ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಕಾಲೇಜು: 109 ಪ್ರಾಚಾರ್ಯ ಹುದ್ದೆ ಖಾಲಿ!

ವರ್ಷಗಳಿಂದ ನೆರವೇರದ ಬಡ್ತಿ ಪ್ರಕ್ರಿಯೆ, ಹಿರಿಯ ಉಪನ್ಯಾಸಕರಿಗೆ ಕಾರ್ಯ ಒತ್ತಡ, ಕಾಲೇಜು ಆಡಳಿತದ ಮೇಲೆ ಕೊಡಲಿ ಪೆಟ್ಟು
Last Updated 5 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಬಹುತೇಕ ಸರ್ಕಾರಿ ಪದವಿಪೂರ್ವ ಕಾಲೇಜುಗಳು ಕಾಯಂ ಪ್ರಾಚಾರ್ಯರ ಕೊರತೆ ಎದುರಿಸುತ್ತಿದ್ದು, ಇದರಿಂದ ಕಾಲೇಜಿನ ಸುಗಮ ಆಡಳಿತಕ್ಕೆ ಅಡ್ಡಿಯಾಗಿದೆ. ಸರ್ಕಾರದಿಂದ ಮಂಜೂರಾದ 217 ಹುದ್ದೆಗಳ ಪೈಕಿ 109 ಖಾಲಿ ಇವೆ.

ಪ್ರಾಚಾರ್ಯರ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಉಳಿದಿದ್ದು, ನೇಮಕಾತಿ ಮತ್ತು ಬಡ್ತಿ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗಿದೆ. ಕಾಯಂ ಪ್ರಾಚಾರ್ಯರ ಹುದ್ದೆಗಳು ಭರ್ತಿ ಸಗದ ಕಾರಣ ಆಯಾ ಕಾಲೇಜಿನ ಹಿರಿಯ ಉಪನ್ಯಾಸಕರ ಮೇಲೆ ಕಾರ್ಯಭಾರ ಹೆಚ್ಚುತ್ತಿದೆ. ನಿತ್ಯ ಪಾಠ ಮಾಡುವುದರ ಜೊತೆಗೆ ಅವರು ಪ್ರಭಾರ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಬೇಕಿದೆ.ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಪಾಠ ಮಾಡಲಾಗದೇ ಮತ್ತು ಪ್ರಾಚಾರ್ಯರ ಪ್ರಭಾರ ಹುದ್ದೆಗೆ ನ್ಯಾಯ ಒದಗಿಸಲೂ ಆಗದೇ ಉಪನ್ಯಾಸಕರು ಸವಾಲು ಎದುರಿಸುವಂತಾಗಿದೆ.

‘ಹುದ್ದೆಗಳು ಭರ್ತಿಯಾಗದ ಕಾರಣ ಹಿರಿಯ ಉಪನ್ಯಾಸಕರಿಗೆ ಕಾರ್ಯ ಒತ್ತಡ ಹೆಚ್ಚುತ್ತದೆ ಅಲ್ಲದೇ ಕಾಲೇಜಿನಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತದೆ. ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಹಿನ್ನಡೆ ಆಗುವುದರ ಜೊತೆಗೆ ಉಪನ್ಯಾಸಕರ ಕೊರತೆ ಕಾಡುತ್ತದೆ. ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಲ್ಲ ಎಂಬ ನೆಪವೊಡ್ಡಿ ಕಾಲೇಜು ಮುಚ್ಚಲಾಗುತ್ತದೆ ಇಲ್ಲವೇ ಬೇರೆಡೆ ಸ್ಥಳಾಂತರ ಮಾಡಲಾಗುತ್ತದೆ’ ಎಂದು ಕಲ್ಯಾಣ ಕರ್ನಾಟಕ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ. ಚಂದ್ರಶೇಖರ ದೊಡ್ಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ನೆರವೇರದ ಬಡ್ತಿ ಪ್ರಕ್ರಿಯೆ: ಪ್ರಾಚಾರ್ಯರ ಹುದ್ದೆಗಳು ಭರ್ತಿಯಾಗದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಾಲೇಜು ಉಪನ್ಯಾಸಕರ ಬಡ್ತಿ ಪ್ರಕ್ರಿಯೆಯೂ ನೆರವೇರುತ್ತಿಲ್ಲ. 20ಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಬಹುತೇಕ ಉಪನ್ಯಾಸಕರಿಗೆ ಬಡ್ತಿ ಸಿಕ್ಕಿಲ್ಲ. ಸರ್ಕಾರದಿಂದ ಇತರೆ ಸೌಲಭ್ಯ ದೊರೆತಿಲ್ಲ.

‘ಪಿಯು ಕಾಲೇಜು ಉಪನ್ಯಾಸಕರು ಬಡ್ತಿಯ ರೂಪದಲ್ಲಿ ಕಾಲೇಜಿನ ಪ್ರಾಚಾರ್ಯರಾಗಲು ಮಾತ್ರ ಅವಕಾಶವಿದೆ. ಅದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಹುದ್ದೆ ಮತ್ತು ಸೌಲಭ್ಯಗಳು ಸಿಗುವುದಿಲ್ಲ. ಬಡ್ತಿ ಇಲ್ಲದೆಯೇ ಉಪನ್ಯಾಸಕರು ನಿವೃತ್ತರಾದ ಉದಾಹರಣೆಗಳು ಸಾಕಷ್ಟು ಇವೆ’ ಎಂದು ಸಂಘದ ಅಧ್ಯಕ್ಷ ಡಾ. ಎಸ್.ಶಿವರಾಜ ತಿಳಿಸಿದರು.

‘1993–94ನೇ ಸಾಲಿನಲ್ಲಿ ನೇಮಕಗೊಂಡ ಬಹುತೇಕ ಉಪನ್ಯಾಸಕರಿಗೆ ಇನ್ನೂ ಬಡ್ತಿ ಆಗಿಲ್ಲ. ಅದರಲ್ಲಿ ಕೆಲವರು ಪ್ರಭಾರ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ 12 ಮಂದಿ ಪ್ರಾಚಾರ್ಯರು ನಿವೃತ್ತರಾಗಲಿದ್ದು, ಹುದ್ದೆ ಸಮಸ್ಯೆ ಇನ್ನಷ್ಟು ಜಟಿಲವಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT