ಕಲಬುರಗಿ: ಜಿಲ್ಲೆಯ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಆಗಿರುವ ತೊಂದರೆಯನ್ನು ಎದುರಿಸಲು ₹ 1 ಕೋಟಿ ಅನುದಾನವನ್ನು ತುರ್ತು ನಿರ್ವಹಣೆಗಾಗಿ ಮಂಜೂರು ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಜಿಲ್ಲೆಯ ಯಡ್ರಾಮಿ ಹಾಗೂ ಜೇವರ್ಗಿ ತಾಲ್ಲೂಕುಗಳ ತಲಾ ಒಂದೊಂದು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂಬರುವ ವಾರಗಳಲ್ಲಿ ಕಡಿಮೆ ಮಳೆಯಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳನ್ನು ಮೌಲ್ಯಮಾಪನ ಮಾಡಲಾಗಿದ್ದು, ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಪ್ರಸ್ತುತ 130 ಕಾಮಗಾರಿಗಳಿಗೆ ಸಂಬಂಧಿಸಿದಂತೆ ₹ 2.6 ಕೋಟಿಯ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಗ್ರಾಮೀಣ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಖಾಸಗಿಯಾಗಿ ಬಾಡಿಗೆಗೆ ಪಡೆಯಲಾಗಿರುವ ಕೊಳವೆಬಾವಿ ಹಾಗೂ ಟ್ಯಾಂಕರ್‌ಗಳ ಬಾಡಿಗೆ ಶುಲ್ಕದ ಬಿಲ್‌ಗಳನ್ನು ಪಾವತಿಸಲು ಗ್ರಾಮ ಪಂಚಾಯಿತಿಗಳಿಗೆ ಅನುದಾನದ ಕೊರತೆಯಿದ್ದು, ಈ ವೆಚ್ಚವನ್ನು ಭರಿಸಲು ₹ 20 ಲಕ್ಷ ಮಂಜೂರು ಮಾಡಲಾಗುವುದು. ಮೇ, ಜೂನ್ ತಿಂಗಳುಗಳಲ್ಲಿ 7 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ’ ಎಂದು ಹೇಳಿದ್ದಾರೆ.
‘ಜಿಲ್ಲೆಯಲ್ಲಿ 200 ಶುದ್ಧ ನೀರಿನ ಘಟಕಗಳು ದುರಸ್ತಿಗೆ ಒಳಗಾಗಿದ್ದು, ಇವುಗಳನ್ನು ಸರಿಪಡಿಸಿ ನೀರು ಸರಬರಾಜು ಮಾಡಲು ಕಾರ್ಯಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ. ಕೊಳವೆಬಾವಿ ಹಾಗೂ ತೆರೆದ ಬಾವಿಗಳಲ್ಲಿ ಅಂತರ್ಜಲ ಕಲುಷಿತಗೊಳ್ಳದಂತೆ ಸ್ವಚ್ಛತಾ ಅಭಿಯಾನ ಕೈಗೊಂಡು ಸುತ್ತಮುತ್ತಲ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆ. ಜಿಇ, ಕಾಲರಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿಂದಿನ ಐದು ವರ್ಷಗಳ ಕಣ್ಗಾವಲು ಮಾಹಿತಿಯನ್ನು ಆಧರಿಸಿ 49 ಗ್ರಾಮಗಳನ್ನು ಗುರುತಿಸಿಲಾಗಿದೆ. ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ರೀತಿಯ ಮಾಲಿನ್ಯವನ್ನು ತಪ್ಪಿಸಲು ನೀರಿನ ಪರೀಕ್ಷೆ, ಸಂಭವನೀಯ ಜಿಇ ಪ್ರಕರಣಗಳನ್ನು ಗುರುತಿಸಲು ಆಶಾ ಕಾರ್ಯಕರ್ತರ ಮೂಲಕ ಸಮೀಕ್ಷೆ, ನೀರಿನ ಜಾಲದ ವಿವರವಾದ ಲೆಕ್ಕಪರಿಶೋಧನೆಗಾಗಿ ಅಭಿಯಾನವನ್ನು ತೀವ್ರಗೊಳಿಸಿದ್ದೇವೆ. ಗ್ರಾಮಪಂಚಾಯತಿಗಳು ಮಾರ್ಗಸೂಚಿಯನ್ವಯ ನೀರಿನ ಕ್ಲೋರಿನೇಷನ್ ಮಾಡುತ್ತಿದ್ದಾರೆ, ಹಾಗೂ ಸಿಬ್ಬಂದಿಗೆ ಇತ್ತೀಚೆಗೆ ತರಬೇತಿ ನೀಡಲಾಗಿದೆ’ ಎಂದೂ ಸಚಿವರು ತೀಳಿಸಿದ್ದಾರೆ.
ಕೊಳವೆ ಬಾವಿಗಳನ್ನು ಮಾಲಿನ್ಯದಿಂದ ರಕ್ಷಿಸುವ ಸಲುವಾಗಿ ಕೊಳವೆಬಾವಿ ಸುತ್ತಲೂ ರಕ್ಷಣಾತ್ಮಕ ಕಾಂಕ್ರೀಟ್ ರಿಂಗ್ ಅಳವಡಿಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ₹ 1.35 ಕೋಟಿ ವೆಚ್ಚವಾಗಲಿದೆ ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.