ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಭೋಜನ ಮತ್ತು ಸಮಾನತೆಯ ಆದರ್ಶ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ತಿನ್ನುವ ಉಣ್ಣುವ ದೈನಂದಿನ ವಿಚಾರಗಳನ್ನು ಗುರಿಯಾಗಿಸಿಕೊಂಡು ದೇಶದಲ್ಲಿ ಎಂಥ ಜೀವಘಾತುಕ ರಾಜಕಾರಣ ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಬೇರೆಲ್ಲ ದಿನಗಳಲ್ಲಿ ಸಾಮಾನ್ಯವಾಗಿ ನಡೆಯುವ ಚಟುವಟಿಕೆಗೆ ಅಂಬೇಡ್ಕರ್ ಜಯಂತಿಯ ‘ದಿನ’ದಂದು ಸಿಕ್ಕ ಹೊಸ ಅರ್ಥಗಳನ್ನು ನೋಡಿ ನಗುಅಳುವನ್ನು ಮೀರಿದ ಸಂಕಟ, ವಿಷಾದ, ವ್ಯಂಗ್ಯ ಆವರಿಸುತ್ತಿದೆ.

‘ನಮ್ಮ ನಡಿಗೆ ದಲಿತರ ಕಡೆಗೆ’ ಎಂಬ ಘೋಷಣೆಯೊಂದಿಗೆ ಹೊರಟಿರುವ ಬಿಜೆಪಿಯು ದಲಿತರ ಮನೆಗಳಲ್ಲಿ ಉಂಡು, ಅವರ ಪ್ರೀತಿ ಗಳಿಸುವ ಇನ್ನೊಂದು ಸುತ್ತಿನ ಪ್ರಯತ್ನ ನಡೆಸಿದೆ. ಮೊದಲ ಸುತ್ತಿನಲ್ಲಿ ಹೋಟೆಲಿನಲ್ಲಿ ತಂದ ತಿಂಡಿಯನ್ನು ದಲಿತರ ಮನೆಗಳಲ್ಲಿ ಉಣ್ಣುವ ಬಿಜೆಪಿ ನಾಯಕರ ಪ್ರಯತ್ನ ನಗೆಪಾಟಲಿಗೀಡಾಗಿತ್ತು. ಮತ್ತೊಮ್ಮೆ ಅದನ್ನೇ ರಿಪೀಟ್ ಮಾಡಲು ಹೊರಟ ಅವರಿಗೆ ತಮ್ಮ ಪ್ರಯತ್ನ ಹಾಸ್ಯಾಸ್ಪದವಷ್ಟೇ ಅಲ್ಲ ಅದು ಅಸ್ಪೃಶ್ಯತೆಯ ಆಚರಣೆಯ ಅಸಹ್ಯ ಉದಾಹರಣೆ ಎಂಬ ಅರಿವೂ ಇಲ್ಲದಂತಾಗಿದೆ.

ಪೌರಕಾರ್ಮಿಕರ ಮನೆಗೆ ಬಿಜೆಪಿ ನಾಯಕರ ದಂಡು ಬರಲಿದೆ ಎಂದು ಗೊತ್ತಾದ ತಕ್ಷಣ ಟಿ.ವಿ. ಕ್ಯಾಮೆರಾಗಳು ಅವರ ಮನೆಗಳಲ್ಲಿ ಹೆಂಗಸರು ಪ್ರಾತಃಕಾಲದಲ್ಲಿಯೇ ಎದ್ದು ಶುಚಿರ್ಭೂತರಾಗಿ ನಾರುಮಡಿಯುಟ್ಟು ತಮ್ಮ ಅಂಗಳ ಗಂಗಾಳಗಳನ್ನು ತೊಳಗಿ ಬೆಳಗಿ ನಾಯಕರ ಆಗಮನಕ್ಕಾಗಿ ಸಡಗರದಿಂದ ಕಾಯುತ್ತಿರುವುದನ್ನು ತೋರಿಸುತ್ತಿದ್ದರು.
ಇದನ್ನೆಲ್ಲ ನೋಡುವವರಿಗೆ ನಾಯಕರು ಸೇವಿಸಲಿರುವ ತಿಂಡಿತಿನಿಸುಗಳು ಈ ಬಾರಿ ಅಪ್ಪಿತಪ್ಪಿಯೂ ಹೋಟೆಲಿನಿಂದ ಸರಬರಾಜಾಗದೆ, ಖುದ್ದು ದಲಿತರ ಮನೆಯಲ್ಲಿಯೇ ತಯಾರಾದವು ಎಂದು ಒತ್ತಿಒತ್ತಿ ಹೇಳುವಂತಿದ್ದವು. ಬೆಳಗೆದ್ದು ಊರಹೊಲಸನ್ನು ಎತ್ತಿಬಿಸಾಡಲು ಅಣಿಯಾಗುವ ಹೆಂಗಳೆಯರಿಗೆ ಅಂಬೇಡ್ಕರ್ ದಿನದಂದು ಇಂಥ ನಾಯಕರ ನೆಪದಿಂದಲಾದರೂ ದೊರಕಿದ ದಿವ್ಯ ಅನುಭೂತಿಗೆ ಕೃತಜ್ಞತೆಗಳನ್ನು ಹೇಳಬೇಕು.

ನಂತರ ಎಲ್ಲರೂ ಊಹಿಸಿದಂತೆ ಯಡಿಯೂರಪ್ಪನವರನ್ನೂ ಸೇರಿದಂತೆ ಐವತ್ತರವತ್ತು ನಾಯಕರ ಆಗಮನವಾಯಿತು, ಉಪಾಹಾರ ಸೇವನೆಯಾಯಿತು. ಇಂಥ ಅಪೂರ್ವ ಗಳಿಗೆಗೆ ಸಾಕ್ಷಿಯಾಗಿದ್ದ ಮಾಧ್ಯಮಗಳಿಗೆ ಹೇಳಿಕೆಯನ್ನೂ ನೀಡಲಾಯಿತು. ‘ನಾಲ್ಕು ತಿಂಗಳಿಂದ ‘ನಮ್ಮ’ ಪೌರ ಕಾರ್ಮಿಕರಿಗೆ ಸಂಬಳ ಸಿಕ್ಕಿಲ್ಲ. ಅವರ ಜೀವನ ಎಷ್ಟು ಘೋರ, ಇದು ಎಂಥ ನೀಚ ಸರ್ಕಾರ’ ಎಂದು ಅಬ್ಬರಿಸುತ್ತ, ‘ಅಂಥವರೊಟ್ಟಿಗೆ ನಾವು ಬೆರೆತು ಸಮಾನತೆಯ ಆದರ್ಶವನ್ನು ಸ್ಥಾಪಿಸಲು ಹೊರಟಿದ್ದೇವೆ’ ಎಂದು ನಾಯಕರು ಕಳಕಳಿಯಿಂದ ಹೇಳಿದರು.

ಮೊದಲೇ ಕೈಬಾಯಿಗಿಲ್ಲದೆ ನಿಕೃಷ್ಟ ಜೀವನ ನಡೆಸುವ ಜನರಿಗೆ ನಾಲ್ಕು ತಿಂಗಳಿಂದ ಸಂಬಳವಿಲ್ಲದ ಮಕ್ಕಳುಮರಿಗಳ ಕುಟುಂಬವೊಂದು ಎಷ್ಟು ಕಂಗಾಲಾಗಿರಬಹುದೋ ಯೋಚಿಸಿ. ಅಂಥವರ ಮನೆಗೆ ನಾಯಕರ ಪುಟ್ಟ ಪಟಾಲಮ್ಮು ಬೆಳಬೆಳಗ್ಗೆ ನುಗ್ಗಿ ‘ನಿಮ್ಮೊಂದಿಗೆ ಉಪಾಹಾರ ಸೇವಿಸುತ್ತೇವೆ’ ಎಂದರೆ ಹೇಗಾಗಿರಬೇಕು? ಅಂಥವರ ಮನೆಯಲ್ಲಿ ಬೆಳಿಗ್ಗೆಯಿಂದಲೇ ತಿಂಡಿ ತಯಾರಿಸುವ ಸಂಭ್ರಮ ಎಲ್ಲಿಂದ ಬರಬೇಕು? ಹಾಗಿದ್ದ ಮೇಲೆ ನಾಯಕರು ಸೇವಿಸಿದ ಉಪಾಹಾರವು ಅವರ ಮನೆಯದೇ ಎಂದು ನಾವು ಹೇಗೆ ನಂಬಬೇಕು? (ಅಥವಾ ಅವರು ಸೇವಿಸಿದ ಉಪಾಹಾರವು ಬಿಜೆಪಿ ವಿರೋಧಿಸುವ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯದೇ ಇರಬೇಕು!)

ತಮಗೆ ಎದ್ದಿರುವ ವೋಟಿನ ಹಸಿವಿಗೆ ಕಂಡಕಂಡವರ ಮನೆಗೆ ನುಗ್ಗಿ ಕುಳಿತವರ ಎದುರು, ದಿನಾಲೂ ಊಟಕ್ಕಾಗಿ ನಿಜವಾಗಿ ಹಸಿದು ನಿಲ್ಲುವವರು ಎಲ್ಲಿ ಹೋಗಬೇಕು? ದಿನಾಲೂ ಗದ್ದೆ ಗೋಮಾಳಗಳು, ಲೇಔಟು-ಬ್ಯಾಂಕುಗಳು, ರಸ್ತೆ, ಕಾಡು, ದೇವಾಲಯ-ಶೌಚಾಲಯಗಳು ಅಂತ ಏನನ್ನಾದರೂ ನುಂಗಿ ನೊಣೆಯುವ ಮಂದಿ ಇದ್ದಕ್ಕಿದ್ದಂತೆ ಬಂದು ‘ನಿಮ್ಮೊಂದಿಗೆ ಉಣ್ಣುತ್ತೇವೆ’ ಎಂದರೆ, ನಿಜವಾದ ಕೂಳಿಗಾಗಿ ಹಸಿದು ಕೂತವರು ಏನಾಗಬೇಕು? ಇಲ್ಲಿ ಸಮಾನತೆ ಹೇಗೆ ಸ್ಥಾಪನೆಯಾಗಬೇಕು?

ಇಂಥ ನಾಟಕವನ್ನು ನೋಡಿಯೇ ಇತ್ತೀಚೆಗೆ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಒಡಿಶಾದ ದಲಿತರ ಮನೆಗೆ ಹೋಗಿ ‘ನಾವು ನಿಮ್ಮೊಂದಿಗೆ ಉಣ್ಣುತ್ತೇವೆ’ ಎಂದು ಕೂತಾಗ ಇಡೀ ಹಳ್ಳಿಯ ಜನ ಬಾಗಿಲುಗಳನ್ನು ಹಾಕಿ ಮೌನ ಪ್ರತಿಭಟನೆ ನಡೆಸಿದರು. ಊರೆಲ್ಲ ತಿಂದು ತೇಗಿದವರು ಬಡವರ ಮನೆಗೆ ಬರುವುದು ತಮ್ಮ ಹಸಿವನ್ನು ನೀಗಿಸಿಕೊಳ್ಳುವುದಕ್ಕೇ ವಿನಾ ಬೇರೆಯವರ ಹಸಿವು ನೀಗಿಸಲು ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು.

ಅವತ್ತೇ ನಡೆದ ಇನ್ನೊಂದು ಸಹಭೋಜನದ ಸಂಗತಿ ಇನ್ನಷ್ಟು ಅವಮಾನಕರವಾಗಿದೆ. ಮುಂದಿನ ಮುಖ್ಯಮಂತ್ರಿಯಾಗಲು ತುದಿಗಾಲಲ್ಲಿ ನಿಂತಿರುವ ಯಡಿಯೂರಪ್ಪನವರ ಮನೆಯಲ್ಲಿ ಮಧ್ಯಾಹ್ನದ ಭೋಜನಕ್ಕೆ ಪೌರಕಾರ್ಮಿಕರ ಗುಂಪೊಂದಕ್ಕೆ ಆಹ್ವಾನ ನೀಡಲಾಗಿತ್ತು. ಎಲ್ಲ ಕಡೆ ಬಿಳಿಹಾಸುಗಳನ್ನು ಹಾಸಿದ್ದ ಸಭಾಂಗಣದಲ್ಲಿ ಮನೆಗೆ ಕರೆಸಿಕೊಂಡ ಅತಿಥಿಗಳಿಗೆ ಸ್ವತಃ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆಯವರು ಜೊತೆಗೂಡಿ ಹೋಳಿಗೆ ತುಪ್ಪಗಳನ್ನು ಬಡಿಸುತ್ತಿದ್ದರು. ಆದರೆ ಸ್ವತಃ ಯಡಿಯೂರಪ್ಪ ಮನೆಯಲ್ಲಿ ಪೌರಕಾರ್ಮಿಕರನ್ನು ಅವರ ಯೂನಿಫಾರಮ್ಮಿನಲ್ಲೇ ಔತಣಕ್ಕೆ ಕೂಡಿಸಿದ ದೃಶ್ಯವಂತೂ ಅವಮಾನಕರವಾಗಿತ್ತು. ಎಂಥ ಕಡುಬಡವರ ಮನೆಯ ಊಟಕ್ಕೆ ಹೋಗುವಾಗಲೂ ಕೊಳೆಯಾದ ಯೂನಿಫಾರಮ್ಮಿನ ಡ್ರೆಸ್ಸಿನಲ್ಲಿ ಯಾವ ಬಡವನೂ ಹೋಗುವುದಿಲ್ಲ. ಯಾವ ಹಿರಿಮೆಗೂ ಕಾರಣವಲ್ಲದ ದಿರಿಸನ್ನು ಧರಿಸಿ ನಾಡಿನ ಭವಿಷ್ಯದ ನಾಯಕನ ಜೊತೆ ತುತ್ತು ಹಂಚಿಕೊಂಡ ದೃಶ್ಯದಲ್ಲಿ ಸಮಾನತೆಗಿಂತ ಪಂಕ್ತಿಭೇದವೇ ಎದ್ದು ಕಾಣುತ್ತಿತ್ತು.

ಊಟದ ಹೊತ್ತಲ್ಲಿ ಯಾರೋ ‘ಸಾಹೇಬರ ಮನೆಯಲ್ಲಿ ಬಾಡೂಟ ಇರುತ್ತೆ ಅಂತ ಅನ್ಕಂಡು ಬಂದಿದ್ವಿ’ ಅಂದರು. ಬಡಿಸುತ್ತಿದ್ದ ಶೋಭಾ ಕರಂದ್ಲಾಜೆಯವರೂ ನಕ್ಕು ಅದಕ್ಕೆ ದನಿಗೂಡಿಸಿ ‘ಹೌದು ನಾನೂ ಸಹ ಸಾಹೇಬರ ಮನೆಯ ಬಾಡೂಟಕ್ಕೆ ಕಾಯುತ್ತಿದ್ದೇನೆ’ ಎಂದರು. ತಮಗೆ ಇಷ್ಟವಾಗದ ಆಹಾರ ತಿನ್ನುವವರನ್ನು ಇರಿದು ಕೊಲ್ಲುವ ಇತಿಹಾಸವಿರುವ ಬಿಜೆಪಿಯವರಿಗೆ ಬಸವಣ್ಣ ಮತ್ತು ಅಂಬೇಡ್ಕರ್ ಹೇಳುವ ಸಹಭೋಜನದ ಅರಿವಿಲ್ಲ. ಗಾಂಧಿ ಹೇಳುವ ಸಹಜೀವನದ ಮಹತ್ವ ಕಿಂಚಿತ್ತಾದರೂ ತಿಳಿದಂತಿಲ್ಲ. ಬುದ್ಧ ತನ್ನ ಶಿಷ್ಯ ಚುಂಡನ ಮನೆಗೆ ಹೋದಾಗ ಅವನು ಕೊಟ್ಟ ಅರೆಬೆಂದ ಹಂದಿಯ ಮಾಂಸವನ್ನೇ ಬೇಡ ಅನ್ನಲಾಗದೆ ತಿಂದು ಅಜೀರ್ಣವಾಗಿ ಕೊನೆಯುಸಿರೆಳೆದ. ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಇನ್ನೊಬ್ಬರನ್ನು ಕರೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ಇಂಥ ಕಪಟ ರಾಜಕಾರಣಿಗಳಿಗೆ ಅಂಬೇಡ್ಕರ್, ಬಸವಣ್ಣ, ಗಾಂಧಿ, ಬುದ್ಧರ ಹೆಸರುಗಳು ನಾಲಿಗೆಯ ಮೇಲೆ ಹೊರಳುವ ಪದಗಳೇ ಹೊರತು ಇನ್ನೇನೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT