ಗುರುವಾರ , ಮೇ 26, 2022
26 °C

ಮಹಾರಾಷ್ಟ್ರ, ಆಂಧ್ರದಿಂದ ಹೆಚ್ಚು ಆವಕ: ರಾಜ್ಯದಲ್ಲಿ ಈರುಳ್ಳಿ ಬೆಲೆ ದಿಢೀರ್ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ರಾಜ್ಯಗಳಿಂದ ಅಪಾರ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವ ಕಾರಣ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಈರುಳ್ಳಿ ದರ ಭಾರಿ ಕುಸಿತ ಕಂಡಿದೆ.

ಮಾರ್ಚ್‌ ಆರಂಭದಲ್ಲಿ ಈರುಳ್ಳಿ ಪ್ರತಿ ಕ್ವಿಂಟಲ್‌ ದರ ₹3 ಸಾವಿರ ಇತ್ತು. ಒಂದೇ ವಾರದಲ್ಲಿ ಅರ್ಧದಷ್ಟು ದರ  ಕುಸಿದಿದೆ. ಈರುಳ್ಳಿ ಆವಕ ಎಂದಿನಂತೆಯೇ ಇದೆ.

ಬೀದರ್‌ನಲ್ಲಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1,500 ರಿಂದ ₹1,600 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ ₹20 ದರದಲ್ಲಿ ಮಾರಾಟವಾಗುತ್ತಿದೆ. ಎರಡು ವಾರದ ಹಿಂದೆ ಕೆ.ಜಿಗೆ ₹50 ಇದ್ದ ಬೆಲೆ ಶುಕ್ರವಾರ ₹ 20ಕ್ಕೆ ಕುಸಿದಿದೆ.

ಯಾದಗಿರಿ ಜಿಲ್ಲೆಯಲ್ಲಿ ಈರುಳ್ಳಿ ಬೆಲೆಯು ಅರ್ಧಕ್ಕೆ ಕುಸಿದಿದೆ. ಫೆಬ್ರುವರಿ ಅಂತ್ಯಕ್ಕೆ ಈರುಳ್ಳಿ ದರ ಕ್ವಿಂಟಲ್‌ಗೆ ₹ 5 ಸಾವಿರ ಇತ್ತು. ಶುಕ್ರವಾರ ₹1,600ಕ್ಕೆ ಕುಸಿದಿದೆ.

‘ಮಹಾರಾಷ್ಟ್ರದ ನಾಸಿಕ್ ಹಾಗೂ ಜಾಲನಾ ಜಿಲ್ಲೆಗಳಿಂದ ಈರುಳ್ಳಿ ಬೀದರ್‌ ಜಿಲ್ಲೆಗೆ ಆವಕವಾಗುತ್ತದೆ. ಈ ಬಾರಿ ಸ್ಥಳೀಯವಾಗಿಯೂ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಉತ್ಪಾದನೆ ಹೆಚ್ಚಾಗಿರುವ ಕಾರಣ ಬೆಲೆ ಕುಸಿದಿದೆ’ ಎಂದು ಈರುಳ್ಳಿ ವ್ಯಾಪಾರಿ ಮಕ್ಬೂಲ್ ತಿಳಿಸಿದ್ದಾರೆ.

‘ನಾಸಿಕ್‌, ಪುಣೆಯ ಈರುಳ್ಳಿ ಹೆಚ್ಚು ಬಾಳಿಕೆ ಬರುತ್ತದೆ. ಆಂಧ್ರಪ್ರದೇಶ ಈರುಳ್ಳಿ ಒಂದು ತಿಂಗಳಾದರೂ ಕೆಡುವುದಿಲ್ಲ. ಪ್ರತಿ ಕ್ವಿಂಟಲ್‌ಗೆ ದರ ₹2,500 ಇದೆ. ಕಡಿಮೆ ದರದಲ್ಲಿ ಒಳ್ಳೆಯ ಈರುಳ್ಳಿ ಸಿಗುವುದರಿಂದ ಸ್ಥಳೀಯ ಈರುಳ್ಳಿ ಯಾರೂ ಕೇಳುವುದಿಲ್ಲ’ ಎಂದು ಎಪಿಎಂಸಿ ಕಮಿಷನ್‌ ಏಜೆಂಟ್‌ ಶ್ರೀನಿವಾಸ್‌ ತಿಳಿಸಿದರು.

ಬೆಳೆಗಾರರಲ್ಲಿ ಆತಂಕ: ಕಟಾವಿಗೆ ಹಿಂದೇಟು
ಚಿತ್ರದುರ್ಗ:
ಈರುಳ್ಳಿ ದರ ಏಕಾಏಕಿ ಕುಸಿದಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಇದರಿಂದ ಈರುಳ್ಳಿ ಕಟಾವು ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿಯ ಕಟಾವು ನಡೆಯುತ್ತಿದೆ. ಅರ್ಧದಷ್ಟು ಈರುಳ್ಳಿ ಈಗಾಗಲೇ ಮಾರುಕಟ್ಟೆ ತಲುಪಿದೆ.

ಅತಿವೃಷ್ಟಿ ಕಾಣಿಸಿಕೊಂಡಿದ್ದರಿಂದ ಮುಂಗಾರು ಹಂಗಾಮಿನ ಈರುಳ್ಳಿ ರೈತರ ಕೈಸೇರಲಿಲ್ಲ. ಬೆಲೆ ಗಗನಕ್ಕೆ ಏರಿದ್ದನ್ನು ಕಂಡ ರೈತರು ಹಿಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಈರುಳ್ಳಿ ಬಿತ್ತನೆ ಮಾಡಿದ್ದರು. ಜಿಲ್ಲೆಯ 15,223 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಕಟಾವು ಮಾಡದ ರೈತರು ನಷ್ಟ ಅನುಭವಿಸುವ ಸಾಧ್ಯತೆ ಇದೆ.

‘ಈರುಳ್ಳಿ ಬೀಜ, ಗೊಬ್ಬರದ ಬೆಲೆ ಏರಿಕೆಯಾಗಿದೆ. ಇಂಧನ ದರದಲ್ಲಿ ಆಗಿರುವ ಬದಲಾವಣೆ ಸಾಗಣೆ ವೆಚ್ಚವನ್ನು ಹೆಚ್ಚಿಸಿದೆ. ಈರುಳ್ಳಿಗೆ ಕನಿಷ್ಠ ಸಾವಿರ ದರ ಸಿಕ್ಕರೆ ಮಾತ್ರ ರೈತರಿಗೆ ಅನುಕೂಲ’ ಎನ್ನುತ್ತಾರೆ ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಬೆಳೆಗಾರ ಮಲ್ಲಿಕಾರ್ಜುನ್‌.

ಡಿಸೆಂಬರ್‌, ಜನವರಿ ಹಾಗೂ ಫೆಬ್ರುವರಿ ತಿಂಗಳಲ್ಲಿ ಅಕಾಲಿಕ ಮಳೆ ಸುರಿದಿದೆ. ಇದು ಈರುಳ್ಳಿ ಬೆಳೆಯ ಇಳುವರಿ ಮೇಲೆ ನೇರ ಪರಿಣಾಮ ಬೀರಿದೆ. ರೋಗಬಾಧೆ ಕಾಣಿಸಿಕೊಂಡು ಸರಾಸರಿಗಿಂತ ಕಡಿಮೆ ಇಳುವರಿ ಬಂದಿದೆ. ಇದರೊಂದಿಗೆ ದರವೂ ಕುಸಿದಿದ್ದರಿಂದ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

60 ಕೆ.ಜಿ. ಪ್ಯಾಕೆಟ್‌ಗೆ ₹ 1,500ದಿಂದ ₹ 2,200 ದರ ಹೊಂದಿದ್ದ ಈರುಳ್ಳಿ, ಎರಡು ವಾರದಿಂದ ಇಳಿಕೆ ಆಗಿದೆ. ಪ್ಯಾಕೆಟ್‌ ಬೆಲೆ ₹ 600ರಂತೆ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ 1 ಕೆ.ಜಿ. ಈರುಳ್ಳಿ ಬೆಲೆ ₹ 13ರಿಂದ ₹ 15ಕ್ಕೆ ನಿಗದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು