ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಗಳ ಅಭಿವೃದ್ಧಿಗೆ ತಲಾ ₹ 125 ಕೋಟಿ: ಸಚಿವ ಖಾದರ್

Last Updated 2 ಜುಲೈ 2019, 18:35 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೇಂದ್ರ ಸರ್ಕಾರದ ‘ಸ್ಮಾರ್ಟ್‌ಸಿಟಿ’ ಯೋಜನೆಯನ್ನೂ ಮೀರಿಸುವಂತೆ ರಾಜ್ಯದ ನಗರಗಳನ್ನು ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 8 ಲಕ್ಷ ಜನಸಂಖ್ಯೆ ಇರುವ ನಗರಗಳಿಗೆ ತಲಾ ₹ 125 ಕೋಟಿ ಹಾಗೂ 10 ಲಕ್ಷ ಜನಸಂಖ್ಯೆಯ ನಗರಗಳಿಗೆ ತಲಾ ₹ 150 ಕೋಟಿ ಅನುದಾನ ನೀಡಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ತಿಳಿಸಿದರು.

‘ಕೇಂದ್ರ ಸರ್ಕಾರ ಕೆಲವು ಮಾನದಂಡಗಳ ಮೂಲಕ ಸ್ಮಾರ್ಟ್‌ಸಿಟಿ ಆಯ್ಕೆ ಮಾಡಿ, ₹ 100 ಕೋಟಿ ಅನುದಾನ ನೀಡುತ್ತದೆ. ಹಾಗೆಂದಮಾತ್ರಕ್ಕೆ ಇತರ ನಗರಗಳು ಹಿಂದೆ ಬೀಳಬೇಕೆಂದಿಲ್ಲ. ಕೇಂದ್ರಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ನಾವು ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದೇವೆ’ ಎಂದು ಅವರು ಇಲ್ಲಿ ಮಂಗಳವಾರ ಮಾಧ್ಯಮಗಳ ಮುಂದೆ ಹೇಳಿದರು.

‘ರಾಜ್ಯದಲ್ಲಿ 10 ಮಹಾನಗರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿನ ನೀರಿನ ನಾಲೆಗಳನ್ನು ಏಕಕಾಲಕ್ಕೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಕೆಲವೇ ದಿನಗಳಲ್ಲಿ ಇದಕ್ಕೆ ಚಾಲನೆ ಸಿಗಲಿದೆ’ ಎಂದರು.

ನಗರ ಪ್ರದೇಶಗಳಲ್ಲಿ ಈಗ ಪಿಜಿ (ಪೇಯಿಂಗ್‌ ಗೆಸ್ಟ್‌)ಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇವುಗಳ ಮೇಲೆ ನಿಗಾ ಇಡಲು ‘ಪಿಜಿ ಪಾಲಿಸಿ’ ತರಲಾಗುತ್ತಿದೆ. ಒಂದು ಪೇಯಿಂಗ್‌ ಗೆಸ್ಟ್‌ ಮನೆಯಲ್ಲಿ ಏನೆಲ್ಲ ಸೌಕರ್ಯ ಇರಬೇಕು, ಆರೋಗ್ಯ, ಸುರಕ್ಷತೆ, ಸ್ಥಳಾವಕಾಶ ಮುಂತಾದವುಗಳ ಬಗ್ಗೆ ಈವರೆಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಆದ್ದರಿಂದ ಹೊಸ ಕಾಯ್ದೆ ಜಾರಿಗೆ ತಂದು ಪಿಜಿ ಅವಲಂಬಿತರಿಗೆ ರಕ್ಷಣೆ ನೀಡಲಾಗುವುದು ಎಂದೂ ಸಚಿವರು ತಿಳಿಸಿದರು.

‌ಕಟ್ಟಡ ಬೈಲಾ ಪರಿಷ್ಕರಣೆ: ಮಹಾನಗರಗಳಲ್ಲಿ ಕಟ್ಟಡ ಕಟ್ಟಲು ಸಾಕಷ್ಟು ಅಡೆತಡೆ ಮಾಡುತ್ತಿದ್ದ ‘ಬಿಲ್ಡಿಂಗ್‌ ಬೈಲಾ’ವನ್ನು ಪರಿಷ್ಕರಣೆ ಮಾಡಿದ್ದೇವೆ. ಈಗ ಕಟ್ಟಡ ಕಟ್ಟಲು ಅನುಮತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ಅದು ನೇರವಾಗಿ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಹೋಗುತ್ತದೆ. 40 ದಿನಗಳ ಒಳಗಾಗಿ ನಿರಾಕ್ಷೇಪಣಾ ಪತ್ರ (ನಾನ್‌ ಆಬ್ಜಕ್ಷನ್‌) ಆನ್‌ಲೈನ್‌ನಲ್ಲೇ ಸಿಗುತ್ತದೆ. ಒಂದು ವೇಳೆ ಸಿಗದಿದ್ದರೂ ಆ ಜಾಗಕ್ಕೆ ಏನೂ ಆಕ್ಷೇಪಣೆ ಇಲ್ಲ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಬಂಡವಾಳ ಹಾಕಿದವರು ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT