ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ಬರೆದ 12 ಸಾವಿರ ವಿದ್ಯಾರ್ಥಿಗಳು

ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ: ಬಳಕೆಯಾಗದ ಮೀಸಲು ಕೋಣೆಗಳು, ಸುರಕ್ಷತೆಗೆ ಒತ್ತು
Last Updated 19 ಜೂನ್ 2020, 7:11 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ 33 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆ ನಡೆಯಿತು.

ಜಿಲ್ಲೆಯ ಪ್ರತಿ ಪರೀಕ್ಷಾ ಕೇಂದ್ರಗಳಲ್ಲೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ವಿದ್ಯಾರ್ಥಿಗಳನ್ನು ಒಳಗೆ ಬಿಡಲಾಯಿತು. ಯಾವುದೇ ವಿದ್ಯಾರ್ಥಿಯಲ್ಲಿ ಜ್ವರ, ಕೆಮ್ಮು ಸೇರಿದಂತೆ ಕೋವಿಡ್– 19 ಸೋಂಕಿನ ಲಕ್ಷಣಗಳು ಕಂಡು ಬರಲಿಲ್ಲ ಎಂದು ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಮೇಶ ಬೇಜಗಂ ತಿಳಿಸಿದರು.

ಪ್ರತಿ ಕೇಂದ್ರಗಳಲ್ಲೂ ಸೋಂಕಿನ ಲಕ್ಷಣ ಕಂಡು ಬಂದವರಿಗೆ ಒಂದು ಹಾಗೂ ಕಂಟೇನ್ಮೆಂಟ್ ಪ್ರದೇಶದಿಂದ ಬಂದವರಿಗೆ ಒಂದು ಸೇರಿ ಎರಡು ಕೋಣೆಗಳನ್ನು ಮೀಸಲು ಇಡಲಾಗಿತ್ತು. ಆದರೆ, ಯಾರೊಬ್ಬರೂ ಕಂಟೇನ್ಮೆಂಟ್ ಪ್ರದೇಶದಿಂದ ಬಂದಿರಲಿಲ್ಲ. ಶಂಕಿತರೂ ಇರಲಿಲ್ಲ ಎಂದು ಹೇಳಿದರು.

ಬೆಳಿಗ್ಗೆ 8.30 ರಿಂದ 9 ಗಂಟೆಗೆ ಒಳಗೆ ವಿದ್ಯಾರ್ಥಿಗಳು ಆಯಾ ಪರೀಕ್ಷಾ ಕೇಂದ್ರಗಳಿಗೆ ಬಂದರು. ಮಾಸ್ಕ್ ಧರಿಸಿಕೊಂಡು ಬಂದ ವಿದ್ಯಾರ್ಥಿಗಳ ಉಷ್ಣಾಂಶ ತಪಾಸಣೆ ನಡೆಸಿ ಕೈಗೆ ಸ್ಯಾನಿಟೈಸರ್ ಹಾಕಿ ಒಳಗೆ ಬಿಡಲಾಯಿತು. ಮಾಸ್ಕ್ ಧರಿಸದೆ ಬಂದವರಿಗೆ ಮಾಸ್ಕ್ ಕೊಡಲಾಯಿತು. ಕೆಲ ಸ್ವಯಂ ಸೇವಾ ಸಂಸ್ಥೆಗಳೂ ಪರೀಕ್ಷಾ ಕೇಂದ್ರಗಳ ಹೊರಗಡೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿದವು ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸೇಷನ್ ಮಾಡಲಾಗಿತ್ತು. ಎಂಟು ಮಾರ್ಗಾಧಿಕಾರಿಗಳನ್ನು ನೇಮಕ ಮಾಡಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು, ಪಾಲಕರ ಗೊಂದಲಗಳನ್ನು ನಿವಾರಿಸಲು ಸಹಾಯವಾಣಿ ಕೂಡ ಶುರು ಮಾಡಲಾಗಿತ್ತು. 80 ಮಂದಿ ಸಹಾಯವಾಣಿಗೆ ಕರೆ ಮಾಡಿ ತಮ್ಮ ಸಂಶಯ, ಗೊಂದಲಗಳನ್ನು ನಿವಾರಿಸಿಕೊಂಡರು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು ಎಂದು ತಿಳಿಸಿದರು.

ಇಂಗ್ಲಿಷ್ ವಿಷಯದ ಪರೀಕ್ಷೆಗೆ ಒಟ್ಟು 13,065 ವಿದ್ಯಾರ್ಥಿಗಳು ಹಾಜರಾಗಬೇಕಿತ್ತು. ಈ ಪೈಕಿ 12,166 ವಿದ್ಯಾರ್ಥಿಗಳು ಹಾಜರಾದರೆ, 899 ಮಂದಿ ಗೈರಾದರು. ಯಾವುದೇ ವಿದ್ಯಾರ್ಥಿ ಡಿಬಾರ್ ಆಗಿಲ್ಲ ಎಂದು ಹೇಳಿದರು.

ಪಾಲನೆಯಾಗದ ಸುರಕ್ಷಿತ ಅಂತರ: ಕೊರೊನಾ ಸೋಂಕಿನ ಕಾರಣ ಸರ್ಕಾರ ಪರೀಕ್ಷೆಗೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡಿತ್ತು. ಆದರೆ, ಅನೇಕ ಪರೀಕ್ಷಾ ಕೇಂದ್ರಗಳ ಬಳಿ ಸುರಕ್ಷಿತ ಅಂತರ ಕಾಪಾಡುವುದು ಕಂಡು ಬರಲಿಲ್ಲ ಎಂದು ಅನೇಕ ಪಾಲಕರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT