ಸುಳ್ಳು ಸುದ್ದಿಗಳ ಮೇಲೆ ವ್ಯವಸ್ಥೆಯ ಸವಾರಿ

7
ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ. ಉಮಾಪತಿ ಆತಂಕ

ಸುಳ್ಳು ಸುದ್ದಿಗಳ ಮೇಲೆ ವ್ಯವಸ್ಥೆಯ ಸವಾರಿ

Published:
Updated:
ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಭಾನುವಾರ ಮಾಧ್ಯಮ ಅಕಾಡೆಮಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು.

ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ಸುಳ್ಳು ಸುದ್ದಿಗಳು ವೇಗವಾಗಿ ತಲುಪುತ್ತಿವೆ. ಇಂತಹ ಸುದ್ದಿಗಳನ್ನೇ ಮಂತ್ರಿಗಳೂ ಹಿಂಬಾಲಿಸುತ್ತಿದ್ದಾರೆ ಎಂದು ‘ಪ್ರಜಾವಾಣಿ’ ವಿಶೇಷ ವರದಿಗಾರ ಡಿ. ಉಮಾಪತಿ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸಹ್ಯಾದ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಿಜಿಟಲ್‌ ಪತ್ರಿಕೋದ್ಯಮ ಇಂದು ತಲೆ ಎತ್ತಿದೆ. ಅಂತರ್ಜಾಲ ತಾಣಗಳಲ್ಲಿಯೇ ಸುದ್ದಿಗಳು ಬಿತ್ತರವಾಗುತ್ತಿವೆ. ಅವುಗಳೇ ಪ್ರಸಿದ್ಧವಾಗುತ್ತಿವೆ. ಸುದ್ದಿಗಳೆಂದರೆ ಏನು ಎಂದು ತಿಳಿಯದ ಪ್ರಮುಖ ಜಾಲತಾಣಗಳಾದ ಗೂಗಲ್‌, ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಸುಳ್ಳು, ಮೋಸದ ಸುದ್ದಿಗಳು ವೇಗವಾಗಿ ಜನರಿಗೆ ತಲುಪುತ್ತಿವೆ. ಆ ಮೂಲಕ ಹಣ ಗಳಿಸಲಾಗುತ್ತಿದೆ ಎಂದು ಹೊಸ ಮಾದರಿ ಪತ್ರಿಕೋದ್ಯಮದ ಚಿತ್ರಣ ಬಿಚ್ಚಿಟ್ಟರು.

ಕಂಪನಿಗಳು, ವ್ಯಕ್ತಿಗಳು ಹೇಳುವ ಸುಳ್ಳು ಸುದ್ದಿಗಳ ಮೇಲೆ ಜನರಿಗೆ ಶ್ರದ್ದೆ ಹೆಚ್ಚುತ್ತಿದೆ. ಈ ಸುದ್ದಿಗಳು ಮುಂಬರುವ ಚುನಾವಣೆಗಳ ಮೇಲೂ ಪರಿಣಾಮ ಬೀರುತ್ತವೆ. ದೇಶವನ್ನು ಕಾಡುವ ನಿರುದ್ಯೋಗ, ಕೃಷಿ, ಶಿಕ್ಷಣ ವ್ಯವಸ್ಥೆಯಲ್ಲಿ ಕುಸಿತ ಇವುಗಳ ಬಗ್ಗೆ ಚರ್ಚಿಸುವ ಬದಲಿಗೆ, ಸುಳ್ಳು ಸುದ್ದಿ ಚರ್ಚಿಸುವ ಮೂಲಕ ಅಮೂಲ್ಯವಾದ ಸಮಯ ವ್ಯರ್ಥ ಮಾಡಲಾಗುತ್ತಿದೆ. ಸರಿಯಾದ ಸುದ್ದಿಗಳು ಉಸಿರಾಡಲು ಅವಕಾಶ ಕೊಡುತ್ತಿಲ್ಲ. ಆ ಸುದ್ದಿಗಳು ಜನರ ಆಲೋಚನಾ ಶಕ್ತಿಯನ್ನೇ ಕುಂದಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿ ಸಮಕಾಲೀನ ಪತ್ರಿಕೋದ್ಯಮ ಹಲವು ಸಂದಿಗ್ಧತೆ, ಬಿಕ್ಕಟ್ಟು ಎದುರಿಸುತ್ತಿದೆ.  ಈ ಬಿಕ್ಕಟ್ಟುಗಳಿಗೆ ಪತ್ರಿಕೋದ್ಯಮ ಮುಖಾಮುಖಿಯಾಗಿ ಮತ್ತಷ್ಟು ಹೊಳಪು ಪಡೆಯುವುದೋ ಅಥವಾ ರಾಡಿ ಮೆತ್ತಿಕೊಳ್ಳವುದೋ ಎನ್ನುವ ಪ್ರಶ್ನೆ ಎಲ್ಲರ ಮುಂದಿದೆ. ಇಂದಿನ ಪತ್ರಿಕೋಧ್ಯಮ ಭ್ರಷ್ಟಾಚಾರ, ಸುಳ್ಳು, ಅಂಧಶ್ರದ್ಧೆ, ಜಾತಿವಾದ, ಕೋಮುವಾದಗಳ ಜತೆಗೆ ಕೈಕುಲುಕುತ್ತಿದೆ. ಬಹುತೇಕ ಮಾಧ್ಯಮಗಳು ಓದುಗರನ್ನು ಗ್ರಾಹಕರನ್ನಾಗಿ ನೋಡುತ್ತಿವೆ. ಕಾಸಿಗಾಗಿ ಸುದ್ದಿ ಮಾಡುತ್ತಿವೆ. ಇದು ಬಹುದೊಡ್ಡ ಭ್ರಷ್ಟಾಚಾರ ಹಾಗೂ ಪಿಡುಗು ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪತ್ರಕರ್ತರು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುವ ಜತೆಗೆ ನಿರ್ವಹಿಸುವುದರ ಜತೆಗೆ ಆಳುವವರು, ಕೊಲ್ಲುವವರು, ಪಟ್ಟಭದ್ರರು, ಸಾಮಾಜ ಒಡೆಯುವ ಶಕ್ತಿಗಳ ವಿರುದ್ಧ ಹೋರಾಡುತ್ತಲೇ ತನ್ನೊಳಗಿನ ಓರೆಕೋರೆಗಳ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಇಂದಿನ ಪತ್ರಕರ್ತರ ನಿಷ್ಠೂರ ಧ್ವನಿ ಹತ್ತಿಕ್ಕುವ ಪ್ರಯತ್ನಗಳಾಗುತ್ತಿವೆ ಎಂದರು.

ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು, ಕಾರ್ಯದರ್ಶಿ ಶಂಕರಪ್ಪ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್,  ಮೇಯರ್ ನಾಗರಾಜ್ ಕಂಕಾರಿ, ಧನಂಜಯ್, ರಾಜು, ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !