ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಎ ಮೀಸಲಾತಿ: ಬೆಂಗಳೂರು ಚಲೋ ಇಂದು

Last Updated 20 ಫೆಬ್ರುವರಿ 2021, 3:54 IST
ಅಕ್ಷರ ಗಾತ್ರ

ಕಲಬುರ್ಗಿ: ‘ದೀಕ್ಷ ಪಂಚಮಸಾಲಿ ಸಮಾಜ ಇನ್ನೂ ಹಿಂದುಳಿದಿದ್ದು, ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಅನಿವಾರ್ಯವಾಗಿದೆ. ಇದಕ್ಕಾಗಿ ಸಮಾಜವನ್ನು ಒಗ್ಗೂಡಿಸುವ ಕೆಲಸ ನಡೆಯಬೇಕು’ ಎಂದುಅಖಿಲ ಭಾರತ ಲಿಂಗಾಯತ ದೀಕ್ಷ ಪಂಚಮಸಾಲಿ ಸಮಾಜದ ಜಿಲ್ಲಾ ಯುವ ಘಟಕ ಅಧ್ಯಕ್ಷ ಮಲ್ಲನಗೌಡ ಪಾಟೀಲ ಕುಳಗೇರಾ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ, ಅಖಿಲ ಭಾರತ ಲಿಂಗಾಯತ ದೀಕ್ಷ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಶರಣಬಸಪ್ಪ ಪಪ್ಪಾ ಅವರ ಸನ್ಮಾನ ಹಾಗೂ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ಸಮಾಜಕ್ಕೆಲಭಿಸಬೇಕಾಗಿರುವ 2ಎ ಮೀಸಲಾತಿ, ಲಿಂಗಾಯತ ಸಮಾಜದ ಎಲ್ಲ ಉಪ ಜಾತಿಗಳನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳು ಇನ್ನೂ ಈಡೇರಿಲ್ಲ. ಈಗ ಸಂಘಟಿತರಾಗಬೇಕಾದ ಅನಿವಾರ್ಯ ಇದೆ’ ಎಂದು ಅವರು ಹೇಳಿದರು.

‘ದೀಕ್ಷ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆ ಬೆಂಗಳೂರು ತಲುಪಿದೆ. ಫೆ. 21ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕಾಗಿ ಅಫಜಲಪುರ ತಾಲ್ಲೂಕಿನಿಂದ 25 ಜೀಪ್, ಆಳಂದದಿಂದ 15, ಯಡ್ರಾಮಿಯಿಂದ 18, ಜೇವರ್ಗಿಯಿಂದ 10, ಸೇಡಂದಿಂದ 30 ಜೀಪ್‍ಗಳು ಸೇರಿದಂತೆ ಜಿಲ್ಲೆಯಿಂದ ಸಾವಿರಾರು ಜನರು ಶನಿವಾರ ಬೆಂಗಳೂರು ಚಲೋ ನಡೆಸಲಿದ್ದೇವೆ’ ಎಂದರು.

ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲ್‍ ಹಂಗರಗಾ ಮಾತನಾಡಿ, ‘2ಎ ಮೀಸಲಾತಿಗಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಎಸ್.ಕಾಶಪ್ಪನವರ ಮುನ್ನುಗ್ಗಿದ್ದಾರೆ. ಈ ಹೋರಾಟಕ್ಕೆ ನಾವು ಸನ್ನದ್ಧರಾಗಬೇಕಿದೆ. ಇಲ್ಲದಿದ್ದರೆ ಸಮಾಜಕ್ಕೆ ಉಳಿಗಾಲವಿಲ್ಲ. ಶರಣುಪಪ್ಪಾ ಅವರನ್ನು ಸಮಾಜದ ನೂತನ ಅಧ್ಯಕ್ಷರಾಗಿ ನೇಮಕ ಮಾಡಿದ್ದರಿಂದ ನಮಗೆ ಶಕ್ತಿ ಬಂದಂತಾಗಿದೆ. ಜಿಲ್ಲೆಯಲ್ಲಿ ಸಮಾಜ ಗಟ್ಟಿಗೊಳಿಸೋಣ. ಬೆಂಗಳೂರಿನಲ್ಲಿ 2ಎ ಮೀಸಲಾತಿಗಾಗಿ ನಡೆಯುವ ರ‍್ಯಾಲಿಯಲ್ಲಿ ಜಿಲ್ಲೆಯಿಂದ ಸಾವಿರಾರು ಜನ ಭಾಗವಹಿಸೋಣ’ ಎಂದು ಅವರು ಹೇಳಿದರು.

ಸನ್ಮಾನ ಸ್ವೀಕರಿಸಿದ ಶರಣು ಪಪ್ಪಾ ಮಾತನಾಡಿ, ‘ದೀಕ್ಷ ಪಂಚಮಸಾಲಿ ಸಮಾಜ ಲಿಂಗಾಯತರಿಗೆ ಹಿರಿಯಣ್ಣ ಇದ್ದಂತೆ. ಸಮಾಜ ಸಂಘಟನೆ ಯಾರ ವಿರುದ್ಧವೂ ಅಲ್ಲ. ನಮ್ಮ ಹಕ್ಕು ನಾವು ಪಡೆಯಲು ಹೋರಾಟ ಅನಿವಾರ್ಯವಾಗಿದೆ. 2ಎ ಮೀಸಲಾತಿ ಪಡೆದುಕೊಳ್ಳುವುದರ ಜತೆಗೆ ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುತ್ತೇವೆ’ ಎಂದರು.

ಸಮಾಜದ ಹಿರಿಯ ಮುಖಂಡ ಕಲ್ಯಾಣಪ್ಪ ಪಾಟೀಲ ಮಳಖೇಡ ಮಾತನಾಡಿದರು.ಮುಖಂಡರಾದ ಶಶಿಕಾಂತ ಪಾಟೀಲ ಚಿತ್ತಾಪುರ,ಶಿವಶರಣಪ್ಪ ಮುಕರಂಬಿ, ರಾಜಶೇಖರ ನಾನೂರ, ಕಾಶೀನಾಥ ಮೋತಕಪಲ್ಲಿ, ರಮೇಶ ಪಾಟೀಲ, ಸಾತಪ್ಪ ಪಟ್ಟಣ, ಶರಣಗೌಡ ಪಾಟೀಲ ಸಂಕನೂರ, ಹಣಮಂತರಾಯ ಪಾಟೀಲ, ಜಗನ್ನಾಥ ಮಾಲಿಪಾಟೀಲ ಅವರಾದ, ಸಂತೋಷ ಮಿಟೇಕಾರ, ಚಂದ್ರಶೇಖರ ಬಿಜಾಪುರ, ಜಗನ್ನಾಥ ಪಟ್ಟಣಶೆಟ್ಟಿ, ರಾಜು ಪಿಸ್ತಿ, ಪ್ರಶಾಂತ ಗುಡ್ಡಾ, ಮಹಾಂತೇಶ ಪಾಟೀಲ, ಶರಣು ಕ್ಯಾಮಾ, ಅಮರ ದೇಶಮುಖ, ಶರಣು ಮತ್ತಿಮೂಡ , ಸುರೇಶ ಪಾಟೀಲ ಜೋಗೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT