ಗುತ್ತಿಗೆದಾರರ ₹10 ಸಾವಿರ ಕೋಟಿ ಬಿಲ್ ಬಾಕಿ, ಕಾಮಗಾರಿ ನನೆಗುದಿಗೆ: ಬಿಎಸ್‌ವೈ

7

ಗುತ್ತಿಗೆದಾರರ ₹10 ಸಾವಿರ ಕೋಟಿ ಬಿಲ್ ಬಾಕಿ, ಕಾಮಗಾರಿ ನನೆಗುದಿಗೆ: ಬಿಎಸ್‌ವೈ

Published:
Updated:
Deccan Herald

ಕಲಬುರ್ಗಿ: ‘ರಾಜ್ಯದಲ್ಲಿ ಗುತ್ತಿಗೆದಾರರ ₹10 ಸಾವಿರ ಕೋಟಿ ಬಿಲ್ ಬಾಕಿಯಿರುವ ಕಾರಣ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನಗಳಾದರೂ ಯಾವೊಬ್ಬ ಸಚಿವರೂ ಜಿಲ್ಲಾ ಪ್ರವಾಸ ಕೈಗೊಂಡು ಜನರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಲೋಕೋಪಯೋಗಿ, ನೀರಾವರಿ ಯೋಜನೆ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಅಭಿವೃದ್ಧಿಯತ್ತ ಗಮನಹರಿಸದ ಸಮ್ಮಿಶ್ರ ಸರ್ಕಾರ ಕಮಿಷನ್‌ ಏಜೆಂಟ್‌ನಂತೆ ವರ್ತಿಸುತ್ತಿದೆ’ ಎಂದು ದೂರಿದರು.

‘ಸಮ್ಮಿಶ್ರ ಸರ್ಕಾರದಲ್ಲಿ ಅವರವರೇ ಕಿತ್ತಾಡಿಕೊಂಡು ಸಾಯುತ್ತಿದ್ದಾರೆ. ನಾವು ವಿರೋಧ ಪಕ್ಷದಲ್ಲಿದ್ದು, ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ. ಶುಕ್ರವಾರ ಬಹಳ ಕಷ್ಟಪಟ್ಟು ಸಮನ್ವಯ ಸಮಿತಿ ಸಭೆ ನಡೆಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಎಲ್ಲಾ ಸಚಿವರು ತಮ್ಮ ತಮ್ಮ ಜಿಲ್ಲೆಗಳಿಗೆ ಸೀಮಿತರಾಗಿದ್ದಾರೆ. ಅವರಿಗೂ ರಾಜ್ಯಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಎಲ್ಲರೂ ತಮ್ಮ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇಷ್ಟು ದಿನ ನಾವು ಕಾದು ನೋಡಿದ್ದೇವೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇನ್ನು ಮುಂದೆ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ರೈತರ ಲೇವಾದೇವಿ ಸಾಲ ಮನ್ನಾ ಬಗ್ಗೆ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ, ಅದರ ಸಾಧಕ ಬಾಧಕ ಬಗ್ಗೆ ಯೋಚನೆ ಮಾಡಿಲ್ಲ. ಎಲ್ಲಿ ತಾವು ಅಧಿಕಾರ ಕಳೆದುಕೊಳ್ಳುತ್ತೇವೆಯೋ ಎಂಬ ಭೀತಿಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ನೋಟು ರದ್ದತಿ ಬಗ್ಗೆ ರಾಹುಲ್ ಗಾಂಧಿ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಒಟ್ಟು ದೇಶಿ ಉತ್ಪನ್ನ (ಜಿಡಿಪಿ) ಬೆಳವಣಿಗೆ ಶೇ 7.7ರಿಂದ 8.2ರಷ್ಟು ಏರಿಕೆಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !