ಮಧ್ಯಸ್ಥಿಕೆದಾರರ ಪಾತ್ರ ಬಹಳ ಮುಖ್ಯ

7
ಹೈಕೋರ್ಟ್ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅಭಿಮತ

ಮಧ್ಯಸ್ಥಿಕೆದಾರರ ಪಾತ್ರ ಬಹಳ ಮುಖ್ಯ

Published:
Updated:

ಕಲಬುರ್ಗಿ: ‘ದೂರುದಾರರಿಗೆ ನ್ಯಾಯ ಕೊಡಿಸುವಲ್ಲಿ ಮಧ್ಯಸ್ಥಿಕೆದಾರರ ಪಾತ್ರ ಬಹಳಷ್ಟು ಮುಖ್ಯವಾಗಿದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಎಡಿಆರ್ ಕಟ್ಟಡದ ಸಭಾಂಗಣದಲ್ಲಿ ಬೆಂಗಳೂರು ಮತ್ತು ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದ ವತಿಯಿಂದ ಕಲಬುರ್ಗಿ, ಬೀದರ್, ಯಾದಗಿರಿ ಮಧ್ಯಸ್ಥಿಕೆದಾರರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಪುನಶ್ಚೇತನ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ದೂರುದಾರರ ಮನಸ್ಥಿತಿ, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಧ್ಯಸ್ಥಿಕೆದಾರರು ಸಮಾಧಾನದಿಂದ ಆಲಿಸಬೇಕು. ಅವರ ಸಮಸ್ಯೆಗಳನ್ನು ಅವರೇ ಇತ್ಯರ್ಥಪಡಿಸಿಕೊಳ್ಳಲು ನೆರವಾಗಬೇಕು. ಈ ಕೆಲಸ ಮಧ್ಯಸ್ಥಿಕೆದಾರರಿಂದ ಮಾತ್ರ ಸಾಧ್ಯ’ ಎಂದು ತಿಳಿಸಿದರು.

‘ಹಳ್ಳಿಗಳಲ್ಲಿ ಈ ಹಿಂದೆ ಪಂಚಾಯಿತಿ ಕಟ್ಟೆಗಳಲ್ಲಿ ನ್ಯಾಯ ಬಗೆಹರಿಸುತ್ತಿದ್ದರು. ಕೆಲವೆಡೆ ಇಂದಿಗೂ ಮಠಾಧೀಶರ ಬಳಿ ಹೋಗಿ ನ್ಯಾಯ ಇತ್ಯರ್ಥಪಡಿಸಿಕೊಳ್ಳುವ ವ್ಯವಸ್ಥೆ ಜಾರಿಯಲ್ಲಿದೆ’ ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮಾತನಾಡಿ, ‘ಎಂತಹದ್ದೇ ಪ್ರಕರಣವಿದ್ದರೂ ಇತ್ಯರ್ಥಪಡಿಸುವ ಶಕ್ತಿ ಮಧ್ಯಸ್ಥಿಕೆದಾರರಿಗೆ ಇದೆ. ದೂರುದಾರರು ಯಾವ ಮನಸ್ಥಿತಿಯೊಂದಿಗೆ ನಿಮ್ಮ ಬಳಿ ಬರುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಅವರಿಗೆ ಸ್ನೇಹಿತ, ತತ್ವಜ್ಞಾನಿ, ಮಾರ್ಗದರ್ಶಕರಾಗಿ ತಿಳಿಹೇಳಬೇಕು. ವಕೀಲರು ಒಬ್ಬರು ದೂರುದಾರರೊಂದಿಗೆ ಮಾತ್ರ ಮಾತನಾಡುತ್ತಾರೆ. ಆದರೆ ಮಧ್ಯಸ್ಥಿಕೆದಾರರಿಗೆ ಎರಡೂ ಕಡೆಯ ದೂರುದಾರರೊಂದಿಗೆ ಮಾತನಾಡುವ ಅವಕಾಶವಿರುತ್ತದೆ’ ಎಂದರು.

‘ಮಧ್ಯಸ್ಥಿಕೆ ಬಿಕ್ಕಟ್ಟಿನಿಂದ ಆರಂಭವಾಗದೆ ಮುಕ್ತವಾಗಿ ಆರಂಭವಾಗಬೇಕು. ದೂರುದಾರರು ವಕೀಲರು ಹೇಳಿದ್ದನ್ನು ಮಾತ್ರ ನಂಬುತ್ತಾರೆ. ಆದ್ದರಿಂದ ಮಧ್ಯಸ್ಥಿಕೆಗೆ ಸಾಕಷ್ಟು ಸಮಯ ತೆಗೆದುಕೊಳ್ಳಬೇಕು. ಯಾವ ಕಾರಣಕ್ಕೂ ಒಬ್ಬರದ್ದು ಸರಿ, ಇನ್ನೊಬ್ಬರದ್ದ ತಪ್ಪು ಎಂದು ಹೇಳಬಾರದು. ಸರಿ–ತಪ್ಪುಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ತಿಳಿಸಿದರು.
ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ವಕೀಲರ ಪರಿಷತ್ ಸದಸ್ಯ ಕಾಶಿನಾಥ ಮೋತಕಪಲ್ಲಿ, ಕಾಯಂ ಲೋಕದಾಲತ್‌ ಮುಖ್ಯಸ್ಥ ಎಸ್.ಎಂ.ಪಾಟೀಲ, ತರಬೇತುದಾರರಾದ ಸುಶೀಲಾ ಎಸ್., ಭರತ ಕುಮಾರ್ ಮೆಹ್ತಾ, ಜೊ ಜೋಸೆಫ್ ಇದ್ದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪಿ.ಟಿ.ಕಟ್ಟಿಮನಿ ಸ್ವಾಗತಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ಮಾಣಿಕ್ಯ ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !