ಅಪಾಯದಲ್ಲಿ 240 ಕೊಠಡಿಗಳು, ದುರಸ್ತಿಗೆ ಕಾಯುವ 250 ಕೊಠಡಿಗಳು

7
ನಾವದಗಿ ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ, ಮಳೆ ಬಂದರೆ ಕೆರೆಯಾಗುವ ಆವರಣ

ಅಪಾಯದಲ್ಲಿ 240 ಕೊಠಡಿಗಳು, ದುರಸ್ತಿಗೆ ಕಾಯುವ 250 ಕೊಠಡಿಗಳು

Published:
Updated:
Deccan Herald

ಚಿಂಚೋಳಿ: ತಾಲ್ಲೂಕಿನ ನಾವದಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಜೀರ್ಣಾವಸ್ಥೆ ತಲುಪಿದೆ. ಸುಲೇಪೇಟ ಉಮ್ಮರ್ಗಾ ರಾಜ್ಯ ಹೆದ್ದಾರಿ 32ರ ಬದಿಯಲ್ಲಿರುವ ಈ ಶಾಲೆಯಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ನಡೆಯುತ್ತಿವೆ.

ದಿವಂಗತ ವೀರೇಂದ್ರ ಪಾಟೀಲರು ಪ್ರಥಮ ಬಾರಿಗೆ ಮುಖ್ಯಮಂತ್ರಿಯಾದಾಗ ನಿರ್ಮಿಸಿದ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ.  ಇಲ್ಲಿ ಒಟ್ಟು 10 ಕೊಠಡಿಗಳಿವೆ. ಇದರಲ್ಲಿ 4 ಕೊಠಡಿಗಳು ಉರುಳುವ ಭೀತಿಯಲ್ಲಿದ್ದರೆ, 3 ಕೊಠಡಿಗಳು ದುರಸ್ತಿಗಾಗಿ ಕಾಯುತ್ತಿವೆ. ಸುಸ್ಥಿತಿಯಲ್ಲಿ 2 ಕೊಠಡಿ ಮಾತ್ರಯಿವೆ.

ಇದರಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (1ರಿಂದ7ನೇ ತರಗತಿ) ಯನ್ನು ಬೆಳಿಗ್ಗೆ 7.45ರಿಂದ 12.30ರವರೆಗೆ ನಡೆಸಿದರೆ, ಪ್ರೌಢ ಶಾಲೆ ಮಧ್ಯಾಹ್ನ 12.30ರಿಂದ 5.30ರವರೆಗೆ ನಡೆಸಲಾಗುತ್ತಿದೆ. ಇಲ್ಲಿ ಒಟ್ಟು 202 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಮಳೆ ಸುರಿಯುತ್ತಿದ್ದರೆ ಮಕ್ಕಳು ಶಿಕ್ಷಕರು ಸುಸ್ಥಿತಿಯಲ್ಲಿರುವ ಕಟ್ಟಡಕ್ಕೆ ಓಡುವ ಸ್ಥಿತಿಯಿದೆ.

ಇದಕ್ಕೆ ಕಾರಣ ಮಳೆಯಿಂದ ಯಾವುದೇ ಕ್ಷಣದಲ್ಲೂ ಉರುಳುವ ಭೀತಿಯಲ್ಲಿರುವ ಶಿಥಿಲ ಕಟ್ಟಡ, ಇನ್ನೊಂದು ಕಡೆ ಮಳೆ ನೀರು ಹರೀದು ಬಂದು ಶಾಲಾ ಆವರಣದಲ್ಲಿ ಸಂಗ್ರಹವಾಗಿ ಕೆರೆಯಂತಾಗುತ್ತದೆ. ಇದರ ಜತೆಗೆ ಆವರಣದ ನೀರು ಕೊಠಡಿಗಳಿಗೆ ನುಗ್ಗಿ ಕೊಠಡಿಗಳಲ್ಲಿ ಒಂದರಿಂದಎರಡು ಅಡಿವರೆಗೆ ನೀರು ನಿಲ್ಲುತ್ತಿರುತ್ತದೆ. ನೀರಿನ ಜತೆಗೆ ಹರಿದು ಬರುವ ವಿಷ ಜಂತುಗಳಿಂದಾಗಿ ಶಿಕ್ಷಕರು ಹೆದರುತ್ತಲೇ ಶಾಲೆಯ ಬಾಗಿಲು ತೆರೆಯುವ ಸ್ಥಿತಿಯಿದೆ.

ಅಕ್ಷರ ದಾಸೋಹದ ಅಡುಗೆ ತಯಾರಿಗೆ ಪ್ರತ್ಯೇಕ ಅಡುಗೆ ಮನೆ ಹಾಗೂ ದಾಸ್ತಾನು ಕೊಠಡಿಯಿಲ್ಲ. ಹೊಸದಾಗಿ ಕಟ್ಟಡ ಮಂಜೂರಿಗೆ ಮೇಲಧಿಕಾರಿಗಳ ಗಮನಕ್ಕೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ರವಿಕಾಂತ ಕಾರಪೆಂಟರ್‌. ಶಾಲೆ ಆವರಣ ಗೋಡೆಯ ಹೊರಗಡೆಯಿಂದ ಚರಂಡಿ ನಿರ್ಮಿಸಿದರೆ ಗ್ರಾಮಗ ಒಳಗಡೆಯಿಂದ ಬರುವ ನೀರು ಆವರಣ ನುಗ್ಗದಂತೆ ಮಾಡಬೇಕು. ಇದರಿಂದ ಆವರಣ ನೈರ್ಮಲ್ಯ ಕಾಪಾಡಲು ಸಹಕಾರಿಯಾಗುತ್ತದೆ.

ಶಿಥಿಲ ಕಟ್ಟಡ ಬಳಕೆ ನಿಲ್ಲಿಸಲಾಗಿದೆ ಆದರೆ ಶಿಕ್ಷಕರು (ಸ್ಟಾಫ್‌ ರೂಮ್‌)ಕೊಠಡಿಯಾಗಿ ಬಳಕೆ ಮಾಡಲಾಗುತ್ತಿದೆ.
ತಾಲ್ಲೂಕಿನಲ್ಲಿ 40ಕ್ಕೂ ಹೆಚ್ಚು ಶಾಲೆಗಳು ಕೊಠಡಿಗಳ ಕೊರತೆ ಎದುರಿಸುತ್ತಿವೆ. ಇದರಿಂದ ಮಕ್ಕಳು ಒಂದೇ ಕೊಠಡಿಯಲ್ಲಿ 2/3 ತರಗತಿ ನಡೆಸುವುದು ಶಿಕ್ಷಕರಿಗೆ ಅನಿವಾರ್ಯವಾಗಿದೆ. ಒಟ್ಟಾರೆ ತಾಲ್ಲೂಕಿನಲ್ಲಿ 500ಕ್ಕೂ ಹೆಚ್ಚು ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ.

ತಾಲ್ಲೂಕಿನಲ್ಲಿ ದುಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳು, ಮೂಲ ಸೌಕರ್ಯಗಳಾದ ಶೌಚಾಲಯ, ಆವರಣ, ಕುಡಿವ ನೀರು, ವಿದ್ಯುತ್‌, ಆವರಣ ಗೋಡೆ, ಹೆಚ್ಚುವರಿ ಕೋಣೆಯ ಅಗತ್ಯತೆ ಕುರಿತು ಶಾಲಾವಾರು ವರದಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೆ ನೀಡಲಾಗಿದ್ದು, ಈ ಕುರಿತು ಶಾಸಕ ಡಾ. ಉಮೇಶ ಜಾಧವ್‌ ಅವರ ಗಮನಕ್ಕೂ ತರಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಣ್ಣ ಸಿಂಪಿ ಪ್ರಜಾವಾಣಿಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಶಾಲಾವಾರು ಸಮೀಕ್ಷೆ ನಡೆಸಿ ಕಟ್ಟಡದ ಭೌತಿಕ ಸ್ಥಿತಿಕುರಿತು ಪರಿಶೀಲಿಸಲಾಗಿದೆ. ತಾಲ್ಲೂಕಿನ 38 ಶಾಲೆಗಳ 240 ಕೊಠಡಿಗಳು ಅಪಾಯದ ಹಂತದಲ್ಲಿವೆ. ಯಾವುದೇ ಕ್ಷಣದಲ್ಲೂ ಇವು ಉರುಳುವ ಸಾಧ್ಯತೆ ಹೆಚ್ಚಾಗಿದೆ. ಜತೆಗೆ ದುರಸ್ತಿ ಮಾಡಿಸಿದರೆ ಉಪಯೋಗಕ್ಕೆ ಬರುವಂತಹ 250 ಕೊಠಡಿಗಳನ್ನು ಗುರುತಿಸಲಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಚಪ್ಪ ಭದ್ರಶೆಟ್ಟಿ ತಿಳಿಸಿದರು.

ಅಪಾಯದ ಹಂತದಲ್ಲಿರುವ ಕಟ್ಟಡಗಳನ್ನು ಉರುಳಿಸಲು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಅವರಿಂದ ಖುದ್ದು ಪರಿಶೀಲಿಸಿ ವರದಿ ಪಡೆಯಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !