ಅಂತರಂಗದ ಸಾಮರ್ಥ್ಯ ಜಾಗೃತಗೊಳಿಸಿ

7
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಸುಷ್ಮಾ ಸಾಹು ಸಲಹೆ

ಅಂತರಂಗದ ಸಾಮರ್ಥ್ಯ ಜಾಗೃತಗೊಳಿಸಿ

Published:
Updated:
Deccan Herald

ಕಲಬುರ್ಗಿ: ‘ಮಹಿಳೆಗೆ ಅಂತರಂಗದ ಸಾಮರ್ಥ್ಯ ಅರಿವಾಗುವವರೆಗೆ ಮಾತ್ರ ಆಕೆ ಅಬಲೆ. ಒಮ್ಮೆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಸಂಕಲ್ಪ ಮಾಡಿದರೆ ಆಕೆಯ ವೇಗಕ್ಕೆ ತಡೆ ಹಾಕುವ ಶಕ್ತಿ ಯಾರಿಗೂ ಇಲ್ಲ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಸುಷ್ಮಾ ಸಾಹು ಹೇಳಿದರು.

ಬಸವ ಸಮತಿಯ ಅಕ್ಕನ ಬಳಗದಿಂದ ನಗರದಲ್ಲಿ ಆಯೋಜಿಸಿದ್ದ ‘ಮಹಾದೇವಿಯಕ್ಕಗಳ ಸಮ್ಮೇಳನ’ದಲ್ಲಿ ಭಾನುವಾರ ‘ವೈರಾಗ್ಯನಿಧಿ ಅಕ್ಕ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಹೆಣ್ಣಿಲ್ಲದೆ ತಾಯಿ ಇಲ್ಲ, ತಾಯಿ ಇಲ್ಲದೆ ಸೃಷ್ಠಿ ಇಲ್ಲ, ಸೃಷ್ಠಿಯೇ ಇಲ್ಲದ ಮೇಲೆ ನಾವೆಲ್ಲಿ ಇರುತ್ತೇವೆ? ಹೆಣ್ಣುಮಕ್ಕಳು ಜನಿಸಿದಾಗ ಹೀಗಳೆಯುವ ಸಮಾಜ ಈ ಸತ್ಯ ಅರ್ಥ ಮಾಡಿಕೊಳ್ಳಬೇಕು. ಛಲ ಹಾಗೂ ಸಂಕಲ್ಪದಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನನ್ನ ಬದುಕೇ ಸಾಕ್ಷಿ’ ಎಂದು ಅವರು ಕೆಲ ಕಹಿ ಘಟನೆಗಳನ್ನು ನೆನೆದರು.

‘ಮಹಿಳೆ ಎಂದಾಕ್ಷಣ ಎಲ್ಲರ ಕಣ್ಣಲ್ಲಿ ಮೂಡುವುದು ಒಂದು ದೇಹಾಕೃತಿ ಮಾತ್ರ. ಆದರೆ, ಆ ದೇಹದಲ್ಲಿ ಹೃದಯ ಕೂಡ ಇದೆ ಎಂದು ಏಕೆ ನೆನಪಾಗುವುದಿಲ್ಲ?’ ಎಂದು ಅವರು ಲಿಂಗ ತಾರತಮ್ಯ ಮಾಡುವವರ ವಿರುದ್ಧ ಚಾಟಿ ಬೀಸಿದರು.

‘ವೈವಾಹಿಕ ಜೀವನ ಮುರಿದುಬಿದ್ದ ಮೇಲೆ ನಾನು ಓದಿ, ಬೆಳೆದು ಸ್ವತಂತ್ರ ಬದುಕು ಕಟ್ಟಿಕೊಂಡೆ. ನನ್ನಂಥ ನೂರು ಹೆಣ್ಣುಮಕ್ಕಳಿಗೆ ಆಸರೆಯಾಗುಷ್ಟು ಬೆಳೆದಿದ್ದೇನೆ. ಕಷ್ಟಗಳು ಬರುವುದು ಗಟ್ಟಿಯಾಗಲೆಂದೆ ಹೊರತು; ಸಾಯಲಿ ಎಂದಲ್ಲ. ಆತ್ಮಹತ್ಯೆಯ ಆಲೋಚನೆ ಬಿಟ್ಟು ಮುನ್ನುಗ್ಗಿದರೆ ದಾರಿ ನೂರಾರು ಇವೆ’ ಎಂದವರು ಚೈತನ್ಯ ತುಂಬಿದರು.

ಸಮ್ಮೇಳನಾಧ್ಯಕ್ಷೆ ಶಶಿಕಲಾ ಗಿರಿ, ಸರ್ವಮಂಗಳಾ ಜೋಗೂರ, ನೀಲಮ್ಮ ಎಣೆಗೂರ ಮಹಾಗಾಂವ, ಸುರೇಖಾ ಮಾಲಿಪಾಟೀಲ, ರತ್ನಾಬಾಯಿ ನಿಂಬೂರ, ಮಹಾನಂದಾ ಹುಗ್ಗಿ ಅವರನ್ನು ಸನ್ಮಾನಿಸಲಾಯಿತು. ಡಾ.ನೀಲಮ್ಮ ಕತ್ನಳ್ಳಿ ಸಮಾರೋಪ ಭಾಷಣ ಮಾಡಿದರು.

ಪ್ರೊ.ಸುಲೇಖಾ ಮಾಲಿಪಾಟೀಲ, ಅಶ್ವಿನಿ ಕೇಸೂರ ಕಾರ್ಯಕ್ರಮ ನಿರೂಪಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !