ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳುವಾದ 23 ದ್ವಿಚಕ್ರ ವಾಹನ ವಶಕ್ಕೆ: ಆರು ಜನ ಬಂಧನ

ಬೈಕ್ ಖರೀದಿಸಿದವರನ್ನೂ ಬಂಧಿಸಿದ ಪೊಲೀಸರು
Last Updated 2 ಮಾರ್ಚ್ 2023, 15:37 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆ, ಸೂಪರ್ ಮಾರ್ಕೆಟ್, ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ದೇವಸ್ಥಾನಗಳ ಬಳಿ ನಿಲ್ಲಿಸಿದ್ದ ಬೈಕ್‌ಗಳನ್ನು ಕಳವು ಮಾಡಿದ್ದ ಮೂವರು ಹಾಗೂ ಖರೀದಿಸಿದ್ದ ಮೂವರು ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಲಾಗಿದ್ದು, ಅವರಿಂದ ₹ 21 ಲಕ್ಷ ಮೌಲ್ಯದ 23 ದ್ವಿಚಕ್ರ ವಾಹನ, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಕಲಬುರಗಿ ಪೊಲೀಸ್ ಕಮಿಷನರ್ ಚೇತನ್ ಆರ್. ತಿಳಿಸಿದರು.

ಗುರುವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಹನಗಳ ಕಳ್ಳತನ ಮಾಡಿದ ಆರೋಪದ ಮೇರೆಗೆ ಖಾದ್ರಿ ಚೌಕ್ ಮಲ್ಲಿಕಾರ್ಜುನ ಗುಡಿ ಹತ್ತಿರದ ನಿವಾಸಿ ಶಿವರಾಜ ಬಾಬುರಾವ ಪೂಜಾರಿ (19), ಇಂದಿರಾ ನಗರದ ನಿವಾಸಿ ಮರೆಪ್ಪ ಸುಂಕಪ್ಪ ಕುಂಚಿಕೊರವೇರ (25), ರಾಮನಗರ ನಿವಾಸಿ ಹುಸೇನಿ ಮರೆಪ್ಪಾ ಸಿರಂ (22) ಎಂಬುವವರನ್ನು ಬಂಧಿಸಲಾಗಿದೆ. ಏಳು ವಾಹನಗಳನ್ನು ಖರೀದಿ ಮಾಡಿದ್ದ ಇಂದಿರಾನಗರ ನಿವಾಸಿ ಇಮ್ರಾನ್ ಖಾಜಾ ಪಟೇಲ್ (19), ಕನಕ ನಗರ ನಿವಾಸಿ ಸಿದ್ದಲಿಂಗ ಲಕ್ಷ್ಮಿಕಾಂತ ಸಾವಳಗಿ (28) ಹಾಗೂ ಸುಂದರ ನಗರದಲ್ಲಿ ಚೈನೀಸ್ ಆಹಾರದ ಬಂಡಿ ಇರಿಸಿದ್ದ ಫಿರೋಜ್ ಹಾಜಿಮಿಯಾ ಶೇಖ್ (22) ಎಂಬುವವರನ್ನೂ ಬಂಧಿಸಲಾಗಿದೆ ಎಂದರು.

ಫೆಬ್ರುವರಿ 15ರಂದು ಮೊಬೈಲ್ ಹಾಗೂ ಚಿನ್ನವನ್ನು ದರೋಡೆ ಮಾಡಿದ ಬಗ್ಗೆ ರೇಣುಕಾ ಭಾಗಣ್ಣ ಅವರು ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಮೂವರೂ ಸೇರಿಕೊಂಡು ಬೈಕ್‌, ಸ್ಕೂಟರ್ ಕಳ್ಳತನ ಮಾಡಿರುವುದು ಬಯಲಿಗೆ ಬಂದಿದೆ. ಬಂಧಿತರಿಂದ 14 ಡಿಯೊ ಸ್ಕೂಟರ್, 8 ಹೀರೊ ಹೋಂಡಾ ಸ್ಪ್ಲೆಂಡರ್ ಹಾಗೂ ಒಂದು ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಾಚರಣೆ ಹೇಗೆ?: ಜಿಮ್ಸ್ ಆಸ್ಪತ್ರೆ ಮುಂಭಾಗ, ಸೂಪರ್ ಮಾರ್ಕೆಟ್ ಸೇರಿದಂತೆ ಜನಸಂದಣಿ ಇರುವ ಸ್ಥಳಗಳಲ್ಲಿನ ಬೈಕ್, ಸ್ಕೂಟರ್ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಇದಕ್ಕಾಗಿ ತಮ್ಮದೇ ಆದ ಕಾರ್ಯಾಚರಣೆ ವಿಧಾನವನ್ನು ಅನುಸರಿಸುತ್ತಿದ್ದರು. ಒಬ್ಬ ಬೈಕ್ ಬಳಿ ನಿಲ್ಲುತ್ತಿದ್ದರೆ, ಇನ್ನಿಬ್ಬರು ದೂರದಲ್ಲಿ ನಿಂತು ಕಾಯುತ್ತಿದ್ದರು. ಕ್ಷಣಾರ್ಧದಲ್ಲಿ ಹ್ಯಾಂಡಲ್ ಲಾಕ್ ಮುರಿದು ನಕಲಿ ಕೀ ಬಳಸಿ ಕದ್ದೊಯ್ಯುತ್ತಿದ್ದರು.

‘ಬೈಕ್ ತಮ್ಮ ಬಳಿಯೇ ಇದ್ದರೆ ಪತ್ತೆ ಹಚ್ಚಬಹುದು ಎಂಬ ಹೆದರಿಕೆಯಿಂದ ತಕ್ಷಣವೇ ಅವುಗಳನ್ನು ಬೇರೆಯವರಿಗೆ ಮಾರಾಟ ಅಥವಾ ಅಡಮಾನ ಇಡುತ್ತಿದ್ದರು’ ಎಂದು ಕಮಿಷನರ್ ಚೇತನ್ ಮಾಹಿತಿ ನೀಡಿದರು.

ಬ್ರಹ್ಮಪುರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸಚಿನ್ ಎಸ್. ಚಲವಾದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡವು ಆರೋಪಿಗಳನ್ನು ಪತ್ತೆ ಹಚ್ಚಿದೆ. ಆ ತಂಡಕ್ಕೆ ₹ 10 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.

ಪಿಎಸ್‌ಐಗಳಾದ ರಾಜಪ್ಪ ಮುದ್ದಾ, ಅಶೋಕ ನಿಡೋದೆ, ಎಎಸ್‌ಐ ಮೆಹಬೂಬ್ ಸಾಬ್, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಯಶವಂತರಾವ್, ಶಿವಪ್ರಕಾಶ್, ಅಶೋಕ, ಕಾನ್‌ಸ್ಟೆಬಲ್‌ಗಳಾದ ರಾಮು ಪವಾರ, ಸಂತೋಷಕುಮಾರ್, ಶಿವಶರಣಪ್ಪ, ಬಸವರಾಜ, ನವೀನ್‌ಕುಮಾರ್, ಕಲ್ಯಾಣ್‌ಕುಮಾರ್, ಜ್ಯೋತಿ ಭಾಗವಹಿಸಿದ್ದರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎ. ಚಂದ್ರಪ್ಪ, ಎಸಿಪಿ ಭೂತೇಗೌಡ ವಿ.ಎಸ್. ಇದ್ದರು.

***

ಕಳ್ಳತನ ಮಾಡಿದ ವಸ್ತುಗಳನ್ನು ಖರೀದಿ ಮಾಡುವುದೂ ಅಪರಾಧ. ದಾಖಲೆ ಇಲ್ಲದ ಬೈಕ್, ಸ್ಕೂಟರ್, ಚಿನ್ನ ಖರೀದಿಸಿದರೆ ಸಮಸ್ಯೆ ಅನುಭವಿಸಬೇಕಾಗುತ್ತದೆ
- ಚೇತನ್ ಆರ್, ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT