ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ ಪಟ್ಟಣದಲ್ಲಿ ಇಂದು ನಿಷೇಧಾಜ್ಞೆ

ರಾಘವ ಚೈತನ್ಯಲಿಂಗ ಪೂಜೆಗೆ 15 ಜನರಿಗೆ ಅನುಮತಿ
Last Updated 18 ಫೆಬ್ರುವರಿ 2023, 6:30 IST
ಅಕ್ಷರ ಗಾತ್ರ

ಆಳಂದ (ಕಲಬುರಗಿ ಜಿಲ್ಲೆ): ಪಟ್ಟಣದ ಲಾಡ್ಲೆ ಮಶಾಕ್‌ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯಲಿಂಗಕ್ಕೆ ಮಹಾಶಿವರಾತ್ರಿ ನಿಮಿತ್ತ ಇದೇ 18ರಂದು ಕೈಗೊಳ್ಳುವ ವಿಶೇಷ ಪೂಜೆಗೆ ಹಿಂದೂ ಮತ್ತು ಮುಸ್ಲಿಂ ಸಮುದಾಯದವರಿಗೆ ಬೇರೆ ಸಮಯದಲ್ಲಿ ಅವಕಾಶ ನೀಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಶುಕ್ರವಾರ ಮಧ್ಯರಾತ್ರಿ 12ರಿಂದ ಶನಿವಾರ ರಾತ್ರಿ 12ರವರೆಗೆ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ, ಕಡಗಂಚಿಯ ವೀರಭದ್ರ ಸ್ವಾಮೀಜಿ, ಗೊಬ್ಬರವಾಡಿ ಬಳಿರಾಜ ಮಹಾರಾಜ, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ ಜಾಧವ, ಶಾಸಕರಾದ ಸುಭಾಷ ಗುತ್ತೇದಾರ, ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ಕ್ರೆಡೆಲ್‌ ಅಧ್ಯಕ್ಷ ಚಂದು ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ, ಮುಖಂಡ ಮಹೇಶ ಗೌಳಿ, ಶಿವಪುತ್ರ ನಡಗೇರಿ, ನಾಗನಾಥ ಏಟೆ, ಮಹೇಶ ಗೊಬ್ಬೂರು ಅವರ ಪೂಜೆ ಸಲ್ಲಿಸಲಿದ್ದಾರೆ ಎಂದು ಶ್ರೀರಾಮ ಸೇನೆಯು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಇವರ ಪ್ರವೇಶಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.

ದರ್ಗಾ ಆವರಣದಲ್ಲಿ ದರ್ಗಾ ಸಮಿತಿಯಿಂದ ಲಾಡ್ಲೆ ಮಶಾಕ್‌ ಅವರ ಧಾರ್ಮಿಕ ಪೂಜಾ ಆಚರಣೆಗಳು ನಡೆಯಲಿವೆ. ಬೆಳಿಗ್ಗೆ 8ರಿಂದ 12ರವರಗೆ ಮುಸ್ಲಿಂ ಸಮುದಾಯದ ಪ್ರಮುಖರಿಗೆ ಪೂಜಾ ಕೈಂಕರ್ಯ ಕೈಗೊಳ್ಳಲು ಅವಕಾಶ ಕಲ್ಪಿಸಿದೆ.

ನಂತರ ಮಧ್ಯಾಹ್ನ 2ರಿಂದ 6ರವರೆಗೆ ಶ್ರೀರಾಮ ಸೇನೆ ನೇತೃತ್ವದ ಹಿಂದೂ ಸಂಘಟನೆಗಳ ಪ್ರಮುಖರಿಗೆ ಶಿವಲಿಂಗ ಪೂಜೆ ಕೈಗೊಳ್ಳಲು ಅವಕಾಶ ನೀಡಿದ್ದು, ಅದಕ್ಕೆ ಪೊಲೀಸರು ಅಗತ್ಯ ವ್ಯವಸ್ಥೆ , ಬಂದೋಬಸ್ತ್‌ ಕಲ್ಪಿಸಲು ಮುಂದಾಗಿದ್ದಾರೆ.

ಈಗಾಗಲೇ ಎಡಿಜಿಪಿ ಅಲೋಕ್‌ಕುಮಾರ, ಎಸ್‌.ಪಿ.ಇಶಾ ಪಂತ್‌ ನೇತೃತ್ವದಲ್ಲಿ ಪಟ್ಟಣದಲ್ಲಿ ಎರಡು ಬಾರಿ ಪಥ ಸಂಚಲನ, ಶಾಂತಿ ಸಭೆ, ಮಾತುಕತೆ ನಡೆದಿವೆ. ಶನಿವಾರ ಎಸ್ಪಿ, 9 ಡಿವೈಎಸ್‌ಪಿ, 26 ಜನ ಸಿಪಿಐ, 73 ಜನ ಪಿಎಸ್‌ಐ, 97 ಜನ ಎಎಸ್‌ಐ ಸೇರಿದಂತೆ 11 ಕೆಎಸ್‌ಆರ್‌ಪಿ ತುಕಡಿ, 5 ಡಿಆರ್‌ ಹಾಗೂ ಗೃಹರಕ್ಷಕ ಸಿಬ್ಬಂದಿ ಸೇರಿದಂತೆ 1400 ಪೊಲೀಸ್ ಸಿಬ್ಬಂದಿಯನ್ನು ಕಾನೂನು ಸುವ್ಯವಸ್ಥೆ ಕಾಪಾಡಲು ಬಂದೋಬಸ್ತ್‌ ಮಾಡಲಾಗಿದೆ.

ಪಟ್ಟಣದ ಹೊರವಲಯದ ಹೊಸ ಚೆಕ್‌ಪೋಸ್ಟ್‌, ಹಳೆ ಚೆಕ್‌ಪೋಸ್ಟ್‌, ದರ್ಗಾ ಚೌಕ್‌, ಸಿದ್ದಾರ್ಥ ಚೌಕ್‌, ಬಸ್‌ ನಿಲ್ದಾಣ, ಮಟಕಿ ರಸ್ತೆ ಸೇರಿದಂತೆ 11 ಚೆಕ್‌ ಪೋಸ್ಟ್‌ ತೆರೆಯಲಾಗಿದೆ. ಪಟ್ಟಣದ ವಿವಿಧ ವಾರ್ಡ್‌, ಪ್ರಾರ್ಥನಾ ಮಂದಿರ, ಬಸ್‌ ನಿಲ್ದಾಣ, ಶ್ರೀರಾಮ ಮಾರುಕಟ್ಟೆ, ದರ್ಗಾ ಆವರಣದ ಖಾಕಿ ಪಡೆಯ ಸರ್ಪಗಾವಲು ಹೆಚ್ಚಿಸಲಾಗಿದೆ. ಪಟ್ಟಣದಲ್ಲಿ ಬೆಳಿಗ್ಗೆಯಿಂದಲೂ ಪೊಲೀಸ್‌ ವಾಹನಗಳ ಓಡಾಟ, ಸೈರನ್‌ ಸದ್ದು ಅಧಿಕವಾಗಿದೆ.

ಶುಕ್ರವಾರ ಸಂಜೆಯ ವೇಳೆಗೆ ಪಟ್ಟಣದ ಮುಖ್ಯರಸ್ತೆಗಳ ಮೇಲಿನ ಅಂಗಡಿ, ಮುಂಗಟ್ಟುಗಳಿಗೆ ಬೇಗ ಬೀಗ ಹಾಕಿ ಮನೆಗೆ ತೆರಳಿದ ದೃಶ್ಯ ಕಂಡು ಬಂತು.

ಅಲ್ಲದೇ ಪಟ್ಟಣದ ಕೆಲವು ವಾರ್ಡ್‌ನಲ್ಲಿನ ಜನರು ಸಹ ಪಟ್ಟಣ ತೊರೆದು ಬೇರೆ ಕಡೆ ಹೋಗಿದ್ದಾರೆ. ಮಹಾಶಿವರಾತ್ರಿ ನಿಮಿತ್ತ ಪಟ್ಟಣದಲ್ಲಿ ಪೊಲೀಸ್‌ ಪಡೆಯ ಬಿಗಿ ಬಂದೋಬಸ್ತ್‌ ಜೋರಾಗಿದ್ದು, ಮುಖ್ಯರಸ್ತೆಗಳ ಮೇಲೆ ಸಂಚರಿಸುವ ವಾಹನಗಳು, ಬೈಕ್‌ಗಳ ತಪಾಸಣೆಯನ್ನು ಸಾಯಂಕಾಲದಿಂದ ಹೆಚ್ಚಿಸಲಾಗಿದೆ.

ಪಟ್ಟಣದ ವಿವಾದಿತ ಶಿವಲಿಂಗದ ಪೂಜೆ ಹೊರತುಪಡಿಸಿ ಹಸ್ತಾ ಮಲೀಕ್‌, ಮಲ್ಲಿಕಾರ್ಜುನ, ಮಹಾದೇವ ದೇವಸ್ಥಾನ ಮತ್ತಿತರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತದ ಸಿದ್ಧತೆ ಎಂದಿನಂತೆ ಮುಂದುವರೆದಿದೆ.

‘ಇತ್ಯರ್ಥವಾಗದ ಅರ್ಜಿ’

ಮಹಾಶಿವರಾತ್ರಿ ಅಂಗವಾಗಿ ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಸಲ್ಲಿಸಲು ಜಿಲ್ಲಾಧಿಕಾರಿ ಅವರಿಗೆ ಕಲಬುರಗಿ–ಬೀದರ್–ಯಾದಗಿರಿ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ ನೇತೃತ್ವದ 15 ಜನರಿಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದೆವು. ಆದರೆ, ನಮ್ಮ ಅರ್ಜಿಯ ಬಗ್ಗೆ ಜಿಲ್ಲಾಧಿಕಾರಿ ಅವರು ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಗಣೇಶ ಪಾಟೀಲ ತಿಳಿಸಿದ್ದಾರೆ.

ಶಂಕರರಾವ್ ದೇಶಮುಖ, ಮಲ್ಲಪ್ಪ ಹತ್ತರಕಿ, ಚಂದ್ರಕಾಂತ ಹತ್ತರಕಿ, ಲಿಂಗರಾಜ ಪಾಟೀಲ, ಶರಣಬಸಪ್ಪ ವಾಗೆ, ಶರಣಬಸಪ್ಪ ಪಾಟೀಲ ಸೇರಿದಂತೆ 15 ಜನರಿಗೆ ಅವಕಾಶ ನೀಡುವಂತೆ ಕೋರಿದ್ದೆವು. ಆದರೆ, ಅವಕಾಶ ಸಿಗುವ ಬಗ್ಗೆ ಏನನ್ನೂ ಹೇಳಿಲ್ಲ ಎಂದಿದ್ದಾರೆ.

ಲಾಡ್ಲೆ ಮಶಾಕ್ ದರ್ಗಾ ಪ್ರದೇಶ ಸೇರಿದಂತೆ ಆಳಂದ ಪಟ್ಟಣದಲ್ಲಿ ಎಸ್ಪಿ ಅವರ ವರದಿ ಆಧರಿಸಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ವಿಧಿಸಿದ್ದೇನೆ. ನಗರದ ಹೊರವಲಯದಲ್ಲಿ ನಿಷೇಧಾಜ್ಞೆ ಅನ್ವಯವಾಗುವುದಿಲ್ಲ.
ಯಶವಂತ ವಿ. ಗುರುಕರ್
-ಜಿಲ್ಲಾಧಿಕಾರಿ

ಸ್ಥಳೀಯ ಶಾಸಕರ ನೇತೃತ್ವದಲ್ಲಿ ಆಳಂದ ಹೊರವಲಯದಲ್ಲಿ ಸಭೆಯೊಂದನ್ನು ಆಯೋಜಿಸಲಾಗಿದ್ದು, ಅವರು ಪೂರ್ವಾನುಮತಿ ಪಡೆದಿದ್ದಾರೆ. ದರ್ಗಾ ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇಶಾ ಪಂತ್
-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT