ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಫಲಿತಾಂಶ: ಜಿಲ್ಲೆಗೆ 27ನೇ ಸ್ಥಾನ

Last Updated 19 ಜೂನ್ 2022, 5:00 IST
ಅಕ್ಷರ ಗಾತ್ರ

ಕಲಬುರಗಿ; ದ್ವಿತೀಯ ಪದವಿಪೂರ್ವ ಫಲಿತಾಂಶ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆಯು ರಾಜ್ಯಕ್ಕೆ 27ನೇ ಸ್ಥಾನ ಗಳಿಸಿದೆ. ಶೇ 59.17ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

2020–21ನೇ ಸಾಲಿನಲ್ಲಿ ಕೋವಿಡ್ ಕಾರಣ ಭೌತಿಕ ತರಗತಿಗಳು ನಡೆದಿರಲಿಲ್ಲ. ಹೀಗಾಗಿ, ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಲಾಯಿತು. ಈ ವರ್ಷ ಪರೀಕ್ಷೆ ಬರೆದ 29,449 ವಿದ್ಯಾರ್ಥಿಗಳ ಪೈಕಿ 15,769 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

15,125 ವಿದ್ಯಾರ್ಥಿಗಳು ಹಾಗೂ 14,324 ವಿದ್ಯಾರ್ಥಿನಿಯರು ಪರೀಕ್ಷೆಗೆ ಬರೆದಿದ್ದು, 7,658 ವಿದ್ಯಾರ್ಥಿಗಳು ಹಾಗೂ 8,111 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಶೇ 56.63ರಷ್ಟು ಫಲಿತಾಂಶದ ಮೂಲಕವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 50.63ರಷ್ಟು ಬಾಲಕರ ಫಲಿತಾಂಶ ಬಂದಿದೆ.

ಗ್ರಾಮೀಣ ಭಾಗದ 5,290 ವಿದ್ಯಾರ್ಥಿಗಳ ಪೈಕಿ 2,915 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ನಗರ ಪ್ರದೇಶದ 24,159 ವಿದ್ಯಾರ್ಥಿಗಳಲ್ಲಿ 12,854 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳ ಫಲಿತಾಂಶ ಶೇ 55.1ರಷ್ಟು ಇದ್ದರೆ, ನಗರದ್ದು ಶೇ 53.21ರಷ್ಟು ಇದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ತೇರ್ಗಡೆಯ ಪ್ರಮಾಣ ಶೇ 1.89ರಷ್ಟು ಹೆಚ್ಚಿದೆ.

ಕಲಾ ವಿಭಾಗದಲ್ಲಿ 14,105 ವಿದ್ಯಾರ್ಥಿಗಳು ‍ಪರೀಕ್ಷೆ ಬರೆದಿದ್ದು, 6,423 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ಇದರಲ್ಲಿ ವಿದ್ಯಾರ್ಥಿನಿಯರ ಪ್ರಮಾಣವೇ ಅಧಿಕವಾಗಿದೆ. ಜೇವರ್ಗಿಯ ಕದಂಬ ಪಿಯು ಕಾಲೇಜು ವಿದ್ಯಾರ್ಥಿ ನಿಂಗಣ್ಣ ಸಿದ್ದಣ್ಣ ಅಗಸರ 593 ಹಾಗೂ ಅಸ್ಫಕ್‌ ದವಲಸಾಬ್ 588 ಅಂಕ ಗಳಿಸಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಅಫಜಲಪುರದ ಶ್ರೀ ಬಿಪಿ ಸೇಡಂ ಪಿಯು ಕಾಲೇಜಿನ ಲಕ್ಷ್ಮಿ ಉಮೇಶ 586, ಡಾ.ಎಪಿಜೆ ಅಬ್ದುಲ್‌ ಕಲಾಂ ಪಿಯು ಕಾಲೇಜಿನ ಬ್ರಹ್ಮಲಿಂಗ್ ಆದೆಪ್ಪ ಹೂಗಾರ ಮತ್ತು ಕಲಬುರಗಿಯ ವಿಜಿ ಮಹಿಳಾ ಪಿಯು ಕಾಲೇಜಿನ ಸ್ವಾತಿ ರವೀಂದ್ರ 583 ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಯ 4,660 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 2,339 ವಿದ್ಯಾರ್ಥಿಗಳು, 2,054 ವಿದ್ಯಾರ್ಥಿನಿಯರು ಕುಳಿತಿದ್ದರು. ಅನುಕ್ರಮವಾಗಿ 1,065 ಮತ್ತು 1,406 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ಒಟ್ಟಾರೆ ಶೇ 53.03ರಷ್ಟು ಫಲಿತಾಂಶ ಬಂದಿದೆ.

ನಗರದ ಸ್ಟೇಷನ್‌ ಬಜಾರ್‌ನ ಗುರುಕುಲ ವಾಣಿಜ್ಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಮೊದಲ 10 ಶ್ರೇಯಾಂಕ ಹೊಂದಿದ್ದಾರೆ. ಅಗ್ರ ಶ್ರೇಣಿಯಲ್ಲಿ ಅಕ್ಸಾ ನಾಜ್ 591, ಕರಣ್ ಶರ್ಮಾ 591, ನೈನಾ ಖೇಮರ್ 589, ರುಚಿತಾ ಅಗರ್ವಾಲ್‌ 589 ಮತ್ತು ಕಾರ್ತಿಕ್ ದೇವಿಂದ್ರಪ್ಪ 588 ಅಂಕಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 10,684 ವಿದ್ಯಾರ್ಥಿಗಳು ಕುಳಿತಿದ್ದು, 12,854 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ಶೇ 64.35ರಷ್ಟು ಫಲಿತಾಂಶ ಬಂದಿದೆ. 12,254 ವಿದ್ಯಾರ್ಥಿಗಳ ಪೈಕಿ 6,147 ವಿದ್ಯಾರ್ಥಿ ತೇರ್ಗಡೆಯಾದರು. 11,905 ವಿದ್ಯಾರ್ಥಿನಿಯರಲ್ಲಿ 6,707 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶ್ರೀಗುರು ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಮಹಮ್ಮದ್ ಕ್ಹಿಜ್ರಿ 596 ಅಂಕಗಳ ಮೂಲಕ ರಾಜ್ಯಕ್ಕೆ 3ನೇ ಹಾಗೂ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ದಿಶಾ ಪಿಯು ಕಾಲೇಜಿನ ಅನ್ನಪೂರ್ಣಾ ಆರ್‌. ಬೆಳ್ಳಿ 591, ಸರ್ವಜ್ಞ ಪಿಯು ಕಾಲೇಜಿನ ರಶ್ಮಿತಾ ಜಿ. ವೆಂಕಟರಾವ 591, ಅಲ್ನೂರು ಪಿಯು ಕಾಲೇಜಿನ ಅಶ್ವಿನಿ ಶಂಕರ್ ಬಿರದಾರ್ 590 ಮತ್ತು ಎಸ್‌ ಬಸವೇಶ್ವರ ರೆಸಿಡೆನ್ಸಿ ಪಿಯು ಕಾಲೇಜಿನ ವಿಜಯಲಕ್ಷ್ಮಿ ಬಸವರಾಜ 589 ಅಂಕ ಗಳಿಸಿದ್ದಾರೆ.

ಮುಂದಿನ ವರ್ಷ 25ನೇ ಸ್ಥಾನದ ಗುರಿ

‘ಈ ವರ್ಷದ ಫಲಿತಾಂಶ ತೃಪ್ತಿಕರವಾಗಿದೆ. ಕಳೆದ ವರ್ಷ 29ನೇ ಸ್ಥಾನದಲ್ಲಿ ಇದ್ದೆವು. ಈಗ 27ನೇ ಸ್ಥಾನ ಬಂದಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ 25ನೇ ಸ್ಥಾನಕ್ಕೆ ತರುವ ಗುರಿ ಇರಿಸಿಕೊಂಡಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ. ಜೂನ್‌ 23ಕ್ಕೆ ಕಾಲೇಜು ಪ್ರಾಂಶುಪಾಲರ ಸಭೆ ಕರೆದು ಎಲ್ಲಿ ತಪ್ಪುಗಳು ಆಗಿವೆಯೋ ಅವನ್ನು ತಿದ್ದಿಕೊಳ್ಳುತ್ತೇವೆ. ಮುಂದಿನ ವರ್ಷ ನಿಗದಿತ ಗುರಿ ಮುಟ್ಟುತ್ತೇವೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮುಳೆಗಾಂವ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT