ಮಂಗಳವಾರ, ಸೆಪ್ಟೆಂಬರ್ 28, 2021
21 °C

ಸೇಡಂ: 10 ಸಾವಿರ ಲಸಿಕೆ ನೀಡುವ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೇಡಂ: ಕಲ್ಯಾಣ ಕರ್ನಾಟಕ ಉತ್ಸವ ದಿನ (ಸೆ.17)ದಂದೇ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯೂ ತಾಲ್ಲೂಕಿನಾದ್ಯಂತ 10 ಸಾವಿರ ಲಸಿಕೆ ನೀಡುವ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಂಡಿವೆ.

ತಹಶೀಲ್ದಾರ್ ಬಸವಾರಜ ಬೆಣ್ಣೆಶಿರೂರ್ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಖಾಸಗಿ ವೈದ್ಯರ ಜೊತೆಗೆ ಸಭೆ ನಡೆದಿದ್ದು, ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ನೀಡಲಾಗಿದೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ವಿಶೇಷ ಸಭೆ ನಡೆಸಲಾಗಿದ್ದು, ಬಿಆರ್‌ಸಿ, ಸಿಆರ್‌ಪಿ ಸೇರಿದಂತೆ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿ ಶ್ರಮಿಸುವಂತೆ ಹೇಳಿದ್ದಾರೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಯಾವ ಪಾಲಕರು ಲಸಿಕೆ ಪಡೆದಿಲ್ಲವೋ ಅಂತವರನ್ನು ಗುರುತಿಸಿ ಅವರಿಗೆ ಲಸಿಕೆ ಪಡೆಯುವಂತೆ ಮನವೊಲಿಸುವಂತೆ ಸಭೆಯಲ್ಲಿ ಸೂಚಿಸಲಾಗಿದೆ.

ತಾಲ್ಲೂಕಿನಾದ್ಯಂತ ಒಟ್ಟು 100ಕ್ಕೂ ಅಧಿಕ ಲಸಿಕಾ ಕೇಂದ್ರಗಳನ್ನು ತೆರೆಯಲು ತಾಲ್ಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ನಿರ್ಧರಿಸಿದೆ. ಜೊತೆಗೆ 2 ಸಂಚಾರಿ ವಾಹನವನ್ನು ಬಳಕೆ ಮಾಡಿಕೊಳ್ಳುತ್ತಿದೆ.

ಪ್ರತಿ ಲಸಿಕಾ ಕೇಂದ್ರದಲ್ಲಿ, ಆರೋಗ್ಯ ಇಲಾಖೆಯ ಒಬ್ಬರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕೆಲಸ ನಿರ್ವಹಿಸಲಿದ್ದಾರೆ. ತಾಲ್ಲೂಕು ಮಟ್ಟದ ಅಧಿಕಾರಿಗಳಲ್ಲಿ 9 ಜನಕ್ಕೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಪ್ರತಿತಕ್ಷಣಕ್ಕೆ ಲಸಿಕಾ ಅಭಿಯಾನದ ಕುರಿತು ಮುತುವರ್ಜಿ ವಹಿಸಲಿದ್ದಾರೆ ಎಂದು ತಹಶಿಲ್ದಾರ್ ಬಸವರಾಜ ಬೆಣ್ಣೆಶಿರೂರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಲ್ಲೂಕಿನಾದ್ಯಂತ ಈಗಾಗಲೇ 1,65,000 ಸಾವಿರ ಜನರ ಪೈಕಿ ಈಗಾಗಲೇ ಸುಮಾರು 1,16,000 ಸಾವಿರಕ್ಕೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ.

*ಕ.ಕ ಉತ್ಸವ ದಿನದಂದು ತಾಲ್ಲೂಕಿನಾದ್ಯಂತ ಲಸಿಕಾ ಅಭಿಯಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎಲ್ಲರ ಸಹಯೋಗದಲ್ಲಿ ಲಸಿಕಾ ಅಭಿಯಾನ ಯಶಸ್ವಿಯಾಗಲಿದೆ.
- ಡಾ.ಸುರೇಶ ಮೇಕಿನ್, ತಾಲೂಕು ಆರೋಗ್ಯಾಧಿಕಾರಿ

*ಪ್ರತಿಬಾರಿ ನಮಗೆ 5 ಸಾವಿರ ಗುರಿ ನೀಡದಾಗ ನಾವು 6 ಸಾವಿರ ಗಡಿ ದಾಟಿದ್ದೇವೆ. 10 ಸಾವಿರ ಗುರಿ ನೀಡುವ ನಿಯೋಜಿತ ಯೋಜನೆ ಹಾಕಿಕೊಳ್ಳಲಾಗಿದ್ದು, ಗುರಿ ದಾಟಲಿದೆ.
- ಬಸವರಾಜ ಬೆಣ್ಣೆಶಿರೂರ್, ತಹಶೀಲ್ದಾರ್ ಸೇಡಂ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು