೋಗದ ಗುಂಡಿಯಲ್ಲಿ ಬಿಸಿಲ ಬೇಗೆಯನ್ನು ಸವಿಯುವುದು ಇಲ್ಲಿನ ವಿಶೇಷ. ಆದರೆ ಕೊರೊನಾ ಸೋಂಕಿನ ಭೀತಿಯಲ್ಲಿ ವಿದೇಶಿ ಪ್ರವಾಸಿಗರ ಮೇಲೆ ಈಚೆಗಿನ ಕೆಲ ವಾರಗಳಿಂದ ತೀವ್ರ ನಿಗಾ ಇಡಲಾಗಿದೆ ಎಂದು ಮೇಲ್ವಿಚಾರಕರಾದ ನಿಸಾರ್ ತಿಳಿಸಿದ್ದಾರೆ.

ಬರುವ ಪ್ರತಿಯೊಬ್ಬ ವಿದೇಶಿ ಪ್ರಜೆಯ ಬಗ್ಗೆ ಸಂಪೂರ್ಣ ವಿವರಗಳನ್ನು ಇಲ್ಲಿಯ ಪ್ರವಾಸಿ ಮಿತ್ರರು ಸಂಗ್ರಹಿಸುತ್ತಿದ್ದಾರೆ. ಯಾವ ದೇಶದಿಂದ ಬಂದಿದ್ದಾರೆ? ಯಾವಾಗ ಬಂದಿದ್ದು? ಭಾರತದ ಯಾವ ರಾಜ್ಯಗಳಿಂದ ಇಲ್ಲಿಗೆ ಬಂದಿದ್ದಾರೆ? ಮುಂದೆ ಎಲ್ಲಿಗೆ ಹೋಗುವವರಿದ್ದಾರೆ ಎಂಬ ಬಗ್ಗೆ ಸವಿಸ್ತಾರ ವಿವರವನ್ನು ದಾಖಲಿಸಿಟ್ಟುಕೊಳ್ಳಲಾಗುತ್ತಿದೆ. ಕೊರೊನಾ ಭೀತಿ ಎದುರಾದ ನಂತರ ಈಗಾಗಲೇ ಜಲಪಾತ ಪ್ರದೇಶಕ್ಕೆ 25ರಿಂದ 30 ವಿದೇಶಿ ಪ್ರವಾಸಿಗರು ಬಂದಿದ್ದು ಅವರು ಅಮೆರಿಕಾ, ರಷ್ಯಾ, ಸ್ವೀಡನ್, ಪೋಲೆಂಡ್ ದೇಶಕ್ಕೆ ಸೇರಿದವರಾಗಿದ್ದರು. ಸಾಮಾನ್ಯವಾಗಿ ಮಾರ್ಚ್ ತಿಂಗಳು ಶಾಲಾ ಮಕ್ಕಳ ಪರೀಕ್ಷಾ ಸಮಯ ಆಗಿರುವುದರಿಂದ ಸಹಜವಾಗಿ ಪ್ರವಾಸಿಗರ ಸಂಖ್ಯೆ ಕಡಿಮೆ ಇರುತ್ತದೆ. ಅದರ ಜೊತೆಗೆ ಕೊರೊನಾ ವೈರಸ್ ಮತ್ತು ಕೆಎಫ್‌ಡಿ ಭೀತಿ ಪ್ರವಾಸಿಗರ ಸಂಖ್ಯೆಯನ್ನು ಇಳಿಮುಖಗೊಳಿಸಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸಿಗರಿಲ್ಲಿರುವುದರಿಂದ ಆಟೊ ಚಾಲಕರು, ಟ್ಯಾಕ್ಸಿ ಮಾಲೀಕರು ಬಾಡಿಗೆಯಿಲ್ಲದೇ ಬಸವಳಿದಿದ್ದಾರೆ. ಪ್ರವಾಸಿಗರ ಛಾಯಾಚಿತ್ರ ತೆಗೆಯಲು ಮುಗಿಬೀಳುತ್ತಿದ್ದ ಸ್ಥಳೀಯ ಛಾಯಾ ಚಿತ್ರಕಾರರು ಮರಗಳ ನೆರಳಿನಲ್ಲಿ ಆಕಾಶ ನೋಡುತ್ತ ಮಲಗಿಕೊಂಡು ಮಳೆ ಯಾವಾಗ ಆರಂಭವಾಗುತ್ತದೋ ಎಂಬ ಚಿಂತೆಯಲ್ಲಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಿಗಳೂ ಪ್ರವಾಸಿಗರ ಬರುವಿಕೆಗಾಗಿ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT