ಸೇಡಂ (ಕಲಬುರಗಿ ಜಿಲ್ಲೆ): ಸತತ ಮಳೆಯಿಂದಾಗಿ ತಾಲ್ಲೂಕಿನ ಕಾಗಿಣಾ-ಕಮಲಾವತಿ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಮೈದುಂಬಿ ಹರಿಯುತ್ತಿವೆ.
ಉಭಯ ನದಿಗಳಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ನದಿ ಪಾತ್ರದ ಗ್ರಾಮಗಳ ಕೆಲ ಮನೆಗಳಿಗೆ ನೀರು ನುಗ್ಗಿದೆ. ಜೊತೆಗೆ ಯಡ್ಡಳ್ಳಿ, ತೇಲ್ಕೂರ, ಕಾಚೂರ, ಬಿಬ್ಬಳ್ಳಿ, ಸಂಗಾವಿ(ಎಂ), ಬಟಗೇರಾ, ಸಿಂಧನಮಡು ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಿಗೆ ನೀರು ನುಗ್ಗಿದೆ.
ಹೊಲ ಗದ್ದೆಗಳಲ್ಲಿ ನೀರು ನುಗ್ಗಿ ಬೆಳೆಗಳು ನೆಲಕ್ಕೆ ಬಾಗಿವೆ. ತಾಲ್ಲೂಕಿನ ಮಳಖೇಡದಿಂದ ಸಂಗಾವಿ(ಎಂ) ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಮೇಲೆ ಕಾಗಿಣಾ ನದಿ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಬಿಬ್ಬಳ್ಳಿ, ಯಡ್ಡಳ್ಳಿ ಗ್ರಾಮಗಳ ಸೇತುವೆಗಳ ಮೇಲೂ ನೀರು ಹರಿಯುತ್ತಿದೆ.
ಕಾಗಿಣಾ ನದಿ ನೀರು ಮಳಖೇಡ ಉತ್ತರಾಧಿ ಮಠಕ್ಕೆ ನುಗ್ಗಿದ್ದು, ಉತ್ತರಾಧಿ ಮಠ ಭಾಗಶಃ ಜಲಾವೃತ್ತಗೊಂಡಿದೆ.
ಮಳಖೇಡ ಹಳೆ ಸೇತುವೆ ಜಲಾವೃತ್ತ: ತಾಲ್ಲೂಕಿನ ಮಳಖೇಡ ಗ್ರಾಮದ ಕಾಗಿಣಾ ನದಿಯ ಹಳೆ ಸೇತುವೆ ಮೇಲೆ ನೀರು ಬಂದಿದ್ದು, ಸಂಪೂರ್ಣ ಜಲಾವೃತ್ತಗೊಂಡಿದೆ. ನೀರು ಹರಿಯುತ್ತಿರುವುದರಿಂದ ಹಳೆ ಸೇತುವೆ ಮೇಲಿನ ಸಂಪರ್ಕ ಸ್ಥಗಿತಗೊಳಿಸಲಾಗಿದೆ.
ಮಳಖೇಡ ಪೊಲೀಸ್ ಠಾಣೆಯ ಪೊಲೀಸರು ಬ್ಯಾರಿಕೇಡ್ ಹಾಕಿ ನದಿಯತ್ತ ಜನರಿಗೆ ತೆರಳದಂತೆ ಬಂದೋಬಸ್ತ್ ಕೈಗೊಂಡಿದ್ದಾರೆ. ನೂತನ ಸೇತುವೆ ಮೇಲಿಂದ ವಾಹನಗಳು ತೆರಳುತ್ತಿವೆ. ಇದರಿಂದ ಜಿಲ್ಲಾ ಸಂಪರ್ಕಕ್ಕೆ ವಾಹನಗಳು ಸಂಚರಿಸುತ್ತಿವೆ.
ರಾಜ್ಯ ಹೆದ್ದಾರಿ-10 ಸಂಪರ್ಕ ಸ್ಥಗಿತ: ಸೇಡಂ ತಾಲ್ಲೂಕಿನ ಕಮಲಾವತಿ ನದಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಬಟಗೇರಾ ಸೇತುವೆ ಸಂಪೂರ್ಣ ಜಲಾವೃತ್ತಗೊಂಡಿದೆ. ಇದರಿಂದಾಗಿ ರಾಜ್ಯ ಹೆದ್ದಾರಿ-10ರ ಕಲಬುರಗಿ-ರಿಬ್ಬನಪಲ್ಲಿ ಸಂಪರ್ಕ ಸ್ಥಗಿತಗೊಂಡಿದೆ. ಕಲಬುರಗಿ- ಹೈದರಾಬಾದ್ ನಡುವೆ ಸಂಚರಿಸುವ ವಾಹನಗಳು ಸಾಲುಗಟ್ಟಿ ನಿಂತಿವೆ.
ನದಿಯತ್ತ ತೆರಳದಂತೆ ಸೇಡಂ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥರೆಡ್ಡಿ ನೇತೃತ್ವದ ಸಿಬ್ಬಂದಿ ಬಂದೋಬಸ್ತ್ ಕ್ರಮ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.