ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚನ್ನಮ್ಮನ ಪ್ರತಿಮೆ ಬಳಿ ರಾಯಣ್ಣನೂ ಕಡ್ಡಾಯವಾಗಿ ಇರಲಿ’

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 221ನೇ ಜನ್ಮೋತ್ಸವ, ಕಣ್ಣ–ಮನ ಸೆಳೆದ ಮೆರವಣಿಗೆ, ಎಲ್ಲೆಡೆ ಹಾರಾಡಿದ ಹಳದಿ ಧ್ವಜಗಳು
Last Updated 18 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕಲಬುರ್ಗಿ: ‘ದೇಶದಲ್ಲಿ ಎಲ್ಲೆಲ್ಲಿ ರಾಣಿ ಚನ್ನಮ್ಮನ ಪ್ರತಿಮೆಗಳು ಇವೆಯೋ ಆ ಎಲ್ಲ ಪ್ರತಿಮೆಗಳ ಬಳಿ ರಾಯಣ್ಣನ ಪ್ರತಿಮೆಯನ್ನೂ ನಿರ್ಮಿಸಬೇಕು. ಆಗ ಮಾತ್ರ ಆ ತಾಯಿ ಆತ್ಮಕ್ಕೆ ಶಾಂತಿ ಸಿಗುತ್ತದೆ, ರಾಯಣ್ಣನ ತ್ಯಾಗಕ್ಕೆ ಅರ್ಥ ಸಿಗುತ್ತದೆ’ ಎಂದು ವಾಗ್ಮಿ ನಿಕೇತ ರಾಜ ಮೌರ್ಯ ಅಭಿಪ್ರಾಯಪಟ್ಟರು.

ಕಲಬುರ್ಗಿಯ ರಾಯಣ್ಣೋತ್ಸವ ಸಮಿತಿ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 221ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡಿದರು.

‘ಶ್ರೀರಾಮನ ಬಂಟ ಆಂಜನೇಯ. ಆ ಕಾರಣಕ್ಕಾಗಿಯೇ ರಾಮನ ಮೂರ್ತಿ ಇರುವ ಎಲ್ಲ ಕಡೆಯೂ ಆಂಜನೇಯನ ಮೂರ್ತಿ ಕೂಡ ಇರುತ್ತದೆ. ಅದೇ ರೀತಿ ಕಿತ್ತೂರು ರಾಣಿಯ ನಂಬಿಗಸ್ತ ಬಂಟ ರಾಯಣ್ಣ. ಹಾಗಾಗಿ, ಈ ಇಬ್ಬರ ಪ್ರತಿಮೆಗಳೂ ಒಂದೇ ಕಡೆ ಇದ್ದರೆ ಚರಿತ್ರೆಯ ಸೌಂದರ್ಯ ಎದ್ದು ಕಾಣಿಸುತ್ತದೆ’ ಎಂದರು.

‘ಕಿತ್ತೂರಿನ ಆ ಹುಲಿ ಪ್ರಾಣ ಬಿಟ್ಟಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ. ಹಾಗಾಗಿ, ಅವನ ಕೀರ್ತಿಯನ್ನು ಒಂದು ಜಾತಿ ಅಥವಾ ರಾಜ್ಯಕ್ಕೆ ಸೀಮಿತಗೊಳಿಸಬಾರದು. ಝಾನ್ಸಿರಾಣಿಯಿಂದ ಹಿಡಿದು ಮಹಾತ್ಮ ಗಾಂಧೀಜಿವರೆಗೆ ಸಾವಿರಾರು ಸ್ವಾತಂತ್ರ್ಯ ಸೋನಾನಿಗಳ ಹೆಸರು ದೇಶದ ಮೂಲೆಮೂಲೆಗೂ ಪರಿಚಿತವಾಗಿದೆ. ಆದರೆ, ರಾಯಣ್ಣನ ಹೆಸರು ಮಾತ್ರ ಪಕ್ಕದ ಆಂಧ್ರ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಯಾರಿಗೂ ಗೊತ್ತಿಲ್ಲ. ಇಂಥ ಕ್ರಾಂತಿವೀರನ ಚರಿತ್ರೆಯನ್ನು ರಾಜ್ಯ, ಭಾಷೆ, ದೇಶದ ಗಡಿ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಮೌರ್ಯ ಹೇಳಿದರು.

‘ಎತ್ತರದ ಆಕಾರ, ಗಟ್ಟಿಮುಟ್ಟು ದೇಹದೈಸಿರಿ ಹೊಂದಿದ್ದ ಸಂಗೊಳ್ಳಿ ರಾಯಣ್ಣ. ಆತನ ನಿಲುವು– ಚೆಲುವು– ಪರಾಕ್ರಮ ಹಾಗೂ ಸೌಜನ್ಯಗುಣಗಳ ಬಗ್ಗೆ ಲಾವಣಿಕಾರರು ಹಾಡಿಹೊಗಳಿದ್ದಾರೆ. ರಾಯಣ್ಣನ ನಿಜವಾದ ಇತಿಹಾಸ ಅರಿಯಬೇಕೆಂದರೆ ಈ ಲಾವಣಿಗಳನ್ನೇ ಅಧ್ಯಯನ ಮಾಡಬೇಕು’ ಎಂದೂ ಸಲಹೆ ನೀಡಿದರು.

‘ಸ್ವಾತಂತ್ರ್ಯ ಕಿಡಿ ಹೊತ್ತಿಸಿದಾಗ ಪ್ರತಿಯೊಂದು ಊರಿನಲ್ಲೂ ಒಬ್ಬೊಬ್ಬರು ಒಂದೊಂದು ರೀತಿಯ ಕಾಣಿಕೆ ನೀಡುತ್ತಾರೆ. ಬೆಳಗಾವಿ ಜಿಲ್ಲೆಯ ನಂದಗಡದಲ್ಲಿ ಮಹಿಳೆಯೊಬ್ಬಳು ತನ್ನ ಅಂಧ ಮಗನನ್ನೇ ರಾಯಣ್ಣನಿಗೆ ನೀಡುತ್ತಾಳೆ. ಕೊರಳಲ್ಲಿನ ತಾಳಿ ಕೊಟ್ಟು ಆತನ ಹೋರಾಟಕ್ಕೆ ಜಯವಾಗಲಿ ಎಂದು ಹರಸುತ್ತಾಳೆ. ಆ ತಾಯಿಯ ಋಣ ತೀರಿಸಲೆಂದೇ ರಾಯಣ್ಣ ನಂದಗಡದಲ್ಲಿಯೇ ತನ್ನನ್ನು ಗಲ್ಲಿಗೇರಿಸಬೇಕು ಎಂದು ಕೊನೆಯ ಆಸೆ ವ್ಯಕ್ತಪಡಿಸುತ್ತಾನೆ. ಮಹಾಶೂರನಾಗಿದ್ದರೂ ಋಣದಲ್ಲಿ ಅವನು ಎಷ್ಟು ವಿನಮ್ರ ಎಂಬುದಕ್ಕೆ ಇದೇ ಉದಾಹರಣೆ’ ಎಂದೂ ತಿಳಿಸಿದರು.

ಇದಕ್ಕೂ ಮುನ್ನ ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಕಾರ್ಯಕ್ರಮ ಉದ್ಘಾಟಿಸಿದರು. ಕನಕ ಗುರುಪೀಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ಪ್ರಕಾಶ ಜಿ. ಕುರನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಎಸ್‌.ಈಶ್ವರಪ್ಪ ಶುಭ ಸಂದೇಶ ನೀಡಿದರು. ಶಿಲ್ಪಾ ಕುದುರಗೊಂಡ ಭಾಷಣ ಮಾಡಿದರು. ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ತಿಪ್ಪಣ್ಣ ಬಳಬಟ್ಟಿ, ಜಗದೇವಪ್ಪ ಮುಗಟಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ದಿಲೀಪ ಪಾಟೀಲ, ರತ್ನವ್ವ ಆರ್‌. ಕಲ್ಲೂರ, ಮುಖಂಡರಾದ ದೇವಿಂದ್ರಪ್ಪ ಮರತೂರ, ಮಲ್ಲಿಕಾರ್ಜುನ ಪೂಜಾರಿ, ಮಹಾಂತೇಶ ಕೌಲಗಿ, ಶಿವಶರಣ ಕೆ. ಹದಗಲ, ನಿಂಗಣ್ಣ ಪೂಜಾರಿ ಕುಸನೂರ, ಡಾ.ಬಾಬು ಪೂಜಾರಿ, ಡಾ.ಪಿ.ಎಸ್‌.ಕೊಕಟನೂರ, ಸಂತೋಷ ಪೂಜಾರಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ವೇದಿಕೆ ಮೇಲಿದ್ದರು.

ರಾಯಣ್ಣೋತ್ಸವ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಪ್ರತಿಮೆಯ ಮೆರವಣಿಗೆ ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ಯುವಪಡೆ ಡೊಳ್ಳುವಾದನಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿತು. ರಾಯಣ್ಣನ ಭಾವಚಿತ್ರವಿರುವ ಹಳದಿ ಧ್ವಜ, ಹಳದಿ ಪೇಠಾ, ಹಳದಿ ಟೊಪ್ಪಿಗೆ, ಹಳದಿ ಬಣ್ಣದ ಅಂಗಿ ಧರಿಸಿದ ಯುವಕರು ಗಮನ ಸೆಳೆದರು.

ಸ್ವಾತಂತ್ರ್ಯದ ಮೊದಲ ಬಲಿದಾನ ರಾಯಣ್ಣ

‘ಸ್ವಾತಂತ್ರ್ಯಕ್ಕಾಗಿ ನಡೆದ ಮೊದಲ ಬಲಿದಾನ ರಾಯಣ್ಣ. ಅವನಿಲ್ಲದೇ ದೇಶದ ಇತಿಹಾಸ ಪೂರ್ಣವಾಗುವುದಿಲ್ಲ’ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.

‘ಹಾಲುಮತ ಸಮಾಜದವರು ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡುವುದಿಲ್ಲ. ಎಲ್ಲವನ್ನೂ ಜತನ ಮಾಡಿಕೊಳ್ಳುವ ಸ್ವಭಾವದವರು. ಹಾಗಾಗಿ, ಪ್ರಸಕ್ತ ರಾಜ್ಯ ಸರ್ಕಾರದಲ್ಲಿ ಇದೇ ಸಮಾಜದ ಮುಖಂಡರೊಬ್ಬರಿಗೆ ಆರ್ಥಿಕ ಮಂತ್ರಿ ಸ್ಥಾನ ನೀಡುವುದು ಸೂಕ್ತ’ ಎಂದು ಅವರು ಕೆ.ಎಸ್‌.ಈಶ್ವರಪ್ಪ ಅವರ ಹೆಸರು ಹೇಳದೇ ಸೂಚ್ಯವಾಗಿ ತಿಳಿಸಿದರು.

*

‘ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಬದ್ಧ’

‘ನಗರದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ನಾನು ಬದ್ಧ. ಇದಕ್ಕೆ ಬೇಕಾದ ಹಣವನ್ನೂ ನನ್ನ ಅನುದಾನದಲ್ಲೇ ನೀಡುತ್ತೇನೆ. ಮಹಾನಗರ ಪಾಲಿಕೆಯಲ್ಲಿ ನನ್ನದೂ ಅಧಿಕಾರವಿದೆ. ಹಾಗಾಗಿ, ಸಮಾಜದವರು ಗುರುತಿಸಿದ ಸ್ಥಳದಲ್ಲಿ ಪ್ರತಿಮೆ ನಿಲ್ಲಿಸಿಯೇ ಸಿದ್ಧ’ ಎಂದು ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಭರವಸೆ ನೀಡಿದರು.

‘ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹಾಗೂ ಅಂಬಿಗರ ಚೌಡಯ್ಯ ಅವರ ಹೆಸರು ಇಡಬೇಕು. ಹಾಲುಮತ ಸಮಾಜವನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದೂ ಆಗ್ರಹಿಸಿದರು.

***

ಚನ್ನಮ್ಮ ಹಾಗೂ ರಾಯಣ್ಣನ ತಾಯಿ–ಮಗನ ಪ್ರೇಮ ವಿಶ್ವಕ್ಕೆ ಪ್ರೇರಣೆ. ಸ್ವಾಮಿನಿಷ್ಠೆಯಲ್ಲಿ ರಾಯಣ್ಣ ಇತಿಹಾಸವಾಗಿದ್ದಾನೆ. ಹಾಲುಮತ ಸಮಾಜದವರು ಕೂಡ ಇತರ ಎಲ್ಲ ಸಮಾಜಗಳೊಂದಿಗೆ ಸಹಬಾಳ್ವೆ ನಡೆಸಬೇಕು
–ಕೆ.ಎಸ್‌.ಈಶ್ವರಪ್ಪ,ಶಾಸಕ

ಕುರುಬ ಎನ್ನುವುದು ಜಾತಿ ಸೂಚಕ ಪದವಲ್ಲ; ಅದು ಕಾಯಕ ಸೂಚಕ. ಶ್ರಮ, ಸಹಬಾಳ್ವೆ ಹಾಗೂ ಸ್ವಾಮಿನಿಷ್ಠೆಯಲ್ಲಿ ಈ ಸಮಾಜ ಎಷ್ಟು ನಂಬಿಗಸ್ತ ಎಂಬುದಕ್ಕೆ ಇತಿಹಾಸದ ಪುಟಗಳಲ್ಲಿ ದಾಖಲೆಗಳಿವೆ
–ಎಸ್.ಎಸ್‌.ಹುಲ್ಲೂರ,ಡಿವೈಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT