‘ಟ್ಯಾಕ್ಸಿ ಚಾಲಕರ ಭವನಕ್ಕೆ₹3 ಕೋಟಿ ಅನುದಾನ’

ಸೋಮವಾರ, ಮಾರ್ಚ್ 25, 2019
28 °C

‘ಟ್ಯಾಕ್ಸಿ ಚಾಲಕರ ಭವನಕ್ಕೆ₹3 ಕೋಟಿ ಅನುದಾನ’

Published:
Updated:
Prajavani

ಕಲಬುರ್ಗಿ: ‘ಟ್ಯಾಕ್ಸಿ ಚಾಲಕರ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವ ಜತೆಗೆ ₹3 ಕೋಟಿ ಅನುದಾನ ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಕೊಠಾರಿ ಭವನದಲ್ಲಿ ಕರ್ನಾಟಕ ರಾಜ್ಯ ಖಾಸಗಿ ಹಾಗೂ ಟ್ಯಾಕ್ಸಿ ವಾಹನ ಚಾಲಕರ ಸಂಘ ಮತ್ತು ಜಿಲ್ಲಾ ಟ್ಯಾಕ್ಸಿ ಚಾಲಕರ ಸಂಘವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಟ್ಯಾಕ್ಸಿ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಈಗಾಗಲೇ ಅಧ್ಯಯನ ಮಾಡಲಾಗಿದೆ. ಚಾಲಕರಿಗೆ ಅನುಕೂಲ ಕಲ್ಪಿಸಲು ಶೀಘ್ರವೇ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗುವುದು. ಟ್ಯಾಕ್ಸಿ ಚಾಲಕರು ಕಷ್ಟದ ಸಂದರ್ಭಗಳಲ್ಲೂ ಕಾರ್ಯ ನಿರ್ವಹಿಸುತ್ತಾರೆ. ಹಾಗಾಗಿ ಅವರಿಗೆ ಅನುಕೂಲ ಕಲ್ಪಿಸಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ ’ಎಂದು ಹೇಳಿದರು.

‘ಚಾಲನಾ ಪರವಾನಗಿ ಪತ್ರ ವಿತರಣೆಗೆ ಸಂಬಂಧಿಸಿದಂತೆ ಕೆಲವು ನಿಯಮಾವಳಿಗನ್ನು ಸಡಿಲಿಸುವಂತೆ ಕೋರಿಕೆಗಳು ಬಂದಿವೆ. ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

‘ಐರಾವತ ಯೋಜನೆಯಡಿ ಆಯ್ಕೆಯಾದ ಚಾಲಕರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ₹5 ಲಕ್ಷ ಸಹಾಯಧನ ಒದಗಿಸಲಾಗುತ್ತಿದೆ. ₹225 ಕೋಟಿ ಅನುದಾನಲ್ಲಿ 4,500 ಫಲಾನುಭವಿಗಳಿಗೆ ಟ್ಯಾಕ್ಸಿ ವಿತರಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

‘ಚಾಲಕರು ಸಮಾಜದ ಜನರನ್ನು ಪ್ರತಿಬಿಂಬಿಸುವ ಜತೆಗೆ ಸಾಂಸ್ಕೃತಿಕ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ವಿಮಾನ, ರೈಲು ಹಾಗೂ ಬಸ್ ನಿಲ್ದಾಣ ಸೇರಿದಂತೆ ಎಲ್ಲಾ ಕಡೆಯೂ ಉತ್ತಮ ಸೇವೆ ನೀಡುತ್ತಿದ್ದಾರೆ. ಆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ’ ಎಂದು ಪ್ರಶಂಸಿಸಿದರು.

ಮೇಯರ್ ಮಲ್ಲಮ್ಮ ವಳಕೇರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ, ಹಿರಿಯ ಮುಖಂಡ ಗೋಪಾಲರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !