ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ 14 ದಿನ ನಿಷೇಧಾಜ್ಞೆ

ಬೆಳಿಗ್ಗೆ 6ರಿಂದ 10ರವರೆಗೆ ಖರೀದಿಗೆ ಅವಕಾಶ, ಹೋಟೆಲ್‌ನಿಂದ ಪಾರ್ಸೆಲ್‌ ಮಾತ್ರ
Last Updated 28 ಏಪ್ರಿಲ್ 2021, 3:26 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್ ಎರಡನೇ ಅಲೆ ಹರಡುವ ಸರಪಳಿಯನ್ನು ತುಂಡರಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಿದ ಪ್ರಯುಕ್ತ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಹಾಗೂ ಕಲಬುರ್ಗಿ ಪೊಲೀಸ್ ಕಮಿಷನರ್ ಎನ್. ಸತೀಶಕುಮಾರ್ ಅವರು ಮಂಗಳವಾರ ರಾತ್ರಿ 9ರಿಂದ ಮೇ 12ರ ಬೆಳಗಿನ 6 ಗಂಟೆಯವರೆಗೆ ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ವಿಧಿಸಿದ್ದಾರೆ.

‌ಈ ಅವಧಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ 4ಕ್ಕಿಂತ ಹೆಚ್ಚಿನ ಜನರು ಗುಂಪು ಸೇರುವುದನ್ನು ನಿಷೇಧಿಸಿದೆ. ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಸತೀಶಕುಮಾರ ಎಚ್ಚರಿಕೆ ನೀಡಿದ್ದಾರೆ.

ಈ ಅವಧಿಯಲ್ಲಿ ವಿಮಾನ ಮತ್ತು ರೈಲುಗಳು ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಲಿದ್ದು, ವಿಮಾನ ಮತ್ತು ರೈಲು ಪ್ರಯಾಣದ ಟಿಕೆಟ್‌ಗಳು ಟ್ಯಾಕ್ಸಿ, ಕ್ಯಾಬ್, ಆಟೊ ರಿಕ್ಷಾಗಳು, ವಿಮಾನ ಹಾಗೂ ರೈಲು ನಿಲ್ದಾಣಕ್ಕೆ ಸಂಚರಿಸಲು ಪಾಸ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಟ್ಯಾಕ್ಸಿ (ಆಟೊ ರಿಕ್ಷಾ ಒಳಗೊಂಡಂತೆ) ಕ್ಯಾಬ್ ಸಂಚಾರಕ್ಕೆ ತುರ್ತು ಸೇವೆಗಳಿಗೆ ಸರ್ಕಾರದ ಮಾರ್ಗಸೂಚಿಗಳಿಗೆ ಒಳಪಟ್ಟು ಅನುಮತಿಸಿದೆ. ನಗರದ ಎಲ್ಲಾ ಶಾಲೆ, ಕಾಲೇಜು, ಶಿಕ್ಷಣ–ಸಂಸ್ಥೆಗಳು, ತರಬೇತಿ ಸಂಸ್ಥೆಗಳು ಮುಚ್ಚುವಂತೆ ಆದೇಶಿಸಿದೆ. ಆನ್‌ಲೈನ್ ತರಗತಿಗಳಿಗೆ ಅನುಮತಿ ನೀಡಲಾಗಿದೆ. ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳಿಗೆ ಅನುಮತಿಸಿದೆ ಎಂದಿದ್ದಾರೆ.

ಹೋಟೆಲ್, ರೆಸ್ಟೊರೆಂಟ್, ಆತಿಥ್ಯ ಸೇವೆ ಒದಗಿಸುವ ಸಂಸ್ಥೆಗಳಿಗೆ, ಸರ್ಕಾರಿ ಅಧಿಕಾರಿ, ಪೊಲೀಸ್, ಆರೋಗ್ಯ ಸಹಾಯಕರಿಗೆ ಆಹಾರ ಪೂರೈಸಲು ಅನುಮತಿ ನೀಡಲಾಗಿದೆ. ಹೋಟೆಲ್, ರೆಸ್ಟೊರೆಂಟ್, ತಿನಿಸು ಕೇಂದ್ರಗಳಿಗೆ ಪಾರ್ಸೆಲ್ ಮತ್ತು ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ. ತುರ್ತು ಸೇವೆ ಒದಗಿಸುವ ಎಲ್ಲಾ ಸರಕಾರಿ ಕಚೇರಿಗಳು ಕೆಲಸ ನಿರ್ವಹಿಸಬೇಕು. ಆರೋಗ್ಯ ಮತ್ತು ತುರ್ತು ಸೇವೆ ಒದಗಿಸುವ ಔಷಧ ಅಂಗಡಿಗಳು, ಆರೋಗ್ಯ ಕೇಂದ್ರಗಳು, ಪಶು ವೈದ್ಯಕೀಯ ಆಸ್ಪತ್ರೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಬೇಕು.

ನೌಕರರು, ಟೆಲಿಕಾಂ ಸಂಸ್ಥೆಯ ವಾಹನಗಳು, ಇಂಟರ್ನೆಟ್ ಸೇವೆ ಒದಗಿಸುವ ನೌಕರರು, ತುರ್ತು ಸೇವೆ ಒದಗಿಸುವ ಐ.ಟಿ. ಕಂಪನಿಯ ನೌಕರರು ಸಂಚರಿಸಬಹುದು. ಕೆಲಸ ನಿರ್ವಹಿಸುವ ಸಂಸ್ಥೆಯಿಂದ ನೀಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಎಲ್ಲಾ ಕೈಗಾರಿಕಾ ಕಂಪನಿ, ಸಂಸ್ಥೆ, ತುರ್ತು ಸೇವೆ ಒದಗಿಸುವ ಸಂಸ್ಥೆಗಳಿಗೆ 24 ಗಂಟೆ ಕೆಲಸ ನಿರ್ವಹಿಸಲು ನೌಕರರಿಗೆ ಅನುಮತಿಸಿದೆ.

ಬ್ಯಾಂಕ್, ವಿಮೆ, ಎಟಿಎಂ ಕೆಂದ್ರಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್ಸ್ ಮೀಡಿಯಾ ಕಾರ್ಯನಿರ್ವಹಿಸಬಹುದು. ಎಲ್ಲಾ ರೀತಿಯ ಕಟ್ಟಡ ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆ. ಮದುವೆ ಸಮಾರಂಭಗಳಿಗೆ 50 ಜನರಿಗೆ ಮೀರದಂತೆ ಅನುಮತಿ ನೀಡಲಾಗುವುದು. ಶವ ಸಂಸ್ಕಾರಕ್ಕೆ 5 ಜನರಿಗೆ ಮೀರದಂತೆ ಕೋವಿಡ್ 19 ಮಾರ್ಗಸೂಚಿ ಪಾಲಿಸುವ ಷರತ್ತುಗೊಳಪಟ್ಟು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT